ನಿಯಮಗಳ ವಿರುದ್ಧ ಕೆಲಸ ಮಾಡಿದರೆ ಸೂಕ್ತ ಕ್ರಮ: ಶಶಿಧರ

KannadaprabhaNewsNetwork | Published : Jul 26, 2024 1:46 AM

ಸಾರಾಂಶ

ಸರ್ಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳು ಹೇಳಿದ್ದಾರೆ ಎಂದುಕೊಂಡು ಕಾನೂನು, ನಿಯಮಗಳ ವಿರುದ್ಧವಾಗಿ ಕೆಲಸ ಮಾಡಬಾರದು.

ತಾಲೂಕಾ ಮಟ್ಟದ ಸಾರ್ವಜನಿಕ ಕುಂದು ಕೊರತೆಗಳ ಮತ್ತು ಅಹವಾಲುಗಳ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಸರ್ಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳು ಹೇಳಿದ್ದಾರೆ ಎಂದುಕೊಂಡು ಕಾನೂನು, ನಿಯಮಗಳ ವಿರುದ್ಧವಾಗಿ ಕೆಲಸ ಮಾಡಬಾರದು. ಅಂತಹ ತಪ್ಪುಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಶಶಿಧರ ರಾಯಚೂರು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಸಾರ್ವಜನಿಕ ಕುಂದು ಕೊರತೆಗಳ ಮತ್ತು ಅಹವಾಲುಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಮಾತನ್ನು ಕೇಳಿಕೊಂಡು ನಿಯಮ ಹಾಗೂ ಕಾನೂನು ವಿರುದ್ಧ ಕೆಲಸ ಮಾಡಬಾರದು. ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ ಉಂಟಾದರೆ, ನಿಮ್ಮ ರಕ್ಷಣೆಗೆ ಯಾರು ಬರುವುದಿಲ್ಲ, ಹಾಗಾಗಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಾರ್ವಜನಿಕ ಮಾಹಿತಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಜೋಪಾನವಾಗಿ ಸಂರಕ್ಷಣೆ ಮಾಡಿಟ್ಟುಕೊಳ್ಳಬೇಕು. ಬೇರೊಬ್ಬರ ರಕ್ಷಣೆಗಾಗಿ ದಾಖಲಾತಿ ಕಳೆದುಹೋಗಿವೆ ಎಂದು ಹೇಳಬಾರದು, ಇದು ತಪ್ಪಾಗುತ್ತದೆ. ಒಂದು ವೇಳೆ ನಿಮ್ಮ ವ್ಯಾಪ್ತಿಯಲ್ಲಿ ಆಗಲಾರದ ಕೆಲಸವನ್ನು ಯಾರ ಕಡೆ ಹೋಗಬೇಕು ಎಂದು ಸಾರ್ವಜನಿಕರಿಗೆ ತಿಳಿಸಿ ಹೇಳಬೇಕು ಎಂದರು.

ವಯೋವೃದ್ಧರು ಹಾಗೂ ಅಂಗವಿಕಲರಿಗೆ ಆದಷ್ಟು ಶೀಘ್ರದಲ್ಲಿ ಕೆಲಸ ಮಾಡಿಕೊಡಬೇಕು. ಕಾರ್ಯಾಲಯಕ್ಕೆ ಬಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಕಾರ್ಯಾಲಯದಲ್ಲಿ ಕೆಲಸ ಮಾಡುವಾಗ ಕಡ್ಡಾಯವಾಗಿ ಇಲಾಖೆಯ ಐಡಿ ಕಾರ್ಡ್ ಹಾಕಿಕೊಳ್ಳಬೇಕು, ಪದನಾಮ ಬೋರ್ಡ್ ಹಾಕಿಕೊಳ್ಳಬೇಕು. ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಹಾಕಬೇಕು. ಲೋಕಾಯುಕ್ತದ ಬೋರ್ಡ್‌ಗಳನ್ನು ಹಾಕಬೇಕು ಈ ಮೂಲಕ ಪಾರದರ್ಶಕ ಆಡಳಿತಕ್ಕೆ ಮುಂದಾಗಬೇಕು ಎಂದರು.

ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಾಲದು ದಕ್ಷತೆಯಿಂದಲೂ ಕಾರ್ಯನಿರ್ವಹಿಸಬೇಕು. ಸಕಾಲದಲ್ಲಿ ಸೇವೆ ಒದಗಿಸುವ ಕೆಲಸ ಮಾಡಬೇಕು. ಕೆಟ್ಟವರ ಕೆಲಸ ಪೆಂಡಿಂಗ್ ಇಟ್ಟುಕೊಳ್ಳುವುದರಿಂದ ಒಳ್ಳೆಯವರ ಕೆಲಸವು ನಿಲ್ಲುತ್ತದೆ. ಸಾರ್ವಜನಿಕರ ಶಾಪದ ನಿಟ್ಟುಸಿರು ತಟ್ಟದಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಅಹವಾಲು ಸ್ವೀಕಾರ ಸಭೆಗೆ ಕೆಲವು ಅಧಿಕಾರಿಗಳು ಗೈರಾಗಿದ್ದನ್ನು ಕಂಡು ಗೈರು ಹಾಜರಾಗುವುದು ಕೆಟ್ಟ ಚಾಳಿ ಇದ್ದಂತೆ. ಈ ಚಾಳಿಯನ್ನು ಬಿಡಬೇಕು. ಹಕ್ಕುಗಳು ಬೇಕು ಹಾಗೂ ಕರ್ತವ್ಯಗಳು ಬೇಡ ಎಂಬಂತೆ ಕಾರ್ಯ ಮಾಡಬಾರದು. ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಶಶಿಧರ ಸೂಚಿಸಿದರು.

ಇದೇ ವೇಳೆ ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನರಾಗಿದ್ದನ್ನು ಕಂಡು ಸಭೆಯಲ್ಲಿ ಗಂಭೀರತೆ ಕಾಪಾಡಬೇಕು ಸಭೆಯ ಕಡೆ ಗಮನ ನೀಡಿ ಎಂದು ಬುದ್ದಿವಾದ ಹೇಳಿದರು.

ಅಹವಾಲು ಸ್ವೀಕಾರ:ಸೋಲಾರ ಕಂಪನಿಯಿಂದ ಹೊಲದಲ್ಲಿ ಹಾಳಾಗುತ್ತಿರುವ ಬೆಳೆ, ಕುಟುಂಬಸ್ಥರ ಕಿರುಕುಳ, ಅಕ್ರಮವಾಗಿ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಸೇರಿದಂತೆ ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಲೇವಾರಿ ಮಾಡುವಂತೆ ಎಸ್ಪಿ ತಿಳಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ಲೋಕಾಯುಕ್ತ ಉಪಾಧಿಕ್ಷಕರು, ವಿವಿಧ ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು ತಾಪಂ ಸಿಬ್ಬಂದಿಗಳು ಇದ್ದರು.

Share this article