ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದ್ದು, ರೈತ ಪರವಾದ ನಾನಾ ಯೋಜನೆಗಳನ್ನು ಕಾಂಗ್ರೆಸ್ ರದ್ದುಪಡಿಸಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಾರಿ ತಂದಿರುವ ಪಿಎಂ ಕಿಸಾನ್ ಯೋಜನೆಗೆ ಹಿಂದೆ ಬಿಎಸ್‌ವೈ ಸರ್ಕಾರವು ₹೪ ಸಾವಿರ ಸೇರಿಸಿ ಸಹಾಯಧನ ಕೊಡುತ್ತಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ₹೪ ಸಾವಿರ ರದ್ದುಪಡಿಸಿದೆ. ಹಿಂದೆ ರೈತರ ಪಂಪಸೆಟ್‌ಗೆ ೧೦ ಎಚ್‌ಪಿ ವರೆಗೂ ಉಚಿತ ವಿದ್ಯುತ್ ಪೂರೈಸುತ್ತಿತ್ತು. ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಿತ್ತು. ಈಗ ರೈತರ ವಿದ್ಯುತ್ ಪೂರೈಕೆಯ ಸಬ್ಸಿಡಿ ಯೋಜನೆಯನ್ನೂ ಕಾಂಗ್ರೆಸ್ ರದ್ದುಪಡಿಸಿದೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡುವ ಯೋಜನೆ ಬಿಎಸ್‌ವೈ ಸರ್ಕಾರ ಆರಂಭಿಸಿತು. ಪ್ರತಿ ಲೀಟರ್ ಹಾಲಿಗೆ ₹೫ ಪ್ರೋತ್ಸಾಹ ಧನ ಕೊಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಬಂದ್ ಮಾಡಿದೆ. ಬೊಮ್ಮಾಯಿ ಸರ್ಕಾರವು ವಿದ್ಯಾನಿಧಿ ಯೋಜನೆ ಜಾರಿ ಮಾಡಿತು. ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡಿದೆ. ಹೀಗೆ ಕಾಂಗ್ರೆಸ್ ರೈತ ವಿರೋಧಿ ನಿಲುವು ತಾಳಿದೆ ಎಂದರು.
ಸಚಿವ ತಂಗಡಗಿಗೆ ಕಪಾಳಮೋಕ್ಷ : ಸಚಿವ ಶಿವರಾಜ ತಂಗಡಗಿ ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಕ್ಕೆ ಹೊಡೆಯಬೇಕೆಂದು ಕುಸಂಸ್ಕೃತಿಯ ಭಾಷೆ ಬಳಸಿದ್ದಾರೆ. ಯುವಕರು ಮೋದಿ ಮೋದಿ ಎಂದೇ ತಂಗಡಗಿ ಅವರನ್ನು ಮನೆಗೆ ಕಳಿಸುತ್ತಾರೆ. ಮೋದಿ ಮೋದಿ ಎಂದೇ ನಿಮಗೆ ಕಪಾಳಮೋಕ್ಷ ಮಾಡುತ್ತಾರೆ ಎಂದು ತಂಗಡಗಿಗೆ ಟಾಂಗ್ ಕೊಟ್ಟರು.
ಬಿಜೆಪಿ ರೈತ ಮೋರ್ಚಾದ ಭಾರತಿ ಮಲ್ಲಿಕಾರ್ಜುನ, ಅಶೋಕ ಇತರರಿದ್ದರು.
ಶಾಣ್ಯಾ ಸಿಎಂ ಬೇಕು: ರಾಜ್ಯಕ್ಕೆ ಶಾಣ್ಯಾ ಮುಖ್ಯಮಂತ್ರಿ ಬೇಕು. ಹಿಂದೆ ಅಪ್ಪ ಮಾಡಿದ ಗಳಿಕೆಯನ್ನು ಖರ್ಚು ಮಾಡೋದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳಿಂದಾಗಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಹಣ ಕೊಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ನಡಹಳ್ಳಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಉಳಿಯಲ್ಲ. ಮೋದಿ ಗ್ಯಾರಂಟಿ ಮಾತ್ರ ಶಾಶ್ವತ ಉಳಿಯಲಿದೆ. ರಾಜ್ಯದಲ್ಲಿ ಬರದ ಪರಿಸ್ಥಿತಿಯಿದೆ. ಕೇಂದ್ರದ ನೆರವು ನಿಯಮದ ಅನುಸಾರ ಬರುತ್ತದೆ. ಆದರೆ ರಾಜ್ಯದಿಂದ ಸಿಎಂ ಸಿದ್ದರಾಮಯ್ಯ ಅವರು ಈ ವರೆಗೂ ಪ್ರತಿ ರೈತರಿಗೆ ₹೨ ಸಾವಿರ ಬಿಡುಗಡೆ ಮಾಡಿದ್ದಾರೆ. ಇವರಿಗೆ ರೈತಪರ ಕಾಳಜಿಯಿಲ್ಲ ಎಂದು ಆರೋಪಿಸಿದರು.