ಹರಪನಹಳ್ಳಿ: ತಾಲೂಕಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳದ ಬೆಳೆಗೆ ಫಾಲ್ ಸೈನಿಕ ಹುಳ ಕೀಟದ ಬಾಧೆ ಕಂಡು ಬಂದಿದೆ, ಆದ್ದರಿಂದ ರೈತರು ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲ್ಲಿಯ ಸಹಾಯಕ ಕೃಷಿ ನಿರ್ದೆಶಕ ವಿ.ಸಿ.ಉಮೇಶ ಸಲಹೆ ನೀಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ 75 ಸಾವಿರ ಹೆಕ್ಟೇರ್, ಮೆಕ್ಕೆಜೋಳದ ಬಿತ್ತನೆ ಆಗಿದ್ದು, ಈಗ 15 ರಿಂದ 25 ದಿನಗಳ ಬೆಳೆ ಇದ್ದು, ಅಲ್ಲಲ್ಲಿ ಸೈನಿಕ ಹುಳ ಕಾಟ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಮೆಕ್ಕೆಜೋಳದ ಜೊತೆಗೆ ಭತ್ತ, ಜೋಳ, ಹತ್ತಿ ಮತ್ತು ಕೆಲವು ತರಕಾರಿ ಬೆಳೆಗಳನ್ನು ಸಹ ಈ ಕೀಟ ಹಾನಿ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.ಹೆಚ್ಚಿನ ತೇವಾಂಶ, ಕಡಿಮೆ ಉಷ್ಣಾಂಶದಲ್ಲೂ ಇದರ ಹಾವಳಿ ಹೆಚ್ಚು ಎಂದಿರುವ ಅವರು ಕೀಟ ಮುಖ್ಯವಾಗಿ ಮೆಕ್ಕೆಜೋಳದ ಸುರುಳಿಯಲ್ಲಿ ಅತಿ ಹೆಚ್ಚು ಹಾನಿ ಮಾಡುತ್ತದೆ. ಮೊದಲೆರಡು ಹಂತದ ಮರಿ ಹುಳುಗಳಿಂದ ಎಲೆಗಳ ಮೇಲೆ ಸಾಲು ರಂಧ್ರಗಳನ್ನು ಕಾಣಬಹುದು. ಮೂರನೇ ಮತ್ತು ನಂತರದ ಹಂತದ ಹುಳುಗಳು ಎಲೆಗಳ ಅಂಚನ್ನು ತಿನ್ನುವುದರಿಂದ ಎಲೆಗಳು ಹರಿದಂತೆ ಕಾಣುತ್ತವೆ ಎಂದು ಹೇಳಿದ್ದಾರೆ.
ಹತೋಟಿ ಕ್ರಮಗಳು:ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗ ಆಕರ್ಷಿಸಿ ನಾಶ ಪಡಿಸಬಹುದು. ಸಸಿಯಿಂದ ಮೊದಲ ಸುಳಿ ಹಂತ ಕಂಡು ಬಂದಾಗ ಮೊದಲ ಹಂತದ ಕ್ರೀಡೆಗಳನ್ನು ನಿರ್ವಹಿಸಲು ಶೇ.5 ಬೇವಿನ ಬೀಜದ ಕಷಾಯ ಅಥವಾ 5 ಮಿ.ಲೀ. ಅಜಾಡಿ ರೆಕ್ಷನ್ 1500 ಪಿಪಿಎಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.
ದ್ವಿತೀಯ ಸಿಂಪರಣೆಯಾಗಿ ಮಧ್ಯಮ ಸುಳಿ ಹಂತದಿಂದ ಕೊನೆಯ ಸುಳಿ ಹಂತದವರೆಗೆ 2ನೇ ಹಂತದ ಮರಿ ಹುಳುಗಳನ್ನು ನಿರ್ವಹಣೆ ಮಾಡಲು 0.35 ಗ್ರಾಂ ಎಮಾಮೆಕ್ಷನ್ ಬೆಂಜೋಯೇಟ್ 5 ಎಸ್ ಜಿ ಅಥವಾ 0.2 ಮಿಲೀ ಸ್ಪೈಸೋಸ್ಯಾಡ್ ಎಸ್ ಸಿ ಅಥವಾ 0.2 ಮಿಲೀ ಕ್ಲೋರ್ಯಾಂಟ್ರಿನಿಲಿ ಪ್ರೋಲ್ 18.5 ಎಸ್ ಸಿ ಅಥವಾ 0.5 ಮಿಲೀ ಸ್ಪೈನೋಟೋರಾಮ್11.7 ಎಸ್ ಸಿ ಪ್ರತಿ ಲೀಟರ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ.