ರೋಣ: ಅನುದಾನಿತ ಶಾಲಾ ಕಾಲೇಜು ನೌಕರರ ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳ ಸಾವಿರಾರು ನೌಕರರು ನಮ್ಮ ನ್ಯಾಯಯತ ಬೇಡಿಕೆ ಈಡೇರಿಸುವಂತೆ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಸುದೀರ್ಘ 141 ದಿನಗಳ ಕಾಲ ಹೋರಾಟ ಮಾಡಲಾಗಿತ್ತು, ಆದರೆ ಬೇಡಿಕೆ ಈಡೇರದ ಕಾರಣ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆತ್ಮಹತ್ಯೆ ಮಾಡಿಕೊಂಡ ಹಿರೇಮಠ ಮನೆಗೆ ತೆರಳಿ ಕುಟುಂಬಕ್ಕೆ ವೈಯಕ್ತಿಕವಾಗಿ ₹ 2 ಲಕ್ಷ ಹಣ ನೀಡಿ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನುದಾನ ರಹಿತ ಅವಧಿ ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಅದೇ ರೀತಿ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲೂ ಭರವಸೆ ನೀಡಿದ್ದಾರೆ. ಅದರಂತೆ ಸರ್ಕಾರವು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಬೇಕು.ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಸರ್ಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಹಾಗೂ ನೌಕರರಿಗಾಗಲಿ ಯಾವುದೇ ತಾರತಮ್ಯ ನೀತಿ ಮಾಡಬಾರದು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಶೀಘ್ರ ಕ್ರಮ ವಹಿಸಬೇಕು. ತಮ್ಮ ಪಕ್ಷದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿ ತರುವುದಾಗಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ, ಈಗಾಗಲೇ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಗತಿಸಿದೆ ಆದ್ದರಿಂದ ಇನ್ನೂ ಹೆಚ್ಚಿನ ವಿಳಂಬ ನೀತಿ ಅನುಸರಿಸಿದರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಾವಿರಾರು ನೌಕರರು ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಜಿ. ದಾನಪ್ಪಗೌಡ್ರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಡಿ. ಗಾಣಿಗೇರ, ತಾಲೂಕು ಎಪಿಎಸ್ ನೌಕರ ಸಂಘದ ಅಧ್ಯಕ್ಷ ಎಸ್.ಜಿ. ತೊಣಸಿಹಾಳ, ಅನುದಾನಿತ ಪಿಂಚಣಿ ವಂಚಿತರ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊರ್ಲಹಳ್ಳಿ, ತಾಲೂಕಾಧ್ಯಕ್ಷ ಪಿ.ಎಸ್. ಹಿರೇಮಠ, ಕಾರ್ಯದರ್ಶಿ ಎಸ್.ಕೆ. ಆಡಿನ, ಬಿ.ಬಿ. ಮೇಗಲಮನಿ ಹಾಗೂ ಅನುದಾನಿತ ನೌಕರರು ಇದ್ದರು.