ಒಪಿಎಸ್ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

KannadaprabhaNewsNetwork | Published : Jul 7, 2024 1:22 AM

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಒಪಿಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಶಿಕ್ಷಕರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯದ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಎನ್‌ಪಿಎಸ್‌ನ್ನು ರದ್ದುಗೊಳಿಸಿ ಒಪಿಎಸ್‌ನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು ಎಂದು ತಾಲೂಕು ಅಧ್ಯಕ್ಷ ಪಿ.ನಾಗರಾಜು ತಿಳಿಸಿದರು.

ಶನಿವಾರ ತಹಶೀಲ್ದಾರ್‌ಗೆ ಸಂಘದ ಪರವಾಗಿ ಮನವಿ ನೀಡಿ, ರಾಜ್ಯ ಸರ್ಕಾರ ಈಗಾಗಲೇ ಸರ್ಕಾರಿ ನೌಕರರಿಗೆ ಒಪಿಎಸ್ ಪದ್ದತಿ ಜಾರಿಗೊಳಿಸುವ ಭರವಸೆ ನೀಡತ್ತು. ಆದರೆ, ಚುನಾವಣೆ ಮುಗಿದು 14 ತಿಂಗಳ ಅಧಿಕಾರಿ ನಡೆಸಿದರೂ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಒಪಿಎಸ್ ಜಾರಿ ವಿಳಂಬ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ ಭರವಸೆಯಂತೆ ಒಪಿಎಸ್ ಜಾರಿಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಮಾಜಿ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ರಾಜ್ಯಾದ್ಯಂತ ಲಕ್ಷಾಂತರ ನೌಕರರು ಒಪಿಎಸ್ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ತಾವು ಈ ಹಿಂದೆ ನೀಡಿದ ಭರವಸೆ ಮರೆತು ಯಾವುದೇ ಕ್ರಮವಹಿಸುತ್ತಿಲ್ಲ. ಆದ್ದರಿಂದ ಇಂದು ತಾಲೂಕು ಮಟ್ಟದಲ್ಲಿ ಮನವಿ ನೀಡುವ ಮೂಲಕ ಒತ್ತಾಯ ಮಾಡಲಾಗುತ್ತಿದೆ. ಒಂದು ವೇಳೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ ಪಾಷ, ಒಪಿಎಸ್ ಜಾರಿ ಮಾಡುವಂತೆ ಒತ್ತಾಯಿಸಿ ತಾವು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಈರಣ್ಣ ಮಾತನಾಡಿದರು. ಉಪಾಧ್ಯಕ್ಷ ಟಿ.ತಿಪ್ಪೇಸ್ವಾಮಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಕಾರ್ಯದರ್ಶಿ ದ್ಯಾಮಣ್ಣ, ತಿಪ್ಪೇಸ್ವಾಮಿ, ಉಮೇಶ್, ಮಹಂತೇಶ್, ಶಿವಮೂರ್ತಿ, ನವೀನ್, ಕೆ.ಎಸ್.ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.

Share this article