ಹುಬ್ಬಳ್ಳಿ: ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೆರಳುತ್ತಿದ್ದ ಕರ್ನಾಟಕ ರಾಜ್ಯದ 70 ಜನ ರೈತರನ್ನು ಭೂಪಾಲನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಎಲ್ಲರನ್ನು ಉಜ್ಜಯಿನಿಯಲ್ಲಿನ ಧರ್ಮಛತ್ರವೊಂದರಲ್ಲಿ ಇರಿಸಲಾಗಿದೆ.
ದೆಹಲಿಯಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಯುಕ್ತ ಕಿಸಾನ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಪಾಲ್ಗೊಂಡಿವೆ. ಅದರಂತೆ ಕರ್ನಾಟಕದ ಧಾರವಾಡ, ಬೆಳಗಾವಿ, ಹಾಸನ, ತುಮಕೂರ, ಮೈಸೂರ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ರೈತರು ತೆರಳುತ್ತಿದ್ದರು.ನಿಜಾಮುದ್ದೀನ ರೈಲಿನ ಮೂಲಕ ತೆರಳುತ್ತಿದ್ದ 70 ರೈತರನ್ನು ಭೂಪಾಲದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದರು. ಭೂಪಾಲದಲ್ಲಿಯೇ ಒಂದು ದಿನ ಈ ಎಲ್ಲ ರೈತರನ್ನು ಇಡಲಾಗಿತ್ತು. ಅಲ್ಲಿಂದ ನೀವು ನಿಮ್ಮ ಊರಿಗೆ ತೆರಳುವುದಾದರೆ ಕಳುಹಿಸುತ್ತೇವೆ. ಇಲ್ಲದಿದ್ದಲ್ಲಿ ಬಂಧನದಲ್ಲಿಡುತ್ತೇವೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.
ಇದನ್ನು ಖಂಡಿಸಿ ಭೂಪಾಲದಲ್ಲೂ ಕರ್ನಾಟಕ ರೈತರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ದೆಹಲಿಗೆ ಹೋಗಿಯೇ ತೀರುತ್ತೇವೆ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಮರಳಿ ತೆರಳುವುದಿಲ್ಲ. ಪ್ರತಿಭಟನೆ ಮುಗಿಸಿಕೊಂಡೇ ಹೋಗುತ್ತೇವೆ ಎಂದು ಇಲ್ಲಿನ ರೈತರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಪೊಲೀಸರು ಕರ್ನಾಟಕದ ರೈತರನ್ನೆಲ್ಲ ಉಜ್ಜಯಿನಿಗೆ ರವಾನಿಸಿದ್ದಾರೆ. ಅಲ್ಲಿನ ಧರ್ಮ ಛತ್ರದಲ್ಲಿರಿಸಿದ್ದಾರೆ. ಎಷ್ಟು ದಿನ ನಮ್ಮನ್ನಿಡುತ್ತಾರೋ ಗೊತ್ತಿಲ್ಲ. ಆದರೆ, ನಾವು ಕರ್ನಾಟಕದವರು ಒಟ್ಟಾಗಿದ್ದೇವೆ. ದೆಹಲಿಗೆ ಹೋಗುತ್ತೇವೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದೇವೆ. ನಮ್ಮ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ನಡೆಸಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಧಾರವಾಡ ಜಿಲ್ಲೆ ಕಲಘಟಗಿ ರೈತ ಪರಶುರಾಮ ಎತ್ತಿನಗುಡ್ಡ ತಿಳಿಸಿದ್ದಾರೆ.ಕರ್ನಾಟಕದಿಂದ ತೆರಳಿರುವ 70 ಜನ ರೈತರ ಪೈಕಿ 25 ಮಹಿಳೆಯರಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿಯಿಂದಲೇ 16 ಜನ ರೈತರು ಪ್ರತಿಭಟನೆಗೆ ತೆರಳಿದ್ದಾರೆ.