ಪೊನ್ನಂಪೇಟೆ : ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕು ಬೀರುಗ ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಅಯ್ಯಮಾಡ ಮಾದಯ್ಯ (ಬೊಗ್ಗ) (63) ಮೃತರು.
ಬೀರುಗ ಹಾಗೂ ಕುರ್ಚಿ ಭಾಗದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು ವಿವಿಧ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಈ ಬಗ್ಗೆ ಈ ವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಕಾಫಿ, ಬೆಳೆಗಾರರು ಹಾಗೂ ಕಾರ್ಮಿಕರು ಇಲ್ಲಿ ಬದುಕುವುದೇ ಕಷ್ಟವಾಗಿದೆ. ವನ್ಯಪ್ರಾಣಿಗಳ ಉಪಟಳದಿಂದ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
15 ಲಕ್ಷ ರು. ಚೆಕ್ ಹಸ್ತಾಂತರ: ಕಾಡಾನೆ ತುಳಿತಕ್ಕೆ ಮೃತಪಟ್ಟ ಬೀರುಗ ಗ್ರಾಮದ ಅಯ್ಯಮಡ ಮಾದಯ್ಯ ಅವರ ಕುಟುಂಬಕ್ಕೆ ಡಿ.ಎಫ್.ಒ. ಭಾಸ್ಕರ್ 15 ಲಕ್ಷ ರುಪಾಯಿ ಚೆಕ್ ಹತ್ತಾಂತರಿಸಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಎ.ಸಿ.ಎಫ್ ನೆಹರು, ರೈತ ಸಂಘದ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಘಟನಾ ಸ್ಥಳದಲ್ಲಿ ಬೆಳಗ್ಗಿನಿಂದ ಗ್ರಾಮಸ್ಥರು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಹಿರಿಯ ಅಧಿಕಾರಿಗಳು ಬರುವ ವರೆಗೆ ಮೃತದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಆಗಮಿಸಿದ ನಂತರ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿ ನಾಡಿನಿಂದ ಕಾಡಿಗೆ ಆನೆಗಳನ್ನು ಅಟ್ಟುವಂತೆ ತಾಕೀತು ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ಆರಂಭಿಸುವುದಾಗಿ ಒಪ್ಪಿಕೊಂಡ ನಂತರ ಮೃತದೇಹವನ್ನು ಕುಟುಂಬಸ್ಥರು ಪಡೆದುಕೊಂಡರು.
ವ್ಯಕ್ತಿಯನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯಲು ಇಲಾಖೆಗೆ ಮನವಿ ಮಾಡಲಾಗುವುದು. ಈ ಹಿಂದೆ ಶನಿವಾರಸಂತೆಯಲ್ಲಿ ಕಾಡಾನೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈಗಾಗಲೇ ದಾಳಿ ನಡೆಸಿದ ಕಾಡಾನೆ ಸರೆ ಹಿಡಿಯಲು ಅನುಮತಿ ಪಡೆದುಕೊಂಡು ಕಾರ್ಯಾಚರಣೆ ಕೂಡ ನಡೆಯುತ್ತಿದೆ. ಬೀರುಗದಲ್ಲೂ ಕಾರ್ಯಾಚರಣೆ ಮಾಡಲಾಗುವುದು ಎಂದು ಡಿ.ಎಫ್.ಒ. ಭಾಸ್ಕರ್ ತಿಳಿಸಿದರು.