ಆತ್ಮಭೂಷಣ್ಕನ್ನಡಪ್ರಭ ವಾರ್ತೆ ಮಂಗಳೂರುತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಚಾಲಕ ಹಾಗೂ ಶುಶ್ರೂಷಕರಿಗೆ ಕಳೆದ ಮೂರು ತಿಂಗಳಿಂದ ನಯಾ ಪೈಸೆ ವೇತನ ಪಾವತಿಯಾಗಿಲ್ಲ. ಹಾಗೆಂದು ಪ್ರತಿಭಟಿಸುವಂತೆಯೂ ಇಲ್ಲ, ಕರೆದಲ್ಲಿಗೆ ತೆರಳದಿದ್ದರೆ ಮೆಮೋಗೆ ಉತ್ತರಿಸಬೇಕು, ಇಲ್ಲವೇ ಎತ್ತಂಗಡಿ ಶಿಕ್ಷೆಗೆ ಸಿದ್ಧವಾಗಿರಬೇಕು.ರಾಜ್ಯದಲ್ಲಿ ಜಿವಿಕೆ ಅಡಿಯಲ್ಲಿ 500ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳಲ್ಲಿ ಎರಡು ಸರದಿಯಲ್ಲಿ ಸುಮಾರು ಮೂರು ಸಾವಿರದಷ್ಟು ಚಾಲಕ, ಶುಶ್ರೂಷಕರು ಒಡಂಬಡಿಕೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಇವರಿಗೆ ಮಾಸಿಕ ವೇತನ ಪಾವತಿಯಾಗಿಲ್ಲ. ಮಾರ್ಚ್ ಎರಡನೇ ವಾರ ಕಳೆದರೂ ಇನ್ನೂ ವೇತನ ಬಂದಿಲ್ಲ. ಈ ಬಗ್ಗೆ ಜಿವಿಕೆಯನ್ನು ಪ್ರಶ್ನಿಸಿದರೆ, ಸರ್ಕಾರ ಅನುದಾನ ನೀಡಿಲ್ಲ ಎಂದು ಸಮಜಾಯಿಷಿ ನೀಡುತ್ತಿದೆ. ವೇತನಕ್ಕಾಗಿ ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘ ಹೋರಾಟಕ್ಕೆ ಕೂಡ ಸರ್ಕಾರ ಅವಕಾಶ ನೀಡುತ್ತಿಲ್ಲ. ಹೀಗಾಗಿ ವೇತನ ಇಲ್ಲದೆ ದುಡಿಯುವ ಪರಿಸ್ಥಿತಿ ಈ ಸಿಬ್ಬಂದಿಯದ್ದಾಗಿದೆ.
ಎರಡು ವರ್ಷದಿಂದ ಆಗಾಗ ಸಮಸ್ಯೆ:ಆರೋಗ್ಯ ಕವಚ ಆ್ಯಂಬುಲೆನ್ಸ್ ಸಿಬ್ಬಂದಿಗೆ ವೇತನ ಸಮಸ್ಯೆ ಕಳೆದ ಎರಡು ವರ್ಷದಿಂದ ಪದೇ ಪದೇ ಕಾಡುತ್ತಿದೆ. ಪ್ರತಿ ತಿಂಗಳು ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಇದನ್ನು ಜಿವಿಕೆ ಗಮನಕ್ಕೆ ತಂದಾಗ ಒಮ್ಮೆಗೆ ಸರಿಯಾಗುತ್ತದೆ. ಮತ್ತೆ ಕೆಲವು ತಿಂಗಳಿಂದ ವೇತನ ಪಾವತಿ ಸಮಸ್ಯೆ ಯಥಾಪ್ರಕಾರ ಮುಂದುವರಿಯುತ್ತದೆ ಎನ್ನುವುದು ಸಿಬ್ಬಂದಿಗಳ ಅಳಲು.ಆ್ಯಂಬುಲೆನ್ಸ್ ಸಿಬ್ಬಂದಿ ದಿನದಲ್ಲಿ 12 ಗಂಟೆ ಕಾರ್ಯನಿರ್ವಹಿಸುತ್ತಾರೆ, 8 ಗಂಟೆ ಕನಿಷ್ಠ ದುಡಿಯಲೇ ಬೇಕು. ನಾಲ್ಕು ಗಂಟೆ ಹೆಚ್ಚುವರಿ ಕೆಲಸಕ್ಕೆ ವೇತನ ಜಾಸ್ತಿ ಕೊಡುತ್ತಾರೆ. ಈ ಹಿಂದೆ ಮಾಸಿಕ 10ರಿಂದ 14 ಸಾವಿರ ರು. ವರೆಗೆ ವೇತನ ಸಿಗುತ್ತಿತ್ತು. ಬಳಿಕ ಸರ್ಕಾರ 37 ಸಾವಿರ ರು. ವರೆಗೆ ವೇತನ ಏರಿಕೆ ಮಾಡಿದೆ. ಆದರೆ ವೇತನ ಏರಿಕೆಯಾದ ಬಳಿಕ ಅದನ್ನು ಸರಿಯಾಗಿ ಪಾವತಿಸಲಾಗುತ್ತಿಲ್ಲ. ಇದರಿಂದಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ಕೂಡ ಕಂಡಕಂಡವರಲ್ಲಿ ಸಾಲ ಮಾಡಿ ಬದುಕು ಸಾಗಿಸುವಂತಾಗಿದೆ.
ಒಂದು ಆ್ಯಂಬುಲೆನ್ಸ್‌ನಲ್ಲಿ ತಲಾ ನಾಲ್ಕು ಮಂದಿ ಸರದಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಗುತ್ತಿಗೆ ಅವಧಿ ನವೀಕರಣ ಪ್ರಕ್ರಿಯೆ ಬಾಕಿ ಇರುವುದರಿಂದ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎನ್ನುವುದು ಜಿವಿಕೆ ಸಂಸ್ಥೆಯ ಸಮಜಾಯಿಷಿ. ಆದರೆ ಖಚಿತವಾಗಿ ಸಮಸ್ಯೆ ಏನು ಎಂಬುದನ್ನು ಜಿವಿಕೆ ಹೇಳುತ್ತಿಲ್ಲ. ಇದರಿಂದಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ವೇತನಕ್ಕೆ ಪರದಾಟ ನಡೆಸುವಂತಾಗಿದೆ. ಆರೋಗ್ಯ ಇಲಾಖೆಯ ತುರ್ತು ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ(ಇಎಂಆರ್‌ಐ) ವೇತನ ಬಿಡುಗಡೆಯ ಜವಾಬ್ದಾರಿ ಹೊಂದಿದೆ.ಬಿಡಿ ಭಾಗಗಳಿಲ್ಲದೆ ಗೋಳುಹೆಸರಿಗೆ ಮಾತ್ರ ಆರೋಗ್ಯ ಕವಚದ ಆ್ಯಂಬುಲೆನ್ಸ್. ಆದರೆ ಬಿಡಿಭಾಗಗಳಿಗೆ ಸಿಬ್ಬಂದಿ ಎಡತಾಕಬೇಕಾಗುತ್ತದೆ. ಬಿಡಿ ಭಾಗಗಳ ಪೂರೈಕೆ ಸರಿಯಾಗಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆಟ್ಟುಹೋದ ಟಯರ್ ಬದಲಿಗೆ ಹೊಸ ಟಯರ್ ಅಳವಡಿಸಬೇಕು. ಆದರೆ ಸಕಾಲದಲ್ಲಿ ಟಯರ್ ಸಿಗದೇ ಇದ್ದರೆ, ಆ್ಯಂಬುಲೆನ್ಸ್ ಓಡಿಸುವಂತಿಲ್ಲ. ಹಾಗೆಂದು ಸಿಬ್ಬಂದಿ ಬೇರೆ ಆ್ಯಂಬುಲೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕು. ಬೇರೆ ಆ್ಯಂಬುಲೆನ್ಸ್ ಖಾಲಿ ಇದ್ದರೆ ಮಾತ್ರ ಇದು ಸಾಧ್ಯ. ಆ್ಯಂಬುಲೆನ್ಸ್ ಮೈಲೇಜ್ ನೀಡದಿದ್ದರೆ, ಚಾಲಕನಿಗೆ ನೋಟಿಸ್. ಮಾತ್ರವಲ್ಲ ವೇತನ ಕಡಿತ ಶಿಕ್ಷೆಗೂ ಒಳಗಾಗಬೇಕಾಗುತ್ತದೆ ಎನ್ನುವುದು ನೊಂದ ಚಾಲಕರ ಆರೋಪ.ಕಳೆದ ಸೆಪ್ಟೆಂಬರ್‌ನಲ್ಲಿ ನಮ್ಮ ವೇತನ ಹೆಚ್ಚಳಗೊಳಿಸಲಾಗಿತ್ತು. ಬಳಿಕ ಆರೇ ತಿಂಗಳಲ್ಲಿ ವೇತನ ಕಡಿತಗೊಳಿಸಲಾಗಿದೆ. ಮುಷ್ಕರಕ್ಕೆ ಕರೆ ನೀಡಿದಾಗ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುತ್ತದೆ. ಈಗ ಮುಷ್ಕರಕ್ಕೂ ಅವಕಾಶ ನೀಡುತ್ತಿಲ್ಲ. ಕಳೆದ ಡಿಸೆಂಬರ್‌ನಿಂದ ಈವರೆಗೆ ಮಾಸಿಕ ವೇತನವೂ ಪಾವತಿಯಾಗುತ್ತಿಲ್ಲ.-ಶ್ರೀಧರ್, ಅಧ್ಯಕ್ಷರು, ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘ, ಬೆಂಗಳೂರುಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಕನಿಷ್ಠ ವೇತನ ಅನುಷ್ಠಾನಗೊಂಡಿದೆ. ಹಿಂದಿನ ವೇತನದ ಮೊತ್ತಕ್ಕೂ ಹೆಚ್ಚಳಗೊಂಡ ಮೊತ್ತಕ್ಕೂ ಬಹಳ ವ್ಯತ್ಯಾಸವಿದೆ. ಆಗ 14 ಸಾವಿರ ರು., ಈಗ 37 ಸಾವಿರ ರು. ವರೆಗೂ ವೇತನ ಹೆಚ್ಚಳವಾಗಿದೆ. ಇದಕ್ಕಾಗಿ ಹೆಚ್ಚುವರಿ ಮೊತ್ತ ಬಿಡುಗಡೆಗೆ ಸರ್ಕಾರದ ಆರ್ಥಿಕ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರವೇ ಮಾರ್ಚ್ ವರೆಗಿನ ವೇತನ ಏಕಕಾಲದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮುಂದೆ ಇಂತಹ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇಲ್ಲ. ಪ್ರಭುದೇವ ಗೌಡ, ಉಪ ನಿರ್ದೇಶಕರು, ಇಎಂಆರ್‌ಐ ವಿಭಾಗ, ಆರೋಗ್ಯ ಇಲಾಖೆ, ಬೆಂಗಳೂರು