ಮುಡಾ ಪ್ರಕರಣದಲ್ಲಿ ಸಿಎಂಗೆ ಮತ್ತೊಂದು ಹಿನ್ನಡೆ: ಸಿದ್ದು ವಿರುದ್ಧ ಲೋಕಾ ತನಿಖೆ

KannadaprabhaNewsNetwork | Published : Sep 26, 2024 10:22 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡಿರುವ ಮುಡಾ ನಿವೇಶನ ಹಂಚಿಕೆ ಉರುಳು ಇದೀಗ ಮತ್ತಷ್ಟು ಬಿಗಿಯಾಗಿದ್ದು, ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡಿರುವ ಮುಡಾ ನಿವೇಶನ ಹಂಚಿಕೆ ಉರುಳು ಇದೀಗ ಮತ್ತಷ್ಟು ಬಿಗಿಯಾಗಿದ್ದು, ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ತನಿಖೆಯ ಸಂಕಷ್ಟ ಎದುರಾದಂತಾಗಿದೆ.ಪ್ರಕರಣ ಸಂಬಂಧ ಅಭಿಯೋಜನೆಗೆ ಮತ್ತು ತನಿಖೆಗೆ ನೀಡಿದ ರಾಜ್ಯಪಾಲರ ಕ್ರಮವನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ತನಿಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಈ ಹಿಂದೆ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿದರು. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ ಅವರು, ಮೂರು ತಿಂಗಳೊಳಗೆ ಅಂದರೆ, ಡಿ.24ರೊಳಗಾಗಿ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಸಿಆರ್​ಪಿಸಿ ಸೆಕ್ಷನ್‌ 156(3) ಅಡಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮುಂಬರುವ ಅ.24ಕ್ಕೆ ಮುಂದೂಡಿದರು.

ನ್ಯಾಯಾಲಯದ ಆದೇಶ ತಲುಪಿದ ನಂತರ ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಗೊಳ್ಳಲಿದ್ದಾರೆ. ಗುರುವಾರ ಮೈಸೂರು ಲೋಕಾಯುಕ್ತ ಪೊಲೀಸರ ಕೈಗೆ ಆದೇಶ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಗುರುವಾರ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಪರಿಹಾರ ರೂಪದಲ್ಲಿ ಅಕ್ರಮವಾಗಿ ಸುಮಾರು 56 ಕೋಟಿ ರು. ಮೌಲ್ಯದ 14 ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಇದರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು. ಸಿದ್ದರಾಮಯ್ಯ ಅವರು ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಆ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ತೀರ್ಪನ್ನು ಪ್ರಕಟಿಸಿರಲಿಲ್ಲ. ಮಂಗಳವಾರ ಹೈಕೋರ್ಟ್‌ ತನಿಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿ ತನಿಖೆಗೆ ಆದೇಶಿಸಿದೆ.

ದೂರುದಾರರ ಪರವಾಗಿ ವಕೀಲ ಲಕ್ಷ್ಮೀ ಅಯ್ಯಂಗಾರ್‌ ವಾದ ಮಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಹಾಗೂ ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಮತ್ತು ಈ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪನ್ನು ನ್ಯಾಯಾಲಯದ ಗಮನಕ್ಕೆ ತಂದರು.ಈ ವೇಳೆ ನ್ಯಾಯಾಧೀಶರು ಕಾನೂನು ಪ್ರಕ್ರಿಯೆಯನ್ನು ಹೊಸದಾಗಿ ಜಾರಿಯಾಗಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌‍ಎಸ್‌‍) ಅಡಿ ಅಥವಾ ಈ ಮೊದಲು ಜಾರಿಯಲ್ಲಿದ್ದ ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸಿಸರ್‌(ಸಿಆರ್‌ಪಿಸಿ) ಅಡಿ ಮುಂದುವರೆಸಬೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಈ ವೇಳೆ ಅರ್ಜಿದಾರರ ಪರ ವಕೀಲರು, ಹೊಸದಾಗಿ ಜಾರಿಯಾಗಿರುವ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ವಿಚಾರಣೆ ವೇಳೆ ಕಾನೂನಿನ ಸಂಘರ್ಷ ಎದುರಾದರೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಸದ್ಯಕ್ಕೆ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಸೂಚನೆ ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ವೇಳೆ ನ್ಯಾಯಾಧೀಶರು ಕಲಾಪವನ್ನು ಕೆಲಕಾಲ ಮುಂದೂಡಿದರು.

ಬಳಿಕ ನ್ಯಾಯಾಲಯ ಕಲಾಪ ಮರು ಆರಂಭಗೊಂಡಾಗ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟಿಸಿದರು. ಬಿಎನ್‌ಎಸ್‌‍ಎಸ್‌‍ 2024 ರ ಜು.1 ರಿಂದ ಅನುಷ್ಠಾನಕ್ಕೆ ಬಂದಿದ್ದು, ಅನಂತರ ಘಟಿಸಿದ ಅಪರಾಧಗಳನ್ನು ಹೊಸ ಪದ್ಧತಿಯಡಿ ವಿಚಾರಣೆ ನಡೆಸಬೇಕಾಗುತ್ತದೆ. ಹಳೆಯ ಪ್ರಕರಣ ಆಗಿರುವುದರಿಂದ ಸಿಆರ್‌ಪಿಸಿಯನ್ನೇ ಪಾಲನೆ ಮಾಡಬೇಕು ಎಂಬ ವಾದಗಳು ಇವೆ ಎಂದು ಹೇಳಿ ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಸೂಚಿಸಿದರು. ಹೈಕೋರ್ಟ್‌ ಅಂಶಗಳ ಪ್ರಸ್ತಾಪ: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ನೀಡಿದ ಅಭಿಯೋಜನೆ ಮತ್ತು ತನಿಖೆಗೆ ಅನುಮತಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ತನಿಖೆಗೆ ಆದೇಶ ನೀಡಿದ ಹೈಕೋರ್ಟ್‌ನ ಅಂಶಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಹ ಪ್ರಸ್ತಾಪಿಸಿತು. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು? ಈ ಬಗ್ಗೆ ಸಂಪೂರ್ಣ ತನಿಖೆ ಅಗತ್ಯವಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 7ಸಿ ಅಡಿ ತನಿಖೆ ಅಗತ್ಯತೆ ಪ್ರಸ್ತುತ ಪ್ರಕರಣದಲ್ಲಿ ಕಾಣುತ್ತಿದೆ. ತನಿಖೆಗೆ ಮುಖ್ಯ ಮಂತ್ರಿಗಳು ಹಿಂಜರಿಯಬಾರದು ಎಂಬ ಅಂಶಗಳನ್ನು ನ್ಯಾಯಾಲಯ ಉಲ್ಲೇಖಿಸಿತು.

==

ಯಾವ ಸೆಕ್ಷನ್‌ನಡಿ ತನಿಖೆಗೆ ಆದೇಶ?- ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕೋರ್ಟ್‌ ಸೂಚನೆ- ಪ್ರಾಥಮಿಕ ತನಿಖೆ ಸಂಬಂಧ ತನಿಖೆಗೆ ಪೊಲೀಸರಿಗೆ ಆದೇಶ ನೀಡಲು ಈ ಸೆಕ್ಷನ್‌ನಡಿ ಅಧಿಕಾರವಿದೆ

- ದೂರಿನ ಸತ್ಯಾಸತ್ಯತೆ ತಿಳಿಯಲು ಈ ಸೆಕ್ಷನ್‌ ಅಡಿ ನ್ಯಾಯಾಲಯ ತನಿಖೆಗೆ ಆದೇಶಿಸಬಹುದು- ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಸಂಗತಿಗಳನ್ನು ಆಧರಿಸಿ ತನಿಖೆಗೆ ಆದೇಶ ನೀಡಲಾಗುತ್ತೆ

Share this article