ಎಪಿಎಂಸಿ ಶುಲ್ಕ ಪಾವತಿ ಶೀಘ್ರ ಆನ್‌ಲೈನ್‌: ಶಿವಾನಂದ ಕಾಪಸೆ ಭರವಸೆ

KannadaprabhaNewsNetwork | Published : Feb 21, 2025 11:47 PM

ಸಾರಾಂಶ

ಎಪಿಎಂಸಿ ಶುಲ್ಕ ಪಾವತಿ 35ಎ, 35ಬಿ ಅಡಿಯಲ್ಲಿ ನಗದು ಶುಲ್ಕ ಪಾವತಿ ಸ್ಥಗಿತಗೊಳಿಸಿ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮಾರ್ಚ್‌ನೊಳಗೆ ಜಾರಿಗೊಳಿಸುತ್ತೇವೆ ಎಂದು ಶಿವಾನಂದ ಕಾಪಸೆ ತಿಳಿಸಿದ್ದಾರೆ

ಹುಬ್ಬಳ್ಳಿ: ಎಪಿಎಂಸಿಗಳಲ್ಲಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಮೇಲಿನ ಶುಲ್ಕ ಪಾವತಿ ವ್ಯವಸ್ಥೆಯನ್ನು ಮಾರ್ಚ್‌ನೊಳಗಾಗಿ ಸಂಪೂರ್ಣ ಆನ್‌ಲೈನ್‌ ಜಾಲಕ್ಕೆ ಒಳಪಡಿಸಲಾಗುವುದು ಎಂದು ಎಪಿಎಂಸಿ ನಿರ್ದೇಶಕ ಶಿವಾನಂದ ಕಾಪಸೆ ತಿಳಿಸಿದ್ದಾರೆ.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಶ್ರಯದಲ್ಲಿ ವ್ಯಾಪಾರಸ್ಥರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ವಿವಿಧ ಎಪಿಎಂಸಿ ಅಧ್ಯಕ್ಷರ ಬೇಡಿಕೆ ಆಲಿಸಿದ ಬಳಿಕ ಅವರು ಮಾತನಾಡಿದರು.

ಎಪಿಎಂಸಿ ಶುಲ್ಕ ಪಾವತಿ 35ಎ, 35ಬಿ ಅಡಿಯಲ್ಲಿ ನಗದು ಶುಲ್ಕ ಪಾವತಿ ಸ್ಥಗಿತಗೊಳಿಸಿ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮಾರ್ಚ್‌ನೊಳಗೆ ಜಾರಿಗೊಳಿಸುತ್ತೇವೆ. ಇದರಿಂದ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.

35ಬಿ ನಿಯಮಾವಳಿ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ ನಿರ್ದೇಶಕ ಕಾಪಸೆ, 35ಬಿ ಎನ್ನುವುದು ವ್ಯಾಪಾರಸ್ಥರ ಸರಕುಗಳಿಗೆ ಅಧಿಕೃತ ಮುದ್ರೆ ಇದ್ದಂತೆ. ರದ್ದುಗೊಳಿಸಿದರೆ ದುರುಪಯೋಗವಾಗುವ ಸಾಧ್ಯತೆಗಳಿವೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಇದರ ನೆಪದಲ್ಲಿ ವ್ಯಾಪಾರಸ್ಥರಿಗೆ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಎಪಿಎಂಸಿ ಕೂಡ ಸ್ಥಳೀಯ ಸಂಸ್ಥೆ ಆಗಿರುವುದರಿಂದ ಎಪಿಎಂಸಿ ಆಸ್ತಿಗಳಿಗೆ ಪ್ರತ್ಯೇಕ ಖಾತಾ ಮತ್ತು ಇ-ಆಸ್ತಿ ಮಾಡಿಕೊಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾನಿರ್ದೇಶಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಲೀಸ್‌ ಕಂ ಖರೀದಿ, ಕೆಜೆಪಿ ಸೇರಿದಂತೆ ಆಸ್ತಿಗೆ ಸಂಬಂಧಿಸಿ ವರ್ತಕರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗುವುದು. ಆದರೆ, ಆರ್‌ಟಿಸಿ ಕಾಲಂ 9ರಲ್ಲಿ ಕಾರ್ಯದರ್ಶಿ ಹೆಸರನ್ನು ತೆಗೆದು ಹಾಕುವುದಿಲ್ಲ ಎಂದರು.

ಪ್ರತ್ಯೇಕ ಎಪಿಎಂಸಿ

ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿಗೆ ಪ್ರತ್ಯೇಕ ಎಪಿಎಂಸಿ ಆರಂಭಿಸಲು ಇಲಾಖೆ ಸಕಾರಾತ್ಮಕ ಧೋರಣೆ ಹೊಂದಿದೆ. ಈ ಕುರಿತಾಗಿ ಸ್ಥಳೀಯ ಜನಪ್ರತಿನಿಧಿಗಳು, ಸಚಿವರ ಗಮನಕ್ಕೆ ತರಲಾಗುವುದು ಎಂದರು. ಸದ್ಯ ತಾಳಿಕೋಟೆ ತಾಲೂಕು ವ್ಯಾಪ್ತಿಯಲ್ಲಿ ಎಪಿಎಂಸಿ ಕಾರ್ಯನಿರ್ವಹಿಸುತ್ತಿದೆ.

ಮೆಣಸಿನಕಾಯಿ ಮಾರ್ಕೆಟ್‌

ಬಳ್ಳಾರಿ ಜಿಲ್ಲೆಯಲ್ಲಿ ಪ್ರತ್ಯೇಕ ಒಣಮೆಣಸಿನಕಾಯಿ ಮಾರುಕಟ್ಟೆ ಹಾಗೂ ಶೀತಲ ಘಟಕ ಸ್ಥಾಪಿಸಲು ಇಲಾಖೆ ಒಪ್ಪಿಗೆ ನೀಡಿದ್ದು, ಆಲದಹಳ್ಳಿಯಲ್ಲಿ 28 ಎಕರೆ ಜಮೀನು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ರಾಣಿಬೆನ್ನೂರ ಎಪಿಎಂಸಿಯ ಮೆಗಾ ಮಾರ್ಕೆಟ್‌ ಹಾಗೂ ಸೈಟ್‌ ಹಂಚಿಕೆಯನ್ನು ಶೀಘ್ರ ಮಾಡಲಾಗುವುದು.

ರಾಜ್ಯದ 171ಎಪಿಎಂಸಿಗೆ ಸಂಬಂಧಿಸಿ 8500 ಎಕರೆ ಭೂಮಿ ಇದೆ. 46 ಸಾವಿರ ವರ್ತಕರು, 22 ಸಾವಿರ ದಲ್ಲಾಳಿಗಳು, 25 ಸಾವಿರ ಶ್ರಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಕೃಷಿ ಭೂಮಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹಾಗೆಯೇ ನಗರೀಕರಣ ಪ್ರಮಾಣ ಹೆಚುತ್ತಿದೆ ಎಂದರು.

ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ದಾವಣಗೆರೆ, ರಾಣಿಬೆನ್ನೂರು, ಬಾಗಲಕೋಟೆ ಜಿಲ್ಲೆಗಳ ವಿವಿಧ ವರ್ತಕ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಹಲವು ಬೇಡಿಕೆಗಳನ್ನು ನಿರ್ದೇಶಕರಿಗೆ ಸಲ್ಲಿಸಿದರು.

ಕೆಸಿಸಿಐ ಅಧ್ಯಕ್ಷ ಎಸ್‌.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಉಪಾಧ್ಯಕ್ಷರಾದ ಪ್ರವೀಣ ಅಂಗಡಿ, ವೀರೇಶ ಮೊಟಗಿ, ವಸಂತ ಲದ್ವಾ, ಲಿಂಗನಗೌಡರ, ಯಕಲಾಸಪುರ ಸೇರಿದಂತೆ ಹಲವು ಇದ್ದರು.

ನ​ಬಾರ್ಡ್‌ ನೆ​ರವು

ಹುಬ್ಬಳ್ಳಿಯ ಬೃಹತ್‌ ಎಪಿಎಂಸಿಯಲ್ಲಿ ಯುಜಿಡಿ ಸೇರಿ ಮೂಲ ಸೌಕರ್ಯ ಕಲ್ಪಿಸಲು ಮತ್ತು ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹200 ಕೋಟಿ ಅಗತ್ಯವಿದೆ. ಅಲ್ಲದೇ ಸಂಪರ್ಕ ರಸ್ತೆಗೆ ಭೂ ಸ್ವಾಧೀನಕ್ಕೆ ಹಣ ಬೇಕಿದೆ. ಈ ನಿಟ್ಟಿನಲ್ಲಿ ನಬಾರ್ಡ್‌ ನೆರವು ಪಡೆಯಲು ಉದ್ದೇಶಿಸಲಾಗಿದೆ ಎಂದು ನಿರ್ದೇಶಕ ಕಾ​ಪಸೆ ತಿಳಿಸಿದರು.

ಎಪಿಎಂಸಿಯಲ್ಲಿ ಜಿ+1 ಕಟ್ಟಡ ಪರವಾನಗಿ, ವಾಣಿಜ್ಯ ಬ್ಯಾಂಕ್‌ಗಳ ಸ್ಥಾಪನೆ, ಸಣ್ಣ ಉದ್ಯಮ ತೆರೆಯಲು ಅವಕಾಶ ನೀಡುವಂತೆ ವರ್ತಕರ ಬೇಡಿಕೆಗೆ ಸ್ಪಂದಿಸಿದ ನಿರ್ದೇಶಕರು, ನಿಯಮಾವಳಿ ಉಲ್ಲಂಘಿಸದೇ, ಇತರರಿಗೆ ವಾಣಿಜ್ಯ ವಹಿವಾಟಿಗೆ ಬಾಡಿಗೆ ನೀಡದೇ ಸ್ವಂತ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ 33 ಕೆವಿ ವಿದ್ಯುತ್‌ ಕೇಂದ್ರ ಸ್ಥಾಪಿಸಲಾಗುವುದು. ಎಪಿಎಂಸಿ ವ್ಯಾಪಾರಿಗಳೊಂದಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಿ ಅವರ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಪರಿಹರಿಸಲು ಸೂಚಿಸಲಾಗುವುದು ಎಂದು ಎಪಿಎಂಸಿ ನಿರ್ದೇಶಕರು ಹೇಳಿದರು.

Share this article