ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಮನವಿ

KannadaprabhaNewsNetwork | Published : Aug 23, 2024 1:08 AM

ಸಾರಾಂಶ

ಎಲ್ಲಾ ವ್ಯಾಪಾರ ಮಳಿಗೆಗಳನ್ನು ಹರಾಜು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಪಟ್ಟಣದ ಬಸ್ ನಿಲ್ದಾಣದಲ್ಲಿನ ಅಯೋಧ್ಯ ಹೋಟೆಲ್ ಹರಾಜು ಪ್ರಕ್ರಿಯೆ ರದ್ದುಪಡಿಸಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವ್ಯಾಪಾರ ಮಳಿಗೆಗಳನ್ನು ಹರಾಜು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘವು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಸಮೀಪ ಇರುವುದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸರ್ವ ಸದಸ್ಯರ ಸಭೆ ನಡೆಸಿ ಹರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೋಟೆಲ್, ಹೂವು, ಹಣ್ಣು, ತರಕಾರಿ ಮಳಿಗೆಗಳನ್ನು ಒಳಗೊಂಡಂತೆ ಎಲ್ಲಾ ಮಳಿಗೆಗಳ ಹರಾಜನ್ನು, ಚುನಾಯಿತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ತೀರ್ಮಾನಿಸಬೇಕು. ಪ.ಪಂ.ನ ವ್ಯಾಪ್ತಿಯ ಬಸ್ ನಿಲ್ದಾಣದ ಹೋಟೆಲ್ ಹರಾಜಿನಲ್ಲಿ 18 ಲಕ್ಷ ಠೇವಣಿ ಮಾಡಿ, 18 ಸಾವಿರ ಬಾಡಿಗೆ ನಿಗಧಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಸಾಮಾನ್ಯ ಜನರು ಭಾಗವಹಿಸಲು ಅಸಾಧ್ಯವಾಗಿದೆ. ಇದು ಶ್ರೀಮಂತರ ಪರವಾಗಿರುವವರು ಮಾಡಿರುವಂತಹ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

ಪ.ಪಂ. ವ್ಯಾಪ್ತಿಯ ವ್ಯಾಪಾರ ಮಳಿಗೆಗಳು ಹರಾಜು ಹಾಕಿ 12 ವರ್ಷಗಳು ಮೇಲ್ಪಟ್ಟಿರುವುದರಿಂದ ಹೋಟೆಲ್ ಸೇರಿದಂತೆ ಎಲ್ಲಾ ಮಳಿಗೆಗಳನ್ನು ಒಂದೇ ಬಾರಿ ಹರಾಜು ಹಾಕಬೇಕು. ವಾರದ ಸಂತೆಗೆ ಬರುವ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ , ಬೀದಿ ದೀಪ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ.ಪಂ.ನ ಮುಖ್ಯಾಧಿಕಾರಿ ಪಿ. ಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಎಸ್. ಮಂಜುನಾಥ, ರೈತ ಸಂಘದ ಡಿ.ಬಿ. ಕೃಷ್ಣಮೂರ್ತಿ, ಎಚ್.ವಿ. ಈರಣ್ಣ, ಸಣ್ಣಪ್ಪ, ನಾಗರಾಜು, ಮಂಜಣ್ಣ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಉಪಾಧ್ಯಕ್ಷ ದಾನಸೂರನಾಯಕ, ಕಾಮಯ್ಯ, ತಿಪ್ಪೇಸ್ವಾಮಿ, ನಾಗೇಶ್ , ಮುಖಂಡರಾದ ಸಾಂಬ ಶಿವಸ್ವಾಮಿ, ಶಿವಲಿಂಗ ಇದ್ದರು.

Share this article