ಜಮೀರ್ ವಕ್ಫ್‌ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರು ಕತ್ತೆ ಕಾಯುತ್ತಿದ್ದರಾ?

KannadaprabhaNewsNetwork |  
Published : Nov 06, 2024, 12:42 AM IST
೫ಎಚ್‌ವಿಆರ್೫ | Kannada Prabha

ಸಾರಾಂಶ

ವಕ್ಫ್ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದರು.

ಶಿಗ್ಗಾಂವಿ: ವಕ್ಫ್ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದರು.ಶಿಗ್ಗಾಂವಿ ಹಾಗೂ ಸವಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ರೋಡ್ ಶೋ ನಡೆಸಿ, ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

ಅಧಿಕಾರಿಗಳ ಮೇಲೆ ಒತ್ತಡ, ಕಿರುಕುಳ ಹೆಚ್ಚಾಗಿದೆ. ಅವರು ವಾಲ್ಮೀಕಿ ಹಗರಣ ಮಾಡಿದ್ದಕ್ಕೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ. ಈಗ ಮತ್ತೊಬ್ಬ ಅಧಿಕಾರಿ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನಬೆಳಗಾದರೆ ಸಚಿವರು ಲೂಟಿ ಮಾಡುತ್ತಿದ್ದಾರೆ. ಇವರು ಲೂಟಿ ಮಾಡುತ್ತಿರುವುದರಿಂದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ತುಘಲಕ್ ಜಮೀರ್‌ಗೆ ಎಲ್ಲ ಸರ್ವಾಧಿಕಾರ ನೀಡಿದ್ದಾರೆ. ತುಘಲಕ್ ಜಮೀರ್ ಸರ್ವಾಧಿಕಾರಿ ಥರ ವಕ್ಫ್ ಆಸ್ತಿ ಬಗ್ಗೆ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದರು.ವಾಲ್ಮೀಕಿ ನಿಗಮದ ಹಣವನ್ನು ರಾಜಾರೋಷವಾಗಿ ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿದ್ದಾರೆ. ವಾಲ್ಮೀಕಿ ಹಣ ಲೂಟಿ ಹೊಡೆಯುವಾಗ ಸರ್ಕಾರದಲ್ಲಿರುವ ಸಚಿವರು ಕತ್ತೆ ಕಾಯುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮುಡಾ ವಿಚಾರದಲ್ಲಿ ನಾಳೆ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಬೇಕು. ಎಲ್ಲದಕ್ಕೂ ತಾರ್ಕಿಕ ಅಂತ್ಯ ಸಿಗಲಿದೆ. ಮುಡಾ ಆಯುಕ್ತರ ಮನೆಯ ಸಿಸಿ ಕ್ಯಾಮೆರಾ ಮುರಿದು ಹಾಕಿದ್ದಾರೆ. ಕೇವಲ ೧೪-೧೫ ಸೈಟಿನ ಪ್ರಶ್ನೆ ಅಲ್ಲ ಇದು, ಸಾವಿರಾರು ಸೈಟುಗಳ ಹಂಚಿಕೆ ಆಗಿದೆ. ಸರ್ಕಾರದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ಆಕ್ರೋಶಗೊಂಡಿದ್ದಾರೆ. ಕಳೆದ ಏಳು ತಿಂಗಳಲ್ಲಿ ೨೭ ಸಾವಿರ ವಕ್ಫ್ ನೋಂದಣಿ ಮಾಡಲಾಗಿದೆ. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ವಕ್ಫ್ ವಿರುದ್ಧ ಕಾಯ್ದೆ ಮಂಡಿಸುತ್ತೇವೆ ಎಂದರು. ಸಂಡೂರಿನ ಸಂಸದ ತುಕಾರಾಂ ವಾಲ್ಮೀಕಿ ಹಣವನ್ನೇ ಲೂಟಿ ಮಾಡಿ ಚುನಾವಣೆಗೆ ಬಳಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಉಪ ಚುನಾವಣೆಯಲ್ಲಿ ಬಿಜೆಪಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂದು ಹೇಳಿದರು. ಸಮಾವೇಶದಲ್ಲಿ ಮಾಜಿ ಸಚಿವ ರಾಜು ಗೌಡ ಸೇರಿದಂತೆ ಅನೇಕರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ