ಸಂವಿಧಾನ ವಿರೋಧಿಗಳು 3 ರಾಜ್ಯಗಳಲ್ಲಿ ಮತ್ತೆ ಆಯ್ಕೆ: ಮಾವಳ್ಳಿ ಶಂಕರ್

KannadaprabhaNewsNetwork | Published : Dec 4, 2023 1:30 AM

ಸಾರಾಂಶ

ಸಂವಿಧಾನ ವಿರೋಧಿಗಳು 3 ರಾಜ್ಯಗಳಲ್ಲಿ ಮತ್ತೆ ಆಯ್ಕೆ: ಮಾವಳ್ಳಿ ಶಂಕರ್

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದಲಿತ- ಶೋಷಿತರ ಹಕ್ಕುಗಳಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಜಗೃತಿ ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ದೇಶದ ನಾಲ್ಕು ರಾಜ್ಯಗಳ ಚುನಾವಣೆಗಳ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಮತ್ತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು ಆಯ್ಕೆಯಾಗಿರುವುದು ಈ ದೇಶಕ್ಕೆ ದೊಡ್ಡ ಕೇಡುಗಾಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದರು. ನಗರದ ಆಜಾದ್ ಪಾರ್ಕ್‌ ವೃತ್ತದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಭಾನುವಾರ ನಡೆದ ದಲಿತ- ಶೋಷಿತರ ಹಕ್ಕುಗಳಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಜಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ದರು. ಉತ್ತರದ ಹಿಂದಿ ಭಾಷಿಗರು, ಬ್ರಾಹ್ಮಣ್ಯವನ್ನ, ಬಂಡವಾಳ ಶಾಹಿಗಳನ್ನ ಪ್ರೋತ್ಸಾಹಿಸುತ್ತಿರು ತ್ತಾರೆ. ಆ ಶಕ್ತಿಗಳನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸ ದಕ್ಷಿಣ ಭಾರತೀಯರಾದ ನಾವು ಮಾಡುತ್ತಿ ದ್ದೇವೆ. ಈ ಕೋಮುವಾದಿಗಳ ಆಟ ದಕ್ಷಿಣದಲ್ಲಿ ನಡೆಯಲ್ಲ ಎಂಬುದನ್ನು ಈ ರಾಜ್ಯದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಕಳೆದ ಚುನಾವಣೆಯಲ್ಲಿ ತೋರಿಸಿದ್ದಾರೆ ಎಂದರು. ಕುವೆಂಪು ಇಡೀ ರಾಜ್ಯವನ್ನ ಶಾಂತಿಯ ಬೀಡನ್ನಾಗಿಸ ಬೇಕೆಂಬ ಕನಸ್ಸು ಕಂಡಿದ್ದರು. ಆ ಶಾಂತಿ ತೋಟಕ್ಕೆ ಬೆಂಕಿ ಹಚ್ಚಿದಂತವರು ಕೋಮುವಾದಿಗಳು. ಈ ರಾಜ್ಯ ಆಳುತ್ತಿದ್ದರ ಕಾಲಘಟ್ಟದಲ್ಲಿ ಆ ಶಕ್ತಿ ಗಳು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದೆಂದು ದಲಿತ , ಮುಸ್ಲಿಂ, ಕ್ರೈಸ್ತ ಮತ್ತು ಹಿಂದುಳಿದ ಸಮುದಾಯಗಳ ಐಕ್ಯತೆಯಿಂದ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಮರೆಯಬಾರದು ಎಂದರು. ಈ ಸಮುದಾಯಗಳ ಏಳಿಗೆಗೆ ಅವರ ಹಕ್ಕು, ಬದ್ಧತೆ ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡ ಬೇಕು ಎಂದು ಆಗ್ರಹಿಸಿ, ಈ ದೇಶದ ಸಂವಿಧಾನ ರಕ್ಷಿಸುವ ಜವಾಬ್ದಾರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಹೆಗಲಿಗೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು. ಈ ನಾಡಿನ ಜನತೆಗೆ ರಾಜಕೀಯ ಸ್ವಾತಂತ್ರ್ಯ ಒಂದೇ ಸಾಕಾಗುವುದಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನ ಕೊಡದಿದ್ದರೆ. ಈ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯದ ಈ ಸಮಾಜ ಹೀಗೆಯೇ ಮುಂದುವರಿದರೆ, ಶೋಷಿತ ಸಮುದಾಯಗಳಿಂದ ಒಂದಲ್ಲಾ ಒಂದು ದಿನ ಈ ಪ್ರಜಾ ಪ್ರಭುತ್ವವನ್ನೇ ಸ್ಪೋಟಿಸುವ ಕೆಲಸ ಆಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಈ ದೇಶದ ಸಂವಿಧಾನ ಬದಲು ಮಾಡುತ್ತೇವೆಂದು ಹೇಳುತ್ತಿದ್ದವರು, ಇದೀಗ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಸ್ವಾತಂತ್ರ್ಯದ ನಂತರ ನೆಹರು ಆಡಳಿತದಲ್ಲಿ ದೇಶ ಕೈಗಾರಿಕರಣದತ್ತ ಮುಖ ಮಾಡಿತ್ತು. ದೊಡ್ಡ ದೊಡ್ಡ ಉದ್ದಿಮೆಗಳು ಆ ಸಂದರ್ಭದಲ್ಲಿ ಆರಂಭವಾದವೂ, ಉನ್ನತ ಶಿಕ್ಷಣ ಸಂಸ್ಥೆಗಳು ಬಂದವು. ಆದರೆ, 1990 ರ ನಂತರ ಬಂದ ಕೆಲ ಸರ್ಕಾರ ಬೇರೆ ದಿಕ್ಕನ್ನು ಹಿಡಿಯಿತು. ಇಂದು ರಾಷ್ಟ್ರೀಕರಣಕ್ಕೆ ಬದಲಾಗಿ ಖಾಸಗೀ ಕರಣವೇ ಮದ್ದು ಎಂದು ಹೇಳಿ, ಕೈಗಾರಿಕೆ, ಬ್ಯಾಂಕ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸಂಪೂರ್ಣವಾಗಿ ಖಾಸಗಿ ಮಡಿಲಿಗೆ ಒಪ್ಪಿಸುವ ಕೆಲಸ ಕೇಂದ್ರದ ಮೋದಿ ಸರ್ಕಾರ ಅತ್ಯಂತ ವೇಗವಾಗಿ ಮಾಡುತ್ತಿದೆ ಎಂದು ಆರೋಪಿಸಿದರು. ಯುವಕರು, ವಿದ್ಯಾರ್ಥಿಗಳು ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಾಡಿನಲ್ಲಿ ಶಾಂತಿ ಕಾಪಾಡುವ ವಾತಾವರಣವಿತ್ತು. ಆದರೆ, 2014 ರ ನಂತರ ದೇಶದಲ್ಲಿ ಸಂಪೂರ್ಣ ಕೋಮು ವಾದಿಗಳ ಮತ್ತು ಬ್ರಾಹ್ಮಣ್ಯದ ಪರ ನಿಲುವುಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ದೇಶದ ಸಂವಿಧಾನದ ಆಶಯವಾದ ತಳ ಸಮುದಾಯಗಳನ್ನು ಸಬಲೀಕರಣ ಗೊಳಿಸಲು ಸಂವಿಧಾನದಲ್ಲಿ ಮೀಸಲಾತಿ ತರಲಾಯಿತು. ಆದರೆ, ಇದೀಗ ಮೀಸಲಾತಿ ನಿರ್ನಾಮಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ದಲಿತ ಸಂಘಟನೆಗಳು ಬಲಗೊಳ್ಳಬೇಕು, ಸಾಹಿತಿ ದೇವನೂರು ಮಹಾದೇವರ ಮುಂದಾಳತ್ವದಲ್ಲಿ ದಲಿತ ಸಂಘಟನೆಗಳೆಲ್ಲ ಒಗ್ಗೂಡಿ, ಒಂದು ವೇದಿಕೆಗೆ ಬಂದು ಸಂಘಟನಾ ಶಕ್ತಿ ತೋರಿಸ ಬೇಕಾಗಿದೆ ಎಂದು ಸಲಹೆ ನೀಡಿದರು. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಸಂವಿಧಾನಕ್ಕೆ ಅಪಾಯ, ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಭಟಿಸದಿದ್ದರೆ ನಾವೆಲ್ಲ ಸತ್ತು ಹೋದಂತೆ. ದಲಿತ ಸಂಘಟನೆ ಗಳು ಪ್ರತಿ ಶಾಸಕರ ಮನೆ ಮುಂದೆ ಧರಣಿ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು. ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಮಹೇಂದ್ರಸ್ವಾಮಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್‌ ಬಸಪ್ಪ, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಕೋಟೆ ಜಗದೀಶ್, ಜಿಲ್ಲಾ ಸಂಘಟನಾ ಸಂಚಾಲಕ ಬಿ.ಕೆ. ವಸಂತಕುಮಾರ್, ರಾಮಚಂದ್ರಪ್ಪ, ಎಲ್.ಚಂದ್ರು, ಚಂದ್ರಶೇಖರ್ ಪುರ, ಸಂತೋಷ್ ಲಕ್ಯಾ, ಬೇಲೂರು ಲಕ್ಷ್ಮಣ್, ಹುಣಸೆಮಕ್ಕಿ ಲಕ್ಷ್ಮಣ್, ಹಾಲೇಶಪ್ಪ, ನಾಗರಾಜ, ಸಂದೇಶ, ವೆಂಕಟರಾಮಯ್ಯ, ರುದ್ರಸ್ವಾಮಿ ಉಪಸ್ಥಿತರಿದ್ದರು. 3 ಕೆಸಿಕೆಎಂ 1ಚಿಕ್ಕಮಗಳೂರಿನ ಆಜಾದ್ ಪಾರ್ಕ್‌ ವೃತ್ತದಲ್ಲಿ ಭಾನುವಾರ ನಡೆದ ದಲಿತ- ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ ಜಿಲ್ಲಾ ಮಟ್ಟದ ಜಗೃತಿ ಸಮಾವೇಶವನ್ನು ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಮೋಟಮ್ಮ, ಬಿ.ಬಿ. ನಿಂಗಯ್ಯ ಇದ್ದರು.

Share this article