ಮಹಿಳಾ ಸ್ವಾವಲಂಬನೆಗೆ ಇನ್ನೊಂದು ಹೆಸರು ಬರ್ಗಫ್ರೈ

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಮಹಿಳಾ ಸ್ವಾವಲಂಬನೆಯೇ ಮೂಲ ಉದ್ದೇಶವಾಗಿರುವ ಬರ್ಗಫ್ರೈ ಕಳೆದ ಆರು ವರ್ಷಗಳಿಂದ ಇಲ್ಲಿನ ವಿದ್ಯಾನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಅವಧಾನಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪುರುಷ ಪ್ರಧಾನವಾದ ಹೊಟೇಲ್ ಉದ್ಯಮದಲ್ಲಿ ಮಹಿಳೆಯರು ದಾಪುಗಾಲಿಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಹೆಸರಾಗಿದೆ ಈ ಬರ್ಗಫ್ರೈ ಹೊಟೇಲ್.

ಮಹಿಳಾ ಸ್ವಾವಲಂಬನೆಯೇ ಮೂಲ ಉದ್ದೇಶವಾಗಿರುವ ಬರ್ಗಫ್ರೈ ಕಳೆದ ಆರು ವರ್ಷಗಳಿಂದ ಇಲ್ಲಿನ ವಿದ್ಯಾನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆಯಿಂದ ಸಾಮಗ್ರಿ ತಂದು ಆಹಾರ ತಯಾರಿಸಿ ವಿತರಿಸುವವರೆಗೂ ಮಹಿಳೆಯರು ಹೊಟೇಲ್ ನಡೆಸುತ್ತಾರೆ. ಸಾಮಾನ್ಯ ವ್ಯಕ್ತಿಗಳಿಗೆ ಕೈಗಟಕುವ ಬೆಲೆಯಲ್ಲಿ ಬರ್ಗರ್‌, ಫ್ರೈಸ್, ಪಿಜ್ಜಾ, ವಡಾ ಪಾವ್, ಸೋಡಾ ಸೇರಿದಂತೆ ತಂಪು ಪಾನೀಯಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ಹೊರಗಡೆ ಸಿಗುವ ರಸಾಯನಿಕ ಮಿಶ್ರಿತ ಪಾವ್‌ಗಳ ಬದಲಾಗಿ ತಾವೇ ಶುಚಿತ್ವದಿಂದ ತಯಾರಿಸಿರುವ ಪಾವ್‌ಗಳನ್ನು ಮಾರಾಟ ಮಾಡುತ್ತಾರೆ. ಸುಮಾರು 20 ಕಿಮೀ ದೂರದಿಂದಲೂ ಬಂದು ಜನ ಇಲ್ಲಿನ ತಿಂಡಿಗಳನ್ನು ಸವಿಯುತ್ತಾರೆ.

ದಿನಕ್ಕೆ 7ರಿಂದ 8 ಬಾರಿ ಇಲ್ಲಿ ತಾಜಾ ಆಹಾರ ತಯಾರಿಸಲಾಗುತ್ತದೆ. ವಿದ್ಯಾರ್ಥಿಗಳು, ಯುವಕರು, ಉದ್ಯೋಗಸ್ಥರು ಸೇರಿದಂತೆ ಸುಮಾರು 800-1000 ಜನ ಪ್ರತಿದಿನ ಭೇಟಿ ನೀಡುತ್ತಾರೆ.

8 ಜನ ಮಹಿಳೆಯರೂ ಸೇರಿದಂತೆ ಮಾಲೀಕರು ಕುಟುಂಬದವರೆನ್ನುವ ಭಾವನೆಯಿಂದ ಕೆಲಸ ಮಾಡುತ್ತಾರೆ. ಬರ್ಗರ್‌, ಫ್ರೈಸ್‌ಗಳಿಗೆ ಭಾರತೀಯ ಹಾಗೂ ವಿದೇಶಿ ಶೈಲಿಯನ್ನು ಒಟ್ಟುಗೂಡಿಸಿ ತಮ್ಮದೇ ಆದ ಹೊಸತನವನ್ನು ನೀಡಿದ್ದಾರೆ. ಹೋಟೆಲ್‌ ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆ ಇದ್ದರೂ ಮಹಿಳೆಯರು ನಡೆಸುವ ಬರ್ಗಫ್ರೈಗೆ ಉತ್ತಮ ವ್ಯಾಪಾರವಾಗುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಗೊಂಡ ಬರ್ಗಫ್ರೈ ಬರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 8 ಕುಟುಂಬಗಳ ಪೋಷಣೆಗೆ ಈ ಉದ್ಯಮವೂ ನೆರವಾಗುತ್ತಿರುವುದಂತೂ ಸತ್ಯ.

ಖುಷಿ

ಒಂದೇ ಕುಟುಂಬದವರಂತೆ ನಾವು ಕೆಲಸ ಮಾಡುತ್ತೇವೆ. ನಾವು ತಯಾರಿಸಿದ ತಿಂಡಿ ತಿಂದು ಚೆನ್ನಾಗಿದೆ ಎಂದು ಹೇಳೋದು ನಮಗೆ ಉತ್ಸಾಹ ನೀಡುತ್ತದೆ. ನಮ್ಮಿಂದ ಪ್ರೇರಣೆ ಪಡೆದು ಮಹಿಳೆಯರು ಕೆಲಸ ಮಾಡುವುದು ನೋಡಿ ಖುಷಿಯಾಗುತ್ತದೆ.

- ಶೈಲಜಾ ಪಂಡಿತ್, ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ

Share this article