- ನೀಲನಕ್ಷೆ ತಯಾರಿಕೆಗೆ ಸೂಚಿಸಿ, ಸ್ಥಳ ವೀಕ್ಷಿಸಲು ಒತ್ತಾಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಗೆ ಮೂಗಿನಗೊಂದಿ ಬಳಿಯ ಬೈರನಪಾದ ಬ್ಯಾರೇಜ್ ನಿರ್ಮಾಣ ಮಾಡಿದರೆ ನೀರಿನ ಕೊರತೆ ನೀಗಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ರೈತ ಸಂಘದ ನಿಯೋಗ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.ಬ್ಯಾರೇಜ್ ನಿರ್ಮಾಣದಿಂದ ಯಾವುದೇ ರೈತರ ಭೂಮಿ ಭೂಸ್ವಾಧೀನ ಆಗುವುದಿಲ್ಲ. ಮಳೆಗಾಲದಲ್ಲಿ ಸುಮಾರು 15 ಟಿ.ಎಂ.ಸಿ., ಬೇಸಿಗೆಯಲ್ಲಿ 10 ಟಿ.ಎಂ.ಸಿ. ನೀರನ್ನು ಸಂಗ್ರಹಿಸಬಹುದು. ಮಳೆಗಾಲದಲ್ಲಿ ನೀರು ತುಂಬಿದರೆ ಬ್ಯಾರೇಜ್ ನೀರನ್ನು ಬೇಸಿಗೆ ಹಂಗಾಮಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮತ್ತು ಕಾಡಿನಲ್ಲಿರುವ ಜಾನುವಾರುಗಳಿಗೆ ನೀರಿನ ಲಭ್ಯತೆ ಆಗಲಿದೆ. ಕಾಡುಪ್ರಾಣಿಗಳು ನೀರನ್ನು ಅರಸಿ, ಸುತ್ತಮುತ್ತಲಿನ ಗ್ರಾಮಗಳಿಗೆ ಬರುವುದನ್ನು ಸಹ ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಬೇಸಿಗೆ ಹಂಗಾಮಿನಲ್ಲಿ ಭದ್ರಾ ಡ್ಯಾಂನಿಂದ ಬರುವ ನೀರನ್ನು ಕಾಯದೇ, ಬೈರನಪಾದ ಬ್ಯಾರೇಜ್ ನೀರನ್ನು ಬಳಸಬಹುದು, ಇದಲ್ಲದೇ ಕೆಳಭಾಗದ ಜಿಲ್ಲೆಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೆಳಭಾಗದ ಜಿಲ್ಲೆಗಳಿಗೆ ಅವಶ್ಯಕವಿದ್ದಲ್ಲಿ 2-3 ಟಿಎಂಸಿ ನೀರನ್ನು ಈ ಬ್ಯಾರೇಜ್‌ನಿಂದಲೇ ಬಿಡಬಹುದು. ಅನಂತರ ಭದ್ರಾ ಡ್ಯಾಂನಿಂದ ಕೆಳಭಾಗದಲ್ಲಿ ಕೊಡುವ ನೀರಿನ ಕೊರತೆ ಸಹ ನೀಗಿಸಬಹುದು ಎಂದು ಮನವರಿಕೆ ಮಾಡಿದರು.ಈ ಕುರಿತು ಈಗಾಗಲೇ ಹಿಂದಿನ ಜಿಲ್ಲಾಧಿಕಾರಿ ಸಭೆ ಕರೆದು, ಸಂಬಂಧಿಸಿದ ಮಲೇಬೆನ್ನೂರಿನ ಭದ್ರಾ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದರು. ಆದರೆ, ಯಾವುದೇ ಗಣನೆಗೆ ತೆಗೆದುಕೊಂಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನೀಲನಕ್ಷೆ ತಯಾರು ಮಾಡಲು ಸೂಚನೆ ನೀಡುವ ಜೊತೆ ಜಿಲ್ಲಾಧಿಕಾರಿ ಅವರು ಸ್ಥಳ ವೀಕ್ಷಣೆ ಮಾಡುವಂತೆ ರೈತರು ಮನವಿ ಮಾಡಿದರು.
ಈ ಸಂದರ್ಭ ಸಮಿತಿಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ನಾಗರಕಟ್ಟೆ ಜಯಾನಾಯ್ಕ, ದಶರಥರಾಜ್, ಫೈಜುಲ್ಲಾ, ಬಿ.ಬಸವರಾಜಪ್ಪ ಉಪಸ್ಥಿತರಿದ್ದರು.- - - -15ಕೆಡಿವಿಜಿ34ಃ:
ದಾವಣಗೆರೆಯಲ್ಲಿ ಬೈರನಪಾದ ಬ್ಯಾರೇಜ್ ನಿರ್ಮಾಣಕ್ಕೆ ಆಗ್ರಹಿಸಿ ರೈತ ಸಂಘ ನಿಯೋಗದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.