2,500 ಬಿಎಂಟಿಸಿ ಕಂಡಕ್ಟರ್‌ ಹುದ್ದೆಗೆ ಏ.19ರಿಂದ ಅರ್ಜಿ ಹಾಕಿ

KannadaprabhaNewsNetwork | Updated : Apr 05 2024, 08:06 AM IST

ಸಾರಾಂಶ

ಬಿಎಂಟಿಸಿಯು 2500 ನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ, ಏ.19ರಿಂದ ಅರ್ಜಿ ಹಾಕಲು ಅವಕಾಶ ನೀಡಿದೆ.

  ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಖಾಲಿ ಇರುವ‌ 2500 ನಿರ್ವಾಹಕ ಹುದ್ದೆಗಳು ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಖಾಲಿ ಇರುವ 76 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕನ್ನು ಏ.19ರಂದು ಬಿಡುಗಡೆ‌ ಮಾಡಲಾಗುವುದು. ಅರ್ಜಿ ಸಲ್ಲಿಸಲು ಮೇ 18 ಕೊನೆ ದಿನ. ಅರ್ಹರು ಈ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ಕೆಇಎ ವೆಬ್‌ಸೈಟ್‌ https://kea.kar.nic.in ವೀಕ್ಷಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಬಿಎಂಟಿಸಿ ಅಂಗವೈಕಲ್ಯ ಸಿಬ್ಬಂದಿಗೆ ಪರ್ಯಯ ಹುದ್ದೆ: ಇಂದು ಸಮಿತಿ ಸಭೆ

 ಬೆಂಗಳೂರು :  ಅಪಘಾತ ಸೇರಿದಂತೆ ಇನ್ನಿತರ ಕಾರಣಗಳಿಂದ ಅಂಗವೈಕಲ್ಯತೆಗೆ ತುತ್ತಾಗಿರುವ ಬಿಎಂಟಿಸಿ ನೌಕರರಿಗೆ ಪರ್ಯಾಯ ಹುದ್ದೆಗೆ ನಿಯೋಜಿಸುವ ಸಂಬಂಧ ಶುಕ್ರವಾರ ನಿಗಮದ ಪರ್ಯಾಯ ಹುದ್ದೆ ಸಮಿತಿ ಸಭೆ ನಡೆಯಲಿದೆ.

ಚಾಲಕ, ನಿರ್ವಾಹಕ ಸೇರಿದಂತೆ ಇನ್ನಿತರ ಹುದ್ದೆಯಲ್ಲಿದ್ದು, ಅಪಘಾತ ಸೇರಿದಂತೆ ಇನ್ನಿತರ ಕಾರಣದಿಂದಾಗಿ ಅಂಗವೈಕಲ್ಯಕ್ಕೆ ಒಳಗಾಗಿ ಹಿಂದಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದವರಿಗೆ ಅಂಗವಿಕಲ ವ್ಯಕ್ತಿಗಳ ಕಾಯ್ದೆ 1995ರ ಅಡಿಯಲ್ಲಿ ಬಿಎಂಟಿಸಿಯಲ್ಲಿ ಬೇರೆ ಹುದ್ದೆಗೆ ನಿಯೋಜಿಸಲಾಗುತ್ತದೆ. ಅದರಂತೆ ನೂರಾರು ನೌಕರರು ಹುದ್ದೆ ಬದಲಾವಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಇದೀಗ ಕ್ರಮ ಕೈಗೊಳ್ಳಲಾಗುತ್ತಿದೆ. ಪರ್ಯಾಯ ಹುದ್ದೆಗೆ ನಿಯೋಜಿಸುವ ಹಾಗೂ ಆರೋಗ್ಯ ಕಾರಣಕ್ಕಾಗಿ ಲಘು ಕೆಲಸ ನಿರ್ವಹಿಸಲು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ.

ಬಿಎಂಟಿಸಿ ನಿರ್ದೇಶಕರ ಅಧ್ಯಕ್ಷತೆಯ ಪರ್ಯಾಯ ಹುದ್ದೆ ಸಮಿತಿಯು ಶುಕ್ರವಾರ ಸಭೆ ನಡೆಸಲಿದ್ದು, ಅದರಲ್ಲಿ ಕೇಂದ್ರೀಯ ವಲಯ ಸೇರಿದಂತೆ ನಿಗಮದ ಎಲ್ಲ 7 ವಲಯಗಳಲ್ಲಿ ಸಲ್ಲಿಕೆಯಾಗಿರುವ ಮನವಿಯನ್ನು ಪರಿಶೀಲಿಸುವ ಕಾರ್ಯ ಮಾಡಿ ಬದಲಿ ಹುದ್ದೆ ಬದಲಾವಣೆ ಅಥವಾ ಲಘು ಕೆಲಸ ನೀಡಲು ತೀರ್ಮಾನಿಸಲಾಗುತ್ತದೆ.

Share this article