ಮುಂಡರಗಿ: ಅನುಭಾವ ಎನ್ನುವುದು ಸಾಮಾನ್ಯವಾಗಿರುವಂಥದ್ದಲ್ಲ. ಪರಶಿವನ ಇರುವಿಕೆಯನ್ನು ನಮ್ಮ ಅನುಭವಕ್ಕೆ ತಂದು ಕೊಡುವುದೇ ಅನುಭಾವ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಪೀಠಾಧಿಪತಿ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಅವರು ಸೋಮವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆಯ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ಅನುಭಾವ ಎನ್ನುವಂಥದ್ದು ಮನಸ್ಸಿನ ಪರಿಶುದ್ಧಿತೆಗೆ ಮುಖ್ಯವಾಗಿ ಬೇಕು. ಅನುಭಾವದಿಂದ ತಾನಾರೆಂಬುದನ್ನೂ ಸಾಧಿಸಬಹುದೆಂದು ಬಸವಾದಿ ಶಿವಶರಣರು ಹೇಳಿದ್ದಾರೆ. ಈ ಅನುಭಾವ ಎನ್ನುವಂಥದ್ದು ನಮಗೆ ಶಾಶ್ವತವಾದ ಸುಖವನ್ನು ಲಿಂಗಾಂಗ ಸಾಮರಸ್ಯದ ಸುಖವನ್ನು ಅನುಭವಕ್ಕೆ ತಂದು ಕೊಡುವ ಕೆಲಸವನ್ನು ಮಾಡುತ್ತದೆ. ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತಂದುಕೊಡುತ್ತದೆ. ಶರಣರ ನುಡಿಗಳನ್ನು ಕೇಳಿದರೆ ಮನಸ್ಸು ಪರಿಶುದ್ಧವಾಗುತ್ತದೆ. ಶರಣರ ನುಡಿಗಳೆಂದರೆ ಸೂತಕದ ನುಡಿಗಳಲ್ಲ, ಜಗದ ಸೂತಕವನ್ನು ಕಳೆಯುವಂಥವುಗಳಾಗಿವೆ. ವಚನ ಸಾಹಿತ್ಯವೆಂಬ ಅನುಭಾವದ ಸಂಪತ್ತನ್ನು ಬಸವಾದಿ ಶಿವಶರಣರು ನಮಗೆ ನೀಡಿ ಹೋಗಿದ್ದಾರೆ ಎಂದರು.ಕೊಪ್ಪಳದ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಲಿಂಗಾಯತರಿಗೆ ಎಲ್ಲ ಕಾಲಕ್ಕೂ ಬಸವಣ್ಣನೇ ಧರ್ಮ ಗುರು. ಬಸವಣ್ಣನೇ ನಮ್ಮ ಸಾಂಸ್ಕೃತಿ ನಾಯಕ. ಲಿಂಗಾಯತ ಸ್ವತಂತ್ರ ಧರ್ಮ, ಲಿಂಗಾಯತರ ಲಾಂಛನ ಇಷ್ಟಲಿಂಗ. ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ ಎನ್ನುವುದನ್ನು ಲಿಂಗಾಯತರಾದ ನಾವು ಎಂದೆಂದಿಗೂ ಮರೆಯಬಾರದು. ನಮಗೆಲ್ಲ ಬಸವತತ್ವದ ಮಾರ್ಗ ತೋರಿಸಿದವರು ಗದುಗಿನ ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರು. ಆನಂತರದಲ್ಲಿ ಇಂದಿನ ಮುಂಡರಗಿ ತೋಂಟದಾರ್ಯ ಮಠದ ಶ್ರೀಗಳಾದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ. ಇವರೀರ್ವರೂ ನಮ್ಮ ಕಣ್ಣು ತೆರೆಸುವ ಮೂಲಕ ಬದುಕನ್ನೇ ಬದಲಾಯಿಸಿದರು ಎಂದರು.
ನೇತೃತ್ವ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದುದ ಒಂದು ಸಮಯ ಮತ್ತೊಂದು ಆರೋಗ್ಯ. ಸಮಯವನ್ನು ಸರಿಯಾಗಿ ಸಬ್ಧಳಕೆ ಮಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನುಷ್ಯ ತನ್ನ ಜೀವನದ ಅಂತ್ಯದ ವರೆಗೆ ಹಣದಿಂದ ಸುಖಿಯಾಗಿದ್ದಾನೆ ಎಂದು ಹೇಳಿದರೆ ಅದು ಬೌದ್ಧಿಕವಾದ. ಮನುಷ್ಯ ಸಾಯುವಾಗ ಬಹಳ ಸಂತೋಷದಿಂದ ಇರಬೇಕು. ಸಂತೋಷದಿಂದ ಯಾವ ಮನುಷ್ಯ ಸಾವನ್ನಪ್ಪುತ್ತಾನೆಯೋ ಅವನು ಜೀವನದಲ್ಲಿ ನೆಮ್ಮದಿ ಪಡೆದಿರುತ್ತಾನೆ ಎಂದರು.ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ತನು, ಮನ, ಧನದಿಂದ ಸಹಾಯ-ಸಹಕಾರ ಮಾಡಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಕಾರ್ಯದರ್ಶಿ ಅಡಿವೆಪ್ಪ ಛಲವಾದಿ, ಶಿವಕುಮಾರ ಬೆಟಗೇರಿ, ವೀರೇಂದ್ರ ಅಂಗಡಿ, ವಿಶ್ವನಾಥ ಉಳ್ಳಾಗಡ್ಡಿ, ಎಚ್. ವಿರೂಪಾಕ್ಷಗೌಡ, ಸದಾಶಿವಯ್ಯ ಕಬ್ಬೂರಮಠ ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಸಿದ್ದಲಿಂಗೇಶ ಕಬ್ಬೂರಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.