ಹೊರರಾಜ್ಯದಲ್ಲಿ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ

KannadaprabhaNewsNetwork |  
Published : Jul 06, 2024, 01:17 AM ISTUpdated : Jul 06, 2024, 10:34 AM IST
ಬೈಕ್‌ ಕಳ್ಳತನ  | Kannada Prabha

ಸಾರಾಂಶ

ಹೊರರಾಜ್ಯಗಳಲ್ಲಿ ಕಾರು, ಟೆಂಪೋ, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಹೊರರಾಜ್ಯಗಳಲ್ಲಿ ಕಾರು, ಟೆಂಪೋ, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಶಾಹಿವುದ್ದೀನ್‌ ಖಾನ್‌(37) ಮತ್ತು ಕಲಬುರಗಿಯ ಮೊಹಮ್ಮದ್‌ ಶಕೀಲ್‌(45) ಬಂಧಿತರು. ಆರೋಪಿಗಳಿಂದ 51.30 ಲಕ್ಷ ರು. ಮೌಲ್ಯದ 9 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಗೋವಿಂದಪುರದ ಎಸ್‌ಕೆಬಿಕೆ ಕಾಲೇಜು ಬಳಿ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ. ಈತ ನೀಡಿದ ಮಾಹಿತಿ ಮೇರೆಗೆ ನಾಗವಾರ ಬಸ್‌ ನಿಲ್ದಾಣದ ಬಳಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದ್ದ ವಾಹನ ಕರ್ನಾಟಕದಲ್ಲಿ ಮಾರಾಟ:

ಆರೋಪಿಗಳು ಹೊರರಾಜ್ಯಗಳಲ್ಲಿ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು. ಕದ್ದ ವಾಹನಗಳನ್ನು ವೀರಣ್ಣಪಾಳ್ಯದ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ಖಾಲಿ ಜಾಗದಲ್ಲಿ ಎರಡು ಟೆಂಪೋ, ಒಂದು ರಾಯಲ್‌ ಎನ್‌ಫೀಲ್ಡ್‌, ಸುಜುಕಿ ಆ್ಯಕ್ಸಿಸ್‌ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಅಂತೆಯೇ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಳಗಾವಿಯ ಉಜ್ವಲ್‌ ನಗರದ ಪ್ಲಾಟ್‌ವೊಂದರ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 4 ಕಾರುಗಳು, 1 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಾಹನಗಳನ್ನು ಕಳವು ಮಾಡಿಕೊಂಡು ಕರ್ನಾಟಕಕ್ಕೆ ತರುತ್ತಿದ್ದರು. ಬಳಿಕ ವಾಹನಗಳ ನೋಂದಣಿ ಸಂಖ್ಯೆ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗಿರಾಕಿಗಳನ್ನು ಹಿಡಿದು ಮಾರಾಟ ಮಾಡಿ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ