ಸಿರಿಗೆರೆ ಸದ್ಧರ್ಮ ನ್ಯಾಯಪೀಠದಲ್ಲಿ ರೈತ ಪ್ರತಿನಿಧಿಗಳ ಅಹವಾಲುಕನ್ನಡಪ್ರಭ ವಾರ್ತೆ ಸಿರಿಗೆರೆ
2008ರಲ್ಲಿ ಆರಂಭಗೊಂಡು 17 ವರ್ಷಗಳ ಕಾಲ ನಿತ್ರಾಣಗೊಂಡಿರುವ ಭದ್ರಾ ಮೇಲ್ಡಂಡೆ ಯೋಜನೆಯನ್ನು ತ್ವರಿತವಾಗಿ ಮುಗಿಸಬೇಕಿದ್ದಲ್ಲಿ ರೈತರ ಪಾಲಿನ ಆಶಾಕಿರಣವಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಕೇಂದ್ರ ಸರ್ಕಾರದ ಕಿವಿ ಹಿಂಡಬೇಕು ಎಂದು ರೈತ ಪ್ತಿನಿಧಿಗಳು ಮನವಿ ಮಾಡಿದರು.ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಲೋಪಗಳನ್ನು ಶ್ರೀಗಳಿಗೆ ಮನವರಿಕೆ ಮಾಡಿಕೊಡಲು ಸಮಾವೇಶಗೊಂಡಿದ್ದ ರೈತ ಪ್ರತಿನಿಧಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಸಚಿವ ಸೋಮಣ್ಣ, ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.
ಭದ್ರಾ ಮೇಲ್ಡಂಡೆ ಯೋಜನೆ ಆರಂಭವಾಗಿ ಇಂದಿಗೆ 17 ವರ್ಷಗಳು ಸಂದಿವೆ. ಯೋಜನೆಯ ಕಾಮಗಾರಿ ಸಾಗುತ್ತಿರುವುದನ್ನು ಗಮನಿಸಿದರೆ ಈ ಯೋಜನೆ ಮುಗಿಯುವ ಭರವಸೆ ಇಲ್ಲ. 2008ರಲ್ಲಿ ಕೇವಲ 6 ಸಾವಿರ ಕೋಟಿ ರು. ಯೋಜನಾ ವೆಚ್ಚ ಈಗ 21,000 ಕೋಟಿಗೆ ಏರಿದೆ ಎಂದು ಶ್ರೀಗಳಿಗೆ ರೈತ ನಾಯಕರು ಮನವರಿಕೆ ಮಾಡಿಕೊಟ್ಟರು.ಇಲ್ಲಿಯವರೆಗೂ ಕಾಮಗಾರಿ ನಿರ್ವಹಿಸಿರುವ 10 ಗುತ್ತಿಗೆದಾರ ಕಂಪನಿಗಳಿಗೆ ಸರ್ಕಾರ ಕೊಡಬೇಕಾದ ಬಾಕಿ 10,000 ಕೋಟಿ ರು.ಇದೆ. ವಾಣಿವಿಲಾಸ ಕೋಡಿ ಬಿದ್ದ ವೇಳೆ ಬಾಗಿನ ಅರ್ಪಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ 800 ಕೋಟಿ ನೀಡುವುದಾಗಿ ಹೇಳಿದ್ದಾರೆ. ಗುತ್ತಿಗೆದಾರರ ಬಾಕಿಯೇ 10,000 ಕೋಟಿ ಇರುವಾಗ ಕಾಮಗಾರಿ ಮುಂದುವರೆಯುವುದು ಹೇಗೆ? ಎಂದು ರೈತರು ಪ್ರಶ್ನೆ ಮಾಡಿದರು.
ಇತ್ತೀಚೆಗೆ ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅಧಿಕಾರಿಗಳ ತಂಡ ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೇಂದ್ರ ಸಮ್ಮತಿಸಿದ್ದ 5,300 ಕೋಟಿ ರು. ಅನುದಾನ ಬಿಡುಗಡೆಗೆ ಒತ್ತಾಯ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರದವರು ಹೊಸ ಡಿಪಿಎಆರ್ ಮಾಡಿ ಸಲ್ಲಿಸಲು ತಿಳಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಹಿರಿಯೂರಿನ ಎಚ್.ಆರ್.ತಿಮ್ಮಯ್ಯ ಹೇಳಿದರು.ಈ ಸಂದರ್ಭದಲ್ಲಿ ಎಚ್.ಆರ್.ತಿಮ್ಮಯ್ಯ, ಚಿಕ್ಕಬ್ಬಿಗೆರೆ ನಾಗರಾಜ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ಹಳೆ ಊರು ಸಿದ್ದಣ್ಣ, ಮಂಜಣ್ಣ, ಡಿ.ಎಸ್. ಮಲ್ಲಿಕಾರ್ಜುನ, ಎಂ ಟಿ ಸುರೇಶ, ಸಿ. ಸಿದ್ದರಾಮಣ್ಣ, ನಾಗಣ್ಣ, ಆದನೂರು ಶಿವಕುಮಾರ್, ಹೊಳಲ್ಕೆರೆ ಸಿದ್ದರಾಮಣ್ಣ, ಚಿಕ್ಕಬೆನ್ನೂರಿನ ಶಾಂತಾ ಅಶೋಕ್ ಹಾಗೂ ಇತರೆ ನೂರಾರು ರೈತ ಮುಖಂಡರು ಇದ್ದರು.
ಭದ್ರಾ ಮೇಲ್ಡಂಡೆ ಯೋಜನೆ ಲೋಪ ಚರ್ಚೆಗೆ ಶ್ರೀಗಳ ಒಪ್ಪಿಗೆ
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ಲೋಪ ಕುರಿತು ಸಂಸದರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಭದ್ರಾ ಮೇಲ್ಡಂಡೆ ಯೋಜನೆಯ ಅಧಿಕಾರಿಗಳೊಡನೆ ಚರ್ಚಿಸಲು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಮ್ಮತಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಮೇಲೆ ಜಿಲ್ಲೆಯ ರೈತರು ಭರವಸೆ ಇಟ್ಟುಕೊಂಡಿದ್ದಾರೆ. ಅದನ್ನು ರೈತರ ಹಿತದೃಷ್ಠಿಯಿಂದ ಜಾರಿಗೊಳಿಸಲು ಯತ್ನಿಸೋಣ ಎಂದರು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಆಯ್ದ ರೈತ ಪ್ರತಿನಿಧಿಗಳ ಸಭೆಯೊಂದನ್ನು ಮೊದಲ ಹಂತದಲ್ಲಿ ಮಠದ ಶಾಂತಿವನದಲ್ಲಿ ಸೇರಿಸಲಾಗುವುದು. ಆಗ ಯೋಜನೆಯ ಇದುವರೆಗಿನ ಎಲ್ಲಾ ವಿವರಗಳನ್ನು ರೈತರ ಮುಂದೆ ಮಂಡಿಸಲು ಯತ್ನಿಸಲಾಗುವುದು. ಯೋಜನೆಯ ಕುರಿತು ರೈತರ ಆಕ್ಷೇಪಣೆ ಇದ್ದರೆ ಆ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬಹುದು ಎಂದರು.