ಭಟ್ಕಳ: ಈ ಸಲ ವ್ಯಾಪಕ ಕೊಳೆರೋಗದಿಂದ ಅಡಕೆ ಬೆಳೆಗೆ ಹಾನಿ ಒಂದು ಕಡೆಯಾದರೆ, ಇಳುವರಿಯೂ ಕಡಿಮೆಯಾಗಿರುವುದರಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನಲ್ಲಿ ಅಡಕೆ ಬೆಳೆ ಹೆಚ್ಚು ಬೆಳೆಯುತ್ತಿದ್ದು, ಈ ಸಲ ಭಾರಿ ಮಳೆಗೆ ಕೊಳೆರೋಗ ತಗುಲಿತ್ತು. ರೈತರು ಎರಡು ಬಾರಿ ರೋಗನಿರೋಧಕ ಔಷಧಿ ಸಿಂಪರಣೆ ಮಾಡಿದ್ದರೂ ಕೊಳೆರೋಗ ಕಡಿಮೆಯಾಗಿರಲಿಲ್ಲ. ರೈತರಿಗೆ ತೋಟದಲ್ಲಿ ಬಿದ್ದ ಕೊಳೆ ಅಡಕೆ ಸಂಗ್ರಹಿಸುವುದೇ ಕೆಲಸವಾಗಿತ್ತು.ಈ ಸಲ ಅಡಕೆ ಇಳುವರಿಯಲ್ಲೂ ಭಾರಿ ಕುಸಿತ ಕಂಡಿದೆ. ಆರೇಳು ಕ್ವಿಂಟಲ್ ಅಡಕೆ ಆಗುವುದು ಬರೀ ಮೂರೇ ಕ್ವಿಂಟಲ್‌ಗೆ ಇಳಿಕೆ ಕಂಡಿದೆ. ಡಿಸೆಂಬರ್ ತಿಂಗಳಲ್ಲೂ ಮಳೆ ಸುರಿಯುತ್ತಿರುವುದರಿಂದ ಬರುವ ವರ್ಷವೂ ಅಡಕೆ ಬೆಳೆಗೆ ಹೊಡೆತ ಎಂದೇ ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ. ಅಡಕೆಗೆ ಕೊಳೆರೋಗ ಮತ್ತು ಇಳುವರಿ ಕಡಿಮೆಯಾಗಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಡಕೆ ಬೆಳೆ ಹಾನಿಕಾರಕ ಎಂಬ ಆರೋಪಗಳು ಇತ್ತೀಚೆಗೆ ಜೋರಾಗಿ ಕೇಳಿ ಬರುತ್ತಿರುವುದರಿಂದ ಬೆಳೆಗಾರರು ಮತ್ತಷ್ಟು ಆತಂಕ ಎದುರಿಸುತ್ತಿದ್ದಾರೆ. ಹೆಚ್ಚಿನವರು ಅಡಕೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹೆಚ್ಚಾಗಿ ಈ ಬೆಳೆಗೇ ಹೊಂದಿಕೊಂಡು ಕೃಷಿ ಮಾಡುತ್ತಿದ್ದಾರೆ.ವಿವಿಧ ಕಾರಣಕ್ಕೆ ಅಡಕೆ ದರ ಕುಸಿತ ಕಂಡರೆ ಬೆಳೆಗಾರರು ತೊಂದರೆ ಅನುಭವಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ರೈತರು ಕೊಳೆ ರೋಗದ ಪರಿಹಾರಕ್ಕೆ ಪ್ರತಿವರ್ಷವೂ ತೋಟಗಾರಿಕೆ, ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಈ ಎರಡೂ ಇಲಾಖೆಗಳೂ ಜಂಟಿಯಾಗಿ ಕೊಳೆರೋಗದ ಬಗ್ಗೆ ಜಂಟಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿವೆ. ಆದರೆ ಅಡಕೆ ಕೊಳೆರೋಗಕ್ಕೆ ಕಳೆದ ಆರೇಳು ವರ್ಷಗಳಿಂದ ಸರ್ಕಾರದಿಂದ ಬಿಡಿಗಾಸೂ ಪರಿಹಾರ ಬಿಡುಗಡೆ ಆಗಿಲ್ಲ.
ಈ ಸಲದ ಭಾರೀ ಮಳೆ, ಗಾಳಿಯಿಂದಾದ ಪ್ರಕೃತಿವಿಕೋಪಕ್ಕೆ ಅಡಕೆ, ತೆಂಗು ಮುಂತಾದ ಮರಗಳಿಗೆ ಹಾನಿಯಾಗಿತ್ತು. ಆದರೆ ಇದಕ್ಕೆ ಸರ್ಕಾರ ನೀಡುವ ಅಲ್ಪಮೊತ್ತದ ಪರಿಹಾರ ಯಾತಕ್ಕೂ ಸಾಲುತ್ತಿಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಇತ್ತ ಕಾಡು ಪ್ರಾಣಿಗಳ ಹಾವಳಿಗೆ ರೈತರು ಹೈರಾಣಾಗಿ ಹೋಗಿದ್ದಾರೆ. ರಾತ್ರಿ ವೇಳೆ ಕಾಡುಹಂದಿ ತೋಟಕ್ಕೆ ನುಗ್ಗಿ ಬಾಳೆ, ಅಡಕೆ ಗಿಡ ಮುಂತಾದವುಗಳನ್ನು ಕಿತ್ತು ಹಾಕುತ್ತಿವೆ. ಹಗಲೊತ್ತಿನಲ್ಲಿ ಮಂಗಗಳು, ಕ್ಯಾಚಾಳ ಕಾಟ ಮಿತಿಮೀರಿದೆ.ರೈತರು ಕಷ್ಟಪಟ್ಟು ಬೆಳೆದ ಬೆಳೆ ಇವುಗಳು ತಿನ್ನಲು ಮಾಡಿದಂತಿದೆ. ರೈತರು ಮಂಗಗಳನ್ನು ಓಡಿಸಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದರೂ ಯಾವುದೇ ರೀತಿ ಪ್ರಯೋಜನ ಆಗುತ್ತಿಲ್ಲ. ಎಷ್ಟು ಓಡಿಸಿದರೂ ಮಂಗಗಳು ಪದೇ ಪದೇ ತೋಟಕ್ಕೆ ಬಂದು ಬಾಳೆಗೊನೆ, ತೆಂಗಿನ ಕಾಯಿ, ಸಿಂಹಾಳ, ಬೇರಲಸು ಮುಂತಾದ ಬೆಳೆಗಳನ್ನು ತಿನ್ನುತ್ತಿವೆ.
ಮಂಗಗಳು ರೈತರ ಯಾವುದೇ ತಂತ್ರಕ್ಕೂ ಹೆದರುತ್ತಿಲ್ಲ. ಮಂಗಗಳ ಉಪಟಳಕ್ಕೆ ರೈತರು ಬೆಳೆ ಬೆಳೆಯದ ಸ್ಥಿತಿ ಉಂಟಾಗಿದೆ. ಜನಸ್ಪಂದನ ಸಭೆ, ಗ್ರಾಮಸಭೆಗಳಲ್ಲಿ ರೈತರು ಕಾಡುಪ್ರಾಣಿ ಹಾವಳಿಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಆಗದೇ ಇರುವುದು ರೈತರ ಬೇಸರಕ್ಕೆ ಕಾರಣವಾಗಿದೆ.ದೇಶದ ಬೆನ್ನೆಲುಬಾಗಿರುವ ರೈತರ ಗೋಳು ಕೇಳುವವರು ಯಾರು? ಎನ್ನುವಂತಾಗಿದೆ. ಸರ್ಕಾರ ಇನ್ನಾದರೂ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಕೆಲಸ ಮಾಡಬೇಕು. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತಿಂದು ಹಾಕುವ ಕಾಡು ಪ್ರಾಣಿಗಳ ಹಾವಳಿ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆಹಾನಿ ಆಗಿರುವುದಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಲಭಿಸಬೇಕು ಎನ್ನುವ ಆಗ್ರಹ ರೈತರಿಂದ ಕೇಳಿ ಬಂದಿದೆ.
ಸೂಕ್ತ ಪರಿಹಾರ: ಈ ಸಲದ ಭಾರಿ ಮಳೆಗೆ ವ್ಯಾಪಕವಾಗಿ ಅಡಕೆ ಕೊಳೆ ರೋಗ ತಗುಲಿ ಬೆಳೆಯಾನಿಯಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಅಡಕೆ ಇಳುವರಿಯೂ ಕುಸಿತವಾಗಿದೆ. ಜತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಬಿಡುಗಡೆ ನೀಡಬೇಕು ಎಂದು ರೈತರಾದ ಕೃಷ್ಣಮೂರ್ತಿ ಹೆಗಡೆ ಕೋಟಖಂಡ ಆಗ್ರಹಿಸಿದರು.