ಅನಧಿಕೃತ ಮದ್ಯ ಮಾರಾಟ ಸ್ಥಗಿತಗೊಳಿಸಲು ಮನವಿ

KannadaprabhaNewsNetwork | Published : Jan 30, 2024 2:05 AM

ಸಾರಾಂಶ

ಮುಧೋಳ: ತಾಲೂಕಿನಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಹೆಚ್ಚಾಗಿದ್ದು, ಕೂಡಲೇ ಸಂಪೂರ್ಣ ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗಾಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆಯವರು ಮುಧೋಳ ಅಬಕಾರಿ ಇಲಾಖೆ ನಿರೀಕ್ಷಕರಿಗೆ ಸೋಮವಾರ ಮನವಿ ಸಲ್ಲಿಸಿದರು. ಜಯ ಕರ್ನಾಟಕ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ ಬಂಡಿವಡ್ಡರ ಮಾತನಾಡಿ, ಗ್ರಾಮಗಳಲ್ಲಿ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಮತ್ತು ಕೆಲವು ಅಂಗಡಿ, ಮನೆ, ಪಾನಶಾಪ್, ಹೊಟೇಲ್ ಧಾಬಾ ಮತ್ತು ತಾಂಡಾಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಒತ್ತಾಯಿಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ತಾಲೂಕಿನಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಹೆಚ್ಚಾಗಿದ್ದು, ಕೂಡಲೇ ಸಂಪೂರ್ಣ ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗಾಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆಯವರು ಮುಧೋಳ ಅಬಕಾರಿ ಇಲಾಖೆ ನಿರೀಕ್ಷಕರಿಗೆ ಸೋಮವಾರ ಮನವಿ ಸಲ್ಲಿಸಿದರು.

ಜಯ ಕರ್ನಾಟಕ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ ಬಂಡಿವಡ್ಡರ ಮಾತನಾಡಿ, ಮುಧೋಳ ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳು ನಮ್ಮ ಸಂಘಟನೆಗೆ ದೂರವಾಣಿ ಕರೆ ಮಾಡಿ ಗ್ರಾಮಗಳಲ್ಲಿ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಮತ್ತು ಕೆಲವು ಅಂಗಡಿ, ಮನೆ, ಪಾನಶಾಪ್, ಹೊಟೇಲ್ ಧಾಬಾ ಮತ್ತು ತಾಂಡಾಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಒತ್ತಾಯಿಸಿರುವ ಹಿನ್ನಲೆಯಲ್ಲಿ ನಾವಿಂದು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದೇವೆ.

ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತ ಮದ್ಯ ಮಾರಾಟ ಹೆಚ್ಚಾಗಿದ್ದು, ದಾಳಿ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅನಧಿಕೃತ ಮದ್ಯ ಮಾರಾಟ ಮಾಡದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಎಲ್ಲಂದರಲ್ಲಿ ಮದ್ಯ ಸೇವಿಸಿ ಕೆಲವರು ಪೌಚ್‌, ಬಾಟಲಿಗಳನ್ನು ಗುಡಿ ಗುಂಡಾರ, ಶಾಲಾ ಕಂಪೌಂಡ್, ರಸ್ತೆಗಳ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದಲ್ಲ, ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆ ನಿವಾರಿಸಬೇಕು, ಅನಧಿಕೃತ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ಸಂಘಟನೆಯಿಂದ ಒತ್ತಾಯಿಸುವುದಾಗಿ ಹೇಳಿದರು.

ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ದಾನಮ್ಮ ಗಣಿ, ಉಪಾಧ್ಯಕ್ಷೆ ಬೋರವ್ವ ಯಲಡಗಿ, ಮಹಾದೇಶ ಮೇತ್ರಿ, ಪ್ರಶಾಂತ ಸರವಿ, ಅರುಣ ಗೋಡಿ, ಪ್ರಶಾಂತ ಮೇತ್ರಿ, ಸಿದ್ರಾಮ ಮೇಗಾಡಿ, ಗಣಪತಿ ಬೋಸಲೆ, ಸುರೇಖಾ ಸೋನ್ಯಾಳ, ರುಕ್ಮೀಣಿ ಸಿಂಧೆ, ತಾರಾಬಾಯಿ ಭಂಟನೂರು, ಶಾಂತಾ ಮಹಾಲಿಂಗೇಶ್ವರಮಠ, ಜೇನುಬಾಯಿ ರಾಠೋಡ, ಶೋಭಾ ದಾಬಡೆ, ಶರೀಫ ಶೇಖ್‌ ಇತರರು ಉಪಸ್ಥಿತರಿದ್ದರು.

Share this article