ಮಾದಕ ವಸ್ತುಗಳಿಗೆ ಬಲಿಯಾಗದಿರಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಯುವ ಜನಾಂಗ ಫ್ಯಾಶನ್ ಮತ್ತು ಮೋಜು ಮಸ್ತಿಯ ಹೆಸರಲ್ಲಿ ಮಾದಕ ವಸ್ತುಗಳ ಸೇವಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಯುವ ಜನಾಂಗ ಫ್ಯಾಶನ್ ಮತ್ತು ಮೋಜು ಮಸ್ತಿಯ ಹೆಸರಲ್ಲಿ ಮಾದಕ ವಸ್ತುಗಳ ಸೇವಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ದುಶ್ಚಟಗಳಿಂದ ದೂರ ಉಳಿದು ಉತ್ತಮ ಆರೋಗ್ಯ ಹೊಂದಬೇಕು ಎಂದು ಅಥಣಿ ವಲಯದ ಡಿವೈಎಸ್ಪಿ ಶ್ರೀಪಾದ ಜಲ್ದೆ ಹೇಳಿದರು.

ಪಟ್ಟಣದಲ್ಲಿ ಅಥಣಿ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಸಿಗರೇಟು, ಅಲ್ಕೋಹಾಲ್ ಮತ್ತು ಡ್ರಗ್ಸ್ ನಂತಹ ಮಾದಕ ವಸ್ತುಗಳ ಸೇವನೆಗೆ ಅಂಟಿಕೊಳ್ಳುತ್ತಿದ್ದಾರೆ. ಪ್ರಾರಂಭದಲ್ಲಿ ಅವು ನಿಮಗೆ ಖುಷಿ ಕೊಡಬಹುದು. ಆದರೆ, ನಂತರ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವಿಸಿ ಬೈಕ್‌, ವಾಹಗಳನ್ನು ಓಡಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಥಣಿ ಪಟ್ಟಣದಲ್ಲೇ ಕಳೆದ ಎರಡು ತಿಂಗಳಲ್ಲಿ ಎಂಟು ಅಪಘಾತಗಳಾಗಿ ಹತ್ತಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದರು. ಪಿಎಸ್ಐ ಶಿವಾನಂದ ಕಾರಜೋಳ ಮಾತನಾಡಿ ಮಾದಕ ದ್ರವ್ಯ ಮತ್ತು ವಸ್ತುಗಳ ಸೇವನೆಯಿಂದ ಒತ್ತಡ, ಖಿನ್ನತೆ, ತಲೆನೋವು ಅಥವಾ ಮೈಗ್ರೇನ್‌ನಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಚೆಗೆ ವೈದ್ಯಕೀಯ ವರದಿಗಳ ಪ್ರಕಾರ ಕ್ಯಾನ್ಸರ್ ನಂತಹ ಭಯಾನಕ ರೋಗಗಳು ಈ ಮಾದಕ ವಸ್ತುಗಳಿಂದಲೇ ಹೆಚ್ಚುತ್ತಿವೆ. ಆದ್ದರಿಂದ ಯುವಕರು ಎಚ್ಚರಿಕೆ ವಹಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕೆಂದು ಎಂದರು.

ಈ ವೇಳೆ ಅಪರಾಧ ವಿಭಾಗದ ಪಿಎಸ್ಐ ರಾಕೇಶ್ ಬಗಲಿ, ಹೆಚ್ಚುವರಿ ಪಿಎಸ್ಐ ಸಿ.ಬಿ ಸಾಗನೂರ, ಎಎಸ್ಐ ಕೆ.ನಾಗರಾಜ, ಪಟ್ಟಣದ ಕೆ.ಎ ಲೋಕಾಪುರ ಮಹಾವಿದ್ಯಾಲಯದ ಎನ್ಎಸ್ಎಸ್ ಅಧಿಕಾರಿ ನಿಲೇಶ ಝರೆ ಹಾಗೂ ಶಿಬಿರಾರ್ಥಿ ವಿದ್ಯಾರ್ಥಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.

ಅಥಣಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಆರಂಭವಾದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ವೃತ್ತಗಳಲ್ಲಿ ಸಂಚರಿಸಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸಮಾರೋಪಗೊಂಡಿತು.

Share this article