ಮಹದಾಯಿ ಯೋಜನೆ ಆರಂಭಿಸಲು ಒತ್ತಾಯಿಸಿ ಸಚಿವರಿಗೆ ಮನವಿ

KannadaprabhaNewsNetwork |  
Published : Nov 26, 2023, 01:15 AM IST
ಮಹದಾಯಿ ಯೋಜನೆ ಶೀಘ್ರ ಆರಂಭಿಸಲು ಒತ್ತಾಯಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಹೋರಾಟಗಾರರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮಹದಾಯಿ ಯೋಜನೆ ವಿಳಂಬ ಖಂಡಿಸಿ ಶನಿವಾರ ರೈತ ಹೋರಾಟಗಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಮಹದಾಯಿ ಕುರಿತ ಎಲ್ಲ ಅಡೆತಡೆ ನಿವಾರಿಸುವುದಾಗಿ ಜೋಶಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹದಾಯಿ ಯೋಜನೆ ವಿಳಂಬ ಖಂಡಿಸಿ ಶನಿವಾರ ರೈತ ಹೋರಾಟಗಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಮಹದಾಯಿ ಕುರಿತ ಎಲ್ಲ ಅಡೆತಡೆ ನಿವಾರಿಸುವುದಾಗಿ ಜೋಶಿ ಭರವಸೆ ನೀಡಿದರು.

ಈ ವೇಳೆ ರೈತ ಹೋರಾಟಗಾರ ಸುಭಾಷಚಂದ್ರ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಬರಗಾಲದ ಬವಣೆ ತಪ್ಪಿಸುವ ಸಲುವಾಗಿ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು ಮಲಪ್ರಭಾ ನದಿಗೆ ಮಹದಾಯಿ ಜೋಡಣೆ ಮಾಡುವಂತೆ ಸತತವಾಗಿ ನವಲಗುಂದ, ನರಗುಂದದಲ್ಲಿ 43 ವರ್ಷಗಳಿಂದ ಹೋರಾಟ ಹಮ್ಮಿಕೊಳ್ಳುತ್ತ ಬರಲಾಗಿದೆ. ಅಲ್ಲದೇ ಕಳೆದ 8 ವರ್ಷಗಳಿಂದ ನಿರಂತರ ಧರಣಿ ನಡೆಸುತ್ತಿದ್ದು, ಇಂದಿಗೂ ಮುಂದುವರಿದಿದೆ ಎಂದರು.

ಈ ಯೋಜನೆಗೆ ಹಿಂದಿನ ಸರ್ಕಾರ ಟೆಂಡರ್‌ ಕರೆದರೂ ಕಾನೂನಾತ್ಮಕವಾಗಿ ಇಲ್ಲದೇ ಇರುವುದರಿಂದಾಗಿ ಟೆಂಡರ್‌ ರದ್ದಾಯಿತು. ಕಾರಣ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಾನೂನಾತ್ಮಕ ಎಲ್ಲ ಅಡತಡೆ ತೆಗೆದುಹಾಕಿ ಟೆಂಡರ್‌ ಪ್ರಕ್ರಿಯೆಗೆ ಅನುಮತಿ ಕೊಡಿಸಬೇಕು. ಇದಕ್ಕೆ ರಾಜ್ಯ ಸರ್ಕಾರದ ಈ ಭಾಗದ ಎಲ್ಲಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಕಾರ್ಯಾರಂಭ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್‌.ಬಿ. ಪಾಟೀಲ, ಬಸನಗೌಡ ಹುಣಸಿಕಟ್ಟಿ, ಮಲ್ಲೇಶ ಉಪ್ಪಾರ, ಮಲ್ಲಪ್ಪ ಬಸಗೊಣ್ಣೆವರ, ಮುರಿಗೆಪ್ಪ ಪಲ್ಲೇದ, ಶಿವಣ್ಣ ಹುಬ್ಬಳ್ಳಿ, ಭಗವಂತಪ್ಪ ಪುಟ್ಟಣ್ಣವರ ಸೇರಿದಂತೆ ಹಲವು ರೈತರು ಇದ್ದರು.

ಮಹದಾಯಿ ಸಮಸ್ಯೆ ಪರಿಹರಿಸುವೆ: ಜೋಶಿ

ಮಹದಾಯಿ ಹೋರಾಟಗಾರರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಒಂದು ತಿಂಗಳೊಳಗೆ ಎಲ್ಲ ಅಡೆತಡೆ ನಿವಾರಿಸುವುದಾಗಿ ಭರವಸೆ ನೀಡಿದರು.

ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮ ಸ್ಪಂದನೆ ಸಿಕ್ಕಿದೆ. ಎಲ್ಲ ಅಡೆತಡೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗಾಗಲೇ ಬಜೆಟ್ ನಲ್ಲಿ ಅಗತ್ಯ ಅನುದಾನ ಇಟ್ಟಿದ್ದಾರೆ. ಒಂದು ತಿಂಗಳೊಳಗೆ ಅಡೆತಡೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ