ಶಿವಮೊಗ್ಗ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಚಿವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರು ಪುಲ್ವಾಮಾ ದಾಳಿಯಾಗಿದ್ದು ಯಾವ ಸರ್ಕಾರದಲ್ಲಿ ಎಂದು ಬಹಿರಂಗಪಡಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ಏನು ಆಗಿಯೇ ಇಲ್ವಾ? ಬಿಜೆಪಿಯವರು ವಿನಾಕಾರಣ ಬಾಂಬ್ ಬ್ಲಾಸ್ಟ್ ಮತ್ತು ಪಾಕಿಸ್ತಾನ ಪರ ಘೋಷಣೆಯ ವಿಚಾರಗಳನ್ನು ಎತ್ತುತ್ತಿದ್ದಾರೆ. ಈಗಾಗಲೇ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಯಾರೇ ಆಗಲಿ ದೇಶದ್ರೋಹದ ಕೆಲಸ ಮಾಡಿದರೆ, ಅದನ್ನು ಕ್ಷಮಿಸುವುದಿಲ್ಲ. ಹಾಗೆಯೇ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಫ್‌ಎಸ್‌ಎಲ್ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕ್ರಮ ತೆಗೆದುಕೊಳ್ಳುವಾಗ ಕಾನೂನುನ್ನು ಅನುಸರಿಸುವುದು ಸಹಜ ಪ್ರಕ್ರಿಯೆ ಎಂದು ಕುಟುಕಿದರು.ಈಗಾಗಲೇ ಬಾಂಬ್ ಬ್ಲಾಸ್ಟ್ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಖ್ಯಮಂತ್ರಿ ಅವರು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಾರೆ. ಆರೋಪಿಗಳ ಸುಳಿವು ಕೂಡ ಸಿಕ್ಕಿದೆ. ಅಗತ್ಯ ಕಾನೂನು ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಅನುದಾನ ನೀಡಲು ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವುದು ಯಾರು ಕೇಂದ್ರ ಸರ್ಕಾರ ಅಲ್ಲವೇ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲಿ. ರಾಜ್ಯದಲ್ಲಿ ಬರ ಸಮಸ್ಯೆಯನ್ನು ಎದುರಿಸಲು ಸರ್ಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಎಲ್ಲ ಜಿಲ್ಲಾಧಿಕಾರಿ ಬಳಿ ಹಣ ಇದೆ. ತೀರ ತೊಂದರೆಯಾದ ಕಡೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.- - - (-ಫೋಟೋ: ಮಧು ಬಂಗಾರಪ್ಪ)