ಕನ್ನಡಪ್ರಭ ವಾರ್ತೆ ಹರಿಹರ
ಮುಸ್ಲಿಂ ಮಹಿಳೆಯರ ಅವಹೇಳನ ಮಾಡಿ ಕೋಮು ವೈಷಮ್ಯಕ್ಕೆ ಪ್ರಚೋದಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಬಂಧಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ಶಶಿಧರಯ್ಯರಿಗೆ ಮನವಿ ಸಲ್ಲಿಸಿದರು.ನಂತರ ಕದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಶ್ರೀರಂಗ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗಿ ಜೀವ ಹಾನಿಯೂ ಸಂಭವಿಸಬಹುದು. ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ, ಆದರೂ ಪೊಲೀಸರು ಭಟ್ಟರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಮಹಿಳೆಯನ್ನು ಭಾರತ ಮಾತೆಗೆ ಹೋಲಿಸುವ ಸಂಸ್ಕೃತಿ ಭಾರತೀಯರದ್ದು, ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಂ ಮಹಿಳೆಯರಿಗೆ ಶಾಶ್ವತ ಪತಿ ಸಿಕ್ಕಿದ್ದಾನೆ ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಸಾರ್ವಜನಿಕವಾಗಿ ಹೆಣ್ಣನ್ನು ತುಚ್ಛವಾಗಿ ಭಟ್ಟರು ಅವಮಾನಿಸಿರುವುದು ಕದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದರು.
ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಿರುವಾಗ ರಾಜ್ಯದಲ್ಲಿ ಕೋಮುಭಾವನೆ ಬಿತ್ತಿ, ವೈಷಮ್ಯ ಮೂಡಿಸುವ ಮೂಲಕ ಬಿಜೆಪಿಗೆ ಅನುಕೂಲ ಮಾಡುವ ಕುತಂತ್ರ ಇದರಲ್ಲಡಗಿದೆ ಎಂದು ಸಂಘಟನೆ ಭಾವಿಸಿದೆ. ಕಳೆದ ವರ್ಷ ನಡೆದ ವಿಧಾನಸಭೆ ಹೊಸ್ತಿಲಲ್ಲಿ ಹಿಜಾಬ್, ಹಲಾಲ್ ಕಟ್, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ವಿಷ ಬೀಜ ಬಿತ್ತಿ ರಾಜ್ಯದಲ್ಲಿ ಕಲಹ ಮೂಡಿಸುವಲ್ಲಿ ಭಟ್ಟರದ್ದೆ ಪಾತ್ರವಿದೆ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಭಟ್ಟರ ಬಂಧಿಸಿ ಜೈಲಿನಲ್ಲಿಡಬೇಕೆಂದು ಆಗ್ರಹಿಸಿದರು.ಈ ವೇಳೆ ಕಡ್ಲೆಗೊಂದಿ ಗ್ರಾಪಂ ಸದಸ್ಯೆ ಮಾತೆಂಗೆಮ್ಮ ತಿಮ್ಮಪ್ಪ, ಹನುಮಂತಪ್ಪ ಎಸ್.ಟಿ., ಜ್ಯೋತಿ, ಶೈಲ, ಸುನೀತಾ ಸಂಜೀವಪ್ಪ, ರುಕ್ಮಿಣಿ, ಮಾಗೋಡು ಹನುಮಕ್ಕ, ಶಾಂತಮ್ಮ ಮುಬೀನಾ, ಮಲ್ಲಮ್ಮ, ಗುಡ್ಡಪ್ಪ, ಪರುಶುರಾಮ, ಮರಿಯಮ್ಮ, ಕೊಟ್ರೇಶ್, ಶಂಷಾದ್, ಮುಬೀನಾಬಾನು, ನಾಗಮ್ಮ, ಹನುಮಕ್ಕ, ಗಂಗಮ್ಮ, ಶಾಹತಾಜ್ ಬಾನು, ಪುಷ್ಪ, ಶಕಂತಲಾ, ಭಾಗ್ಯಮ್ಮ, ಮಲ್ಲಮ್ಮ, ರತ್ನಮ್ಮ ಹಾಗೂ ಇತರರಿದ್ದರು.