ಇಂಡಿಯಾ ಕೂಟಕ್ಕೆ ಜೂ.4ರಂದು ಉತ್ತರ: ನರೇಂದ್ರ ಮೋದಿ

KannadaprabhaNewsNetwork | Updated : Mar 19 2024, 11:45 AM IST

ಸಾರಾಂಶ

ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನೇ ತಮ್ಮ ಪ್ರಮುಖ ಅಜೆಂಡಾ ಮಾಡಿಕೊಂಡ ಐಎನ್‌ಡಿಐಎ ಕೂಟ ದೇಶದ ವಿಭಜನೆಗೆ ಮತ್ತೆ ಚಾಲನೆ ನೀಡಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನೇ ತಮ್ಮ ಪ್ರಮುಖ ಅಜೆಂಡಾ ಮಾಡಿಕೊಂಡ ಐಎನ್‌ಡಿಐಎ ಕೂಟ ದೇಶದ ವಿಭಜನೆಗೆ ಮತ್ತೆ ಚಾಲನೆ ನೀಡಿದೆ. 

ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದು, ಇದೀಗ ಹಿಂದೂ ಶಕ್ತಿಯನ್ನು ಮುಗಿಸುವ ಘೋಷಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಐಎನ್‌ಡಿಐಎ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಟಕ್ಕೆ ಜೂನ್ 4ರಂದು ಉತ್ತರ ಸಿಗಲಿದೆ ಎಂದು ಹೇಳಿದರು. 

ನಗರದ ಅಲ್ಲಮ ಪ್ರಭು ಮೈದಾನದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ‘ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ, ‘ಶಕ್ತಿ ಸ್ವರೋಪಿಣಿ ಸಿಗಂದೂರೇಶ್ವರಿ ದೇವಿಗೆ ನನ್ನ ಪ್ರಣಾಮಗಳು’ ಎಂದು ಹೇಳಿದರು.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಹಿಂದೂ ಶಕ್ತಿಯನ್ನು ಮುಗಿಸುವ ಘೋಷಣೆ ಮಾಡಿದ್ದಾರೆ. ಅವರು ಶಕ್ತಿಯನ್ನು ಮುಗಿಸುತ್ತಾರೆ ಎಂದರೆ ಶಕ್ತಿಯ ವಿನಾಶದ ಕರೆ ಅದು. 

ಅವರಿಗೆ ಭಾರತ ಮಾತೆಯ ಶಕ್ತಿ ಕಣ್ಣು ಕುಕ್ಕುತಿದೆ. ಆದರೆ, ನಾವು ಶಕ್ತಿಯ ಉಪಾಸಕರು. ನಾನು ಅದರ ಆರಾಧನೆಗೆ ಕರೆ ಕೊಡುತ್ತೇನೆ ಎಂದರು.

ಬಾಳಾ ಠಾಕ್ರೆ ಆತ್ಮಕ್ಕೆ ಎಷ್ಟು ದುಃಖವಾಗಿರಬೇಕು?: ಶಿವಾಜಿ ಪಾರ್ಕ್‌ನಲ್ಲಿ ಇವರ ಮಾತನ್ನು ಕೇಳಿಸಿಕೊಂಡ ಶಕ್ತಿ ಆರಾಧಕರಾದ ಬಾಳಾ ಸಾಹೇಬ್ ಠಾಕ್ರೆ ಆತ್ಮಕ್ಕೆ ಎಷ್ಟು ದುಃಖವಾಗಿರಬಹುದು? ಎಂದು ಪ್ರಶ್ನಿಸಿದ ಮೋದಿ ಅಲ್ಲಿನ ಪ್ರತಿ ಮಗು ಜೈ ಶಿವಾಜಿ ಜೈ ಭವಾನಿ ಎನ್ನುತ್ತದೆ. ಅದನ್ನು ಸಹಿಸಲು ಈ ಕೂಟಕ್ಕೆ ಸಾಧ್ಯವಾಗುತ್ತಿಲ್ಲ. 

ಮೈತ್ರಿಕೂಟಕ್ಕೆ ನಾರಿ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅರಗಿಸಿಕೊಳ್ಳಲು ಆಗುತ್ತಿಲ್ಲ ಮೈತ್ರಿಕೂಟದ ಜನ ಈ ಶಕ್ತಿಯನ್ನು ಹೊಸಕಿ ಹಾಕಲು ಹವಣಿಸುತ್ತಿದೆ. 

ಅವರಿಗೆ ಒಬ್ಬ ಅಕ್ಕ, ಒಬ್ಬ ತಾಯಿ, ಒಬ್ಬ ತಂಗಿ ಸೇರಿ ಎಲ್ಲ ಹೆಣ್ಣು ಮಕ್ಕಳು ಉತ್ತರ ನೀಡುತ್ತಾರೆ. ಶಕ್ತಿಯ ಕುರಿತು ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಜೂ. ೪ ರಂದು ಉತ್ತರ ಸಿಗುತ್ತದೆ ಎಂದು ಮೋದಿ ಹೇಳಿದರು.

ಮಹಿಳೆಯರು ಸುರಕ್ಷತೆಯ ಕೋಟೆ ನಿರ್ಮಿಸಿದ್ದಾರೆ: ನಾರಿಶಕ್ತಿ ಮೋದಿಯ ನಿಶ್ಯಬ್ದ ಮತಗಳು. ಅವರು ಮಹಿಳೆಯರಲ್ಲ, ಅವರು ದೇವತಾ ಶಕ್ತಿಯ ಸ್ವರೂಪಿಗಳು. ಅವರು ಸುರಕ್ಷತೆಯ ಕೋಟೆ ನಿರ್ಮಿಸಿದ್ದಾರೆ. 

ಹೀಗಾಗಿ ನಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದೇವೆ. ಚಂದ್ರಯಾನ ಇಳಿದ ಸ್ಥಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಹೆಸರು ಇಟ್ಟಿದ್ದೇವೆ. ಅದೇ ಭಾವನೆಯೊಂದಿಗೆ ಭಾರತ ಮಾತೆಯನ್ನು ಪೂಜಿಸುತ್ತೇವೆ. 

ಭಾರತಮಾತೆಯ ಶಕ್ತಿ ಇನ್ನಷ್ಟು ಹೆಚ್ಚಬೇಕು. ರಾಷ್ಟ್ರಕವಿ ತಮ್ಮ ಕಾವ್ಯದಲ್ಲಿ ಸ್ತ್ರೀಯರನ್ನು ಮಂತ್ರ ಕಣ, ತಾಯಿ ಕಣ, ಶಕ್ತಿ ಕಣ ಎಂದು ಬಣ್ಣಿಸಿದ್ದಾರೆ ಎಂದು ಮೋದಿ ಹೇಳಿದರು.

ಎಲ್ಲೆಡೆ ಬಿಜೆಪಿಗೆ ದೊರಕುತ್ತಿರುವ ಅಪಾರ ಬೆಂಬಲದಿಂದಾಗಿ ಐಎನ್‌ ಡಿಐಎ ಮೈತ್ರಿಕೂಟದ ನಿದ್ದೆ ಹಾರಿಹೋಗಿದೆ ಎಂದು ಛೇಡಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೂಲೆ ಮೂಲೆಯಲ್ಲೂ ಬಿಜೆಪಿಗೆ ಅಪಾರವಾದ ಬೆಂಬಲ ದೊರಕುತ್ತಿದೆ ಎಂದರು.

ಭ್ರಷ್ಟಾಚಾರ, ಒಲೈಕೆ ರಾಜಕಾರಣದಿಂದ ತುಂಬಿ ಮುಳುಗಿರುವ ಐಎನ್‌ಡಿಐಎ ಒಕ್ಕೂಟಕ್ಕೆ ನಿದ್ದೆ ಹಾರಿ ಹೋಗಿದೆ ಎಂದು ಚೇಡಿಸಿದ ಮೋದಿ, ಕಾಂಗ್ರೆಸ್‌ ಗೆ ಬೆಳಗಿನಿಂದ ಸಂಜೆಯವರೆಗೂ ಸುಳ್ಳು ಹೇಳುವುದೇ ಕೆಲಸವಾಗಿದೆ. 

ಒಂದು ಸುಳ್ಳು ಮುಚ್ಚಲು ಮತ್ತೊಂದು ಸುಳ್ಳು ಹೇಳುವುದು, ಹೋದಲ್ಲಿ ಬಂದಲ್ಲಿ ಸುಳ್ಳು ಹೇಳುವುದೇ ಕಾಂಗ್ರೆಸ್ ಕೆಲಸವಾಗಿದೆ. ಸಿಕ್ಕಿಬಿದ್ದಾಗ ತಮ್ಮ ತಪ್ಪನ್ನು ಬೇರೆ ಒಬ್ಬರ ಮೇಲೆ ಹೊರಿಸುವುದು ಕಾಂಗ್ರೆಸ್ ಕೆಲಸ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಒಮ್ಮೆ ಕೇಂದ್ರ ಸರ್ಕಾರವನ್ನು ದೂಷಿಸಿದರೆ ಮತ್ತೊಮ್ಮೆ ಮೋದಿಯನ್ನು ದೋಷಿಸುವುದೇ ಕೆಲಸವಾಗಿದೆ ಎಂದರು.

ದೆಹಲಿಯಲ್ಲಿ ಕಲೆಕ್ಷನ್‌ ಮಿನಿಸ್ಟರ್: ರಾಜ್ಯದಲ್ಲಿ ಕಾಂಗ್ರೆಸ್ ಗುರಿ ಜನತೆಯನ್ನು ಲೂಟಿ ಮಾಡುವುದಾಗಿದೆ. ತಮ್ಮ ಜೇಬನ್ನು ತುಂಬಿಸಿಕೊಳ್ಳುವುದಾಗಿದೆ. ಸರ್ಕಾರವನ್ನು ನಡೆಸಲು ಹಣವೇ ಇಲ್ಲದಷ್ಟು ಲೂಟಿ ಮಾಡಿದ್ದಾರೆ. 

ಕೇಂದ್ರ ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಎಟಿಎಂ ಆಗಿ ಮಾಡಿ ಮಾಡಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ದೆಹಲಿಯಲ್ಲಿ ಓರ್ವ ಕಲೆಕ್ಷನ್ ಮಿನಿಸ್ಟರ್ ಇದ್ದಾರೆ ಎಂದು ಛೇಡಿಸಿದರು.

ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ. ಈ ಕಾಂಗ್ರೆಸ್ಸಿಗರು ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಮುಂದುವರಿಸುತ್ತಿದ್ದಾರೆ. ಬ್ರಿಟಿಷರ ವಾರಸುದಾರರಂತಿದ್ದಾರೆ. 

ಮೊದಲು ದೇಶವನ್ನು ಒಡೆದರು. ಧರ್ಮ, ಜಾತಿಯನ್ನು ಒಡೆದರು. ಈಗ ಮತ್ತೆ ದೇಶವನ್ನು ಒಡೆಯುವ ಅಪಾಯಕಾರಿ ಆಟಕ್ಕೆ ಇಳಿದಿದ್ದಾರೆ. ಕರ್ನಾಟಕದ ಸಂಸದರು ಒಬ್ಬರು ಇದೇ ರೀತಿ ಹೇಳಿಕೆ ನೀಡಿದ್ದರು. ಇಂಥವರನ್ನು ಹುಡುಕಿ ಹುಡುಕಿ ಸ್ವಚ್ಛ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಸೂಪರ್‌, ಶಾಡೋ ಸಿಎಂ: ರಾಜ್ಯದಲ್ಲಿ ಸೂಪರ್ ಸಿಎಂ, ಶಾಡೋ ಸಿಎಂಗಳು ಇದ್ದಾರೆ. ಜೊತೆಗೆ ಭವಿಷ್ಯದಲ್ಲಿ ಸಿಎಂ ಆಗುವ ಕನಸು ಕಾಣುವವರು ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ವಿರುದ್ಧ ಕರ್ನಾಟಕದಲ್ಲಿ ಜನರ ಆಕ್ರೋಶ ನನಗೆ ಕಾಣುತ್ತಿದೆ. 

ಇದು ಈಗ ಬಿಜೆಪಿ ಪರವಾಗಿ ಮತವಾಗಲಿದೆ. ಕರ್ನಾಟಕದ ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಿಸಿ ಕೊಡಬೇಕು. ವಿಕಸಿತ ಭಾರತಕ್ಕಾಗಿ, ಬಡವರ ಕಲ್ಯಾಣ, ದೇಶದ ಅಭಿವೃದ್ಧಿಗಾಗಿ ಬಿಜೆಪಿ 400 ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. 

ಇದೇ ನಮ್ಮ ಗುರಿ ಎಂದರು. ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳಾದ ಶಿವಮೊಗ್ಗದ ಬಿ. ವೆ. ರಾಘವೇಂದ್ರ, ದಾವಣಗೆರೆಯ ಗಾಯತ್ರಿ ಸಿದ್ದೇಶ್ವರ, ಮಂಗಳೂರಿನ ಬ್ರಿಜೇಶ್‌ ಚೌಟಾಲಾ, ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಕೋಟಾ ಶ್ರೀನಿವಾಸ ಪೂಜಾರಿ ಹೆಸರು ಹೇಳಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಪ್ರಧಾನಿ ಮೋದಿಗೆ ಹಾರ, ಶಾಲು, ಪೇಟ ಹೊಂದಿಸಿ ಗೌರವಿಸಿದರೆ, ಮಹಿಳೆಯರ ತಂಡ ಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಿತು.

ವೇದಿಕೆಯಲ್ಲಿ ಬಿಜೆಪಿ ಕೇಂದ್ರ ಸಂಘಟನಾ ಕಾರ್ಯದರ್ಶಿ ರಾಧಾಮೋಹನ್‌ ಅಗರ್‌ ವಾಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ, ಬಿ. ವೈ. ರಾಘವೇಂದ್ರ, ಹರತಾಳು ಹಾಲಪ್ಪ, ಚನ್ನಬಸಪ್ಪ, ಭಾನುಪ್ರಕಾಶ್‌, ಸಿ.ಟಿ.ರವಿ, ಆರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಶಾರದಾ ಪೂರ್ಯಾ ನಾಯ್ಕ್ ಮಾತನಾಡಿದರು. 

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್, ಶಾಸಕ ಸುನೀಲ್, ಭಾರತಿ ಶೆಟ್ಟಿ, ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪ, ಮಾಜಿ ಶಾಸಕ ಜೆಡಿಎಸ್‌ನ ಕೆ.ಬಿ. ಪ್ರಸನ್ನಕುಮಾರ್‌, ವಿಧಾನಪರಿಷತ್ತು ಸದಸ್ಯ ಡಿ.ಎಸ್‌. ಅರುಣ್‌, ರುದ್ರೇಗೌಡರು, ಮಾಜಿ ಶಾಸಕ ಕೆ. ಬಿ. ಅಶೋಕ್‌ ಕುಮಾರ್, ಗಿರೀಶ್‌ ಪಟೇಲ್‌, ಪದ್ಮನಾಭ್‌, ಧನಂಜಯ ಸರ್ಜಿ ಮತ್ತಿತರರು ಇದ್ದರು.

ಮುಂಭಾಗದಿಂದ ಜನರ ನಡುವೆ ವೇದಿಕೆ ಪ್ರವೇಶಿಸಿದ ಮೋದಿ ಸಾಮಾನ್ಯವಾಗಿ ವೇದಿಕೆಯ ಹಿಂಬದಿಯಿಂದ ಪ್ರವೇಶ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವೇದಿಕೆಯ ಮುಂಭಾಗದಿಂದ ಜನರ ಮಧ್ಯ ಭಾಗದ ಮೂಲಕ ವೇದಿಕೆಗೆ ಪ್ರವೇಶ ನೀಡಿದರು.

ಸೋಗಾನೆಯಲ್ಲಿರುವ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ನಗರದ ಅಲ್ಲಮಪ್ರಭು ಮೈದಾನಕ್ಕೆ ಆಗಮಿಸಿದರು. ಜನರ ಮಧ್ಯ ಭಾಗದಲ್ಲಿ ಎರಡೂ ಬದಿ ಬ್ಯಾರಿಕೇಡ್‌ ಅಳವಡಿಸಿ ಮಧ್ಯ ಭಾಗದಲ್ಲಿ ಹಸಿರು ಹಾಸು ಹಾಸಿದ್ದ ಮಾರ್ಗದಲ್ಲಿ ಸುಮಾರು 300 ಮೀಟರ್‌ ನಷ್ಟು ದೂರ ತೆರೆದ ಜೀಪಿನಲ್ಲಿ ಜನರಿಗೆ ಕೈ ಮುಗಿಯುತ್ತಾ ಆಗಮಿಸಿದರು. 

ಬಹುತೇಕರು ಇದನ್ನು ನಿರೀಕ್ಷಿಸಿರಲಿಲ್ಲ. ಏಕಾಏಕಿ ತಮ್ಮ ನಡುವೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ ಮೋದಿ ಮೋದಿ ಎಂದು ಹರ್ಷದ್ಘೋರ ಮಾಡಿ ಸ್ವಾಗತಿಸಿದರು. ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದರು.

ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಮತ್ತು ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಪ್ರಧಾನಿಗೆ ಸಾಥ್‌ ನೀಡಿದರು.

ನಿರೀಕ್ಷೆಯಂತೆ ಈಶ್ವರಪ್ಪ ಗೈರು

ನಗರದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಗೈರು ಹಾಜರಾದರು.

ಕೊನೆಯ ಗಳಿಗೆಯವರೆಗೂ ನೆರೆದಿದ್ದ ಜನರು ಮತ್ತು ಬಿಜೆಪಿ ನಾಯಕರು ಈಶ್ವರಪ್ಪನವರು ವೇದಿಕೆಗೆ ಆಗಮಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಮೋದಿ ಆಗಮಿಸಿದ ಬಳಿಕ ಈಶ್ವರಪ್ಪ ಗೈರು ಖಚಿತವಾಯಿತು.

ಆದರೆ ಕಳೆದ ಶುಕ್ರವಾರ ಈಶ್ವರಪ್ಪ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಭಾಗಿಯಾಗಿದ್ದರು.

ಕುಮಾರ್ ಬಂಗಾರಪ್ಪ ದರ್ಶನವಿಧಾನಸಭಾ ಚುನಾವಣೆಯ ಬಳಿಕ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ಹಾಜರಾಗದ, ಪಕ್ಷದ ವೇದಿಕೆಯಲ್ಲಿ ಕಾಣಿಸದ ಕುಮಾರ್‌ ಬಂಗಾರಪ್ಪ ಅವರು ದಿಢೀರನೆ ವೇದಿಕೆಯಲ್ಲಿ ಕಾಣಿಸಿಕೊಂಡರು.

3ನೇ ಬಾರಿ ಶಿವಮೊಗ್ಗಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಮೂರನೇ ಬಾರಿಯಾಗಿ ಆಗಮಿಸಿದ್ದಾರೆ. ಇಂದಿನ ಭೇಟಿ ಸೇರಿದಂತೆ ಎರಡು ಬಾರಿ ಚುನಾವಣಾ ಪ್ರಚಾರ ಸಭೆಗಾಗಿ ಆಗಮಿಸಿದರೆ, ಇನ್ನೊಮ್ಮೆ ಇಲ್ಲಿನ ವಿಮಾನ ನಿಲ್ದಾಣಕ್ಕಾಗಿ ಆಗಮಿಸಿದ್ದರು.

Share this article