ಕಲೆ, ಕಲಾವಿದರ ಉಳಿವಿಗೆ ಕಲಾ ಪೋಷಕರು ಅಗತ್ಯ

KannadaprabhaNewsNetwork | Published : Feb 21, 2024 2:00 AM

ಸಾರಾಂಶ

ಗ್ರಾಮೀಣ ನಾಟಕಗಳು ಮನೋಲ್ಲಾಸ ನೀಡುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾಗೃತಿ ಮೂಡಿಸುತ್ತವೆ. ಆದ್ದರಿಂದ ಕಲೆ, ಕಲಾವಿದರ ಉಳಿವಿಗೆ ಕಲಾಪೋಷಕರ ಅಗತ್ಯವಿದೆ. ನಾಟಕಗಳು ಪ್ರಾಚೀನ ಇತಿಹಾಸ ಹೊಂದಿವೆ. ಆದರೆ, ಕಲೆ ಮತ್ತು ಕಲಾವಿದರು ಕಣ್ಮರೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಕಲೆಗಳು ಉಳಿಯಬೇಕಿವೆ. ಇದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದ ಕಲಾಪೋಷಕರು ಸಹಕರಿಸಬೇಕು ಎಂದು ಸೊರಬ ತಾಲೂಕಿನ ಶಾಂತಗೇರಿಯಲ್ಲಿ ಅಂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎ.ಎಸ್. ಹೇಮಚಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ನಾಟಕಗಳು ಮನೋಲ್ಲಾಸ ನೀಡುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾಗೃತಿ ಮೂಡಿಸುತ್ತವೆ. ಆದ್ದರಿಂದ ಕಲೆ, ಕಲಾವಿದರ ಉಳಿವಿಗೆ ಕಲಾಪೋಷಕರ ಅಗತ್ಯವಿದೆ ಎಂದು ಅಂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎ.ಎಸ್. ಹೇಮಚಂದ್ರ ಹೇಳಿದರು.

ಭಾನುವಾರ ರಾತ್ರಿ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಮುಖಂಡ ಎ.ಒ. ಆನಂದಪ್ಪ ಅಂಬ್ಲಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ "ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ " ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಟಕಗಳು ಪ್ರಾಚೀನ ಇತಿಹಾಸ ಹೊಂದಿವೆ. ಆದರೆ, ಕಲೆ ಮತ್ತು ಕಲಾವಿದರು ಕಣ್ಮರೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಕಲೆಗಳು ಉಳಿಯಬೇಕಿವೆ. ಇದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದ ಕಲಾಪೋಷಕರು ಸಹಕರಿಸಬೇಕು. ಸತತ ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯವಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.

ಅಂಡಿಗೆ ಗ್ರಾಪಂ ಅಧ್ಯಕ್ಷೆ ಶಾರದಾ ಮಿಡಿಯಪ್ಪ ನಾಟಕ ಪ್ರದರ್ಶನ ಉದ್ಘಾಟಿಸಿದರು. ಅಂಡಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಾಂತಪ್ಪ ಅಂಬ್ಲಿ ಶಾಂತಗೇರಿ ಶಿವಮೊಗ್ಗ ಅಚೀವರ್ಸ್‌ ಕೋಚಿಂಗ್ ಸೆಂಟರ್ ಮಾಲೀಕ ಎ.ಎಸ್. ಶಿವಕುಮಾರ್ ಶಾಂತಗೇರಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ ಕಲೆಯ ಬಗ್ಗೆ ಉಪನ್ಯಾಸ ನೀಡಿದರು. ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ ಅಂಬ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಳಿಕ ಗುರುರಾಜ ಜಿ. ಸೋಮಣ್ಣನವರ್ ವಿರಚಿತ "ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ " ನಾಟಕವನ್ನು ಕವಡಿ ಗ್ರಾಮದ ಶ್ರೀ ಸಿದ್ಧಬಸವೇಶ್ವರ ಕಲಾ ನಾಟ್ಯ ಸಂಘದವರು ಅಭಿನಯಿಸಿದರು. ಜಿ.ಮಾಲತೇಶ್ ಮಾವಲಿ ಸಂಗೀತ ನಿರ್ದೇಶನ ನಾಟಕದಲ್ಲಿತ್ತು.

ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ್‌ಕುಮಾರ್, ಮಾವಲಿ ಪ್ರೌಢಶಾಲೆ ನಿರ್ದೇಶಕ ಗೋವಿಂದಪ್ಪ, ಪ್ರಮುಖರಾದ ಗುರುಬಸಪ್ಪಗೌಡ, ಹಿರಿಯಪ್ಪ, ತಾರಪ್ಪ, ಕುಬೇರಪ್ಪ, ಗೋಪಾಲಪ್ಪ, ಅಶೋಕ್‌ ಗೌಡ, ಎಚ್.ಡಿ. ಉಮೆಶ್, ಶೇಷಪ್ಪ, ಪುರುಷೋತ್ತಮ, ಮಂಜಪ್ಪ, ಮಹೇಂದ್ರ, ನಾಗರಾಜ್ ಸೇರಿದಂತೆ ಗ್ರಾಮಸ್ಥರಿದ್ದರು.

ಕಾಂಗ್ರೆಸ್ ಮುಖಂಡ ರಾಜು ಆಟೋ ಶಾಂತಗೇರಿ ಸ್ವಾಗತಿಸಿದರು. ಎಂ.ಧನುಷ್ ಪ್ರಾರ್ಥಿಸಿ, ಮುಖಂಡ ಎ.ಒ.ಆನಂದಪ್ಪ ಅಂಬ್ಲಿ ನಿರೂಪಿಸಿ, ವಂದಿಸಿದರು.

- - - -19ಕೆಪಿಸೊರಬ01:

ಸೊರಬ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ "ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ " ಸಾಮಾಜಿಕ ನಾಟಕ ಪ್ರದರ್ಶನವನ್ನು ಅಂಡಿಗೆ ಗ್ರಾಪಂ ಅಧ್ಯಕ್ಷೆ ಶಾರದಾ ಮಿಡಿಯಪ್ಪ ಉದ್ಘಾಟಿಸಿದರು.

Share this article