ಸೋಮವಾರ ರಾತ್ರಿ ಪೊಲೀಸ್ ವಾಹನ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯಶ್ ಅಭಿಮಾನಿ ಬಿಂಕದಕಟ್ಟಿ ಗ್ರಾಮದ ನಿಖಿಲ್ ಗೌಡರ (22) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗದಗ: ಸೋಮವಾರ ರಾತ್ರಿ ಪೊಲೀಸ್ ವಾಹನ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯಶ್ ಅಭಿಮಾನಿ ಬಿಂಕದಕಟ್ಟಿ ಗ್ರಾಮದ ನಿಖಿಲ್ ಗೌಡರ (22) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಭಾನುವಾರ ರಾತ್ರಿ ಚಿತ್ರನಟ ಯಶ್ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶವಾಗಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮೂರು ಜನ ಯಶ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ನಟ ಯಶ್ ನೋಡುವ ಭರದಲ್ಲಿ ಮತ್ತೊರ್ವ ಸಾವನ್ನಪ್ಪಿದ್ದು, ಯಶ್ ಹುಟ್ಟು ಹಬ್ಬದಂದೇ ಅವರ 4 ಜನ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ.
ಭಾನುವಾರ ನಿಧನರಾಗಿದ್ದ ತನ್ನ ಅಭಿಮಾನಿಗಳ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ ನಟ ಯಶ್ ಅದೇ ಘಟನೆಯಲ್ಲಿ ಗಾಯಗೊಂಡು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿ ಮಾಡಲು ಗದಗ ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದು, ಅಲ್ಲಿಂದ ಅವರು ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆಯಲ್ಲಿ ಯಶ್ ಅವರ ವಾಹನವನ್ನು ಬೆನ್ನತ್ತಿ ಹೊರಟಿದ್ದ ಸ್ಕೂಟಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಿಖಿಲ್ ಗೌಡರ ಗಂಭೀರವಾಗಿ ಗಾಯಗೊಂಡಿದ್ದ.
ತಕ್ಷಣವೇ ಆತನನ್ನು ಪೊಲೀಸರು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ತಡರಾತ್ರಿಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ನಿಖಿಲ್ ಲಕ್ಷ್ಮೇಶ್ವರದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ಓದುತ್ತಿದ್ದ. ನಿನ್ನೆ ಯಶ್ ನೋಡಲು ಸೂರಣಗಿ ಗ್ರಾಮಕ್ಕೆ ಕೂಡಾ ತೆರಳಿದ್ದ. ಆದರೆ ಅಲ್ಲಿ ಯಶ್ ನೋಡಲು ಆಗಿರಲಿಲ್ಲ, ಯಶ್ ಗದುಗಿಗೆ ಬರುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅವರ ಭೇಟಿಗಾಗಿ ಧಾವಿಸಿ ಬಂದಿದ್ದ. ಮುಳುಗುಂದ ರಸ್ತೆಯ ಪಿರಮಿಡ್ ಕ್ರಾಸ್ ನಲ್ಲಿ ವೇಗವಾಗಿ ಬರುತ್ತಿದ್ದಾಗ ಪೊಲೀಸ್ ವಾಹನಕ್ಕೆ ಆತನ ಸ್ಕೂಟಿ ಡಿಕ್ಕಿ ಹೊಡೆಯಿತು.
ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಕೂಡ ಆಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಖಿಲ್ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತ್ಯ ಸಂಸ್ಕಾರ: ನಿಖಲ್ ಅಂತ್ಯಕ್ರಿಯೆ ಮಂಗಳವಾರ ಬಿಂಕದಕಟ್ಟಿ ಗ್ರಾಮದಲ್ಲಿ ಜರುಗಿತು. ಬಿಂಕದಕಟ್ಟಿ ಕ್ರಾಸ್ ನಿಂದ ತೆರದ ವಾಹನದಲ್ಲಿ ಅಂತಿಮ ಯಾತ್ರೆ ಪ್ರಾರಂಭವಾಗಿ, ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಅಂತಿಮ ಯಾತ್ರೆಯ ನಂತರ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಅಲ್ಲಿಂದ ನಂತರ ಅಂತ್ಯ ಸಂಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.
ನಟ ಯಶ್ ಅವರ ಬೆಂಗಾವಲು ವಾಹನಕ್ಕೆ ನಿಖಿಲ್ ಬೈಕ್ ಡಿಕ್ಕಿಯಾಗಿಲ್ಲ. ಬೇರೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮುನ್ನುಗ್ಗಲು ಚಾನ್ಸೇ ಇಲ್ಲ.
ನಿಖಿಲ್ ಚೇಜ್ ಮಾಡಿಲ್ಲ, ನಾನೂ ಕೂಡಾ ಯಶ್ ಅವರ ಜೊತೆ ವಾಹನದಲ್ಲೇ ಇದ್ದೆ. ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡಿರೋದು ಸಾವಿಗೆ ಕಾರಣವಾಗಿದೆ. ಜನರು ಐಎಸ್ ಐ ಇರುವ ಹೆಲ್ಮೆಟ್ ಹಾಕಬೇಕು ಎಸ್ಪಿ ಬಿ.ಎಸ್. ನೇಮಗೌಡ್ರ ಹೇಳಿದರು.