ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಬೆನ್ನಿಗೇ ಪುತ್ತೂರಿನ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರನೆ ಬೇಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾತ್ರವಲ್ಲ ಪುತ್ತಿಲ ಪರಿವಾರ ಕೂಡ ಬಿಜೆಪಿಯಲ್ಲಿ ವಿಲೀನಗೊಂಡಿದೆ. ಇದರೊಂದಿಗೆ ಪುತ್ತೂರಿನಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿದ್ದ ಪುತ್ತಿಲ ಪರಿವಾರದ ಬಿಕ್ಕಟ್ಟು ಸಂಪೂರ್ಣ ಶಮನಗೊಂಡಂತಾಗಿದೆ.ದ.ಕ. ಲೋಕಸಭಾ ಅಭ್ಯರ್ಥಿ ಬದಲಾವಣೆಗೊಂಡ ಬೆನ್ನಿಗೆ ಪುತ್ತಿಲ ಬಿಕ್ಕಟ್ಟು ನಿವಾರಣೆಗೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದು, ಮರುದಿನವೇ ಹಠಾತ್ತನೆ ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿ ಒಂದೇ ರಾತ್ರಿಯಲ್ಲಿ ಬಿಕ್ಕಟ್ಟು ಇತ್ಯರ್ಥಪಡಿಸಿದ್ದಾರೆ.
ಅಭ್ಯರ್ಥಿ ಆಯ್ಕೆ ಸಲುವಾಗಿ ದೆಹಲಿಯಲ್ಲಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಗುರುವಾರ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಹಾಗೂ ಬಿಜೆಪಿ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಅದರಂತೆ ಗುರುವಾರವೇ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಪುತ್ತೂರು ಮಂಡಲ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ನಗರ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಸೇರಿದಂತೆ ಪ್ರಮುಖರು ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಸೌಧಕ್ಕೆ ತೆರಳಿದ್ದರು. ಅಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಖಂಡರಾದ ಸುನಿಲ್ ಕುಮಾರ್ ಮತ್ತಿತರರ ಜತೆ ಮಾತುಕತೆ ನಡೆಯಿತು.ಬೇಷರತ್ ಸೇರ್ಪಡೆ:
ಬಿಜೆಪಿ ಸಿದ್ಧಾಂತದ ಪ್ರಕಾರ ಬೇಷರತ್ ಆಗಿ ಪಕ್ಷ ಸೇರ್ಪಡೆಗೊಳ್ಳಬೇಕು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕವೇ ಸೂಕ್ತ ಸ್ಥಾನಮಾನ ಬಗ್ಗೆ ನಾಯಕರು ನಿರ್ಧರಿಸುತ್ತಾರೆ. ಮೊದಲು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶಕ್ತಿಮೀರಿ ಶ್ರಮಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತುಕತೆ ವೇಳೆ ತಿಳಿಸಿದ್ದರು. ಅಲ್ಲದೆ ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಬೇಕು ಎಂದೂ ಹೇಳಿದ್ದರು.ಈ ಎಲ್ಲ ಬೇಡಿಕೆಗಳ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಒಪ್ಪಿಗೆ ಸೂಚಿಸಿದ್ದು, ಅಲ್ಲಿಯೇ ಬೇಷರತ್ ಆಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಪುತ್ತಿಲ ಪರಿವಾರವನ್ನು ಕೂಡ ಬಿಜೆಪಿ ಜತೆ ವಿಲೀನಗೊಳಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರನ್ನು ಹೂಗುಚ್ಛ ನೀಡುವ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷಕ್ಕೆ ಬರಮಾಡಿಕೊಂಡರು ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಇಂದು ಅಧಿಕೃತ ಸೇರ್ಪಡೆ:ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಮಾ.15ರಂದು ಸಂಜೆ 6 ಗಂಟೆ ಬಿಜೆಪಿ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರು ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಬರಮಾಡಿಕೊಳ್ಳಲಿದ್ದು, ಪುತ್ತಿಲ ಪರಿವಾರ ಬಿಜೆಪಿ ಜತೆ ವಿಲೀನ ಬಗ್ಗೆಯೂ ಘೋಷಿಸಲಿದ್ದಾರೆ. ಚುನಾವಣಾ ಉಸ್ತುವಾರಿ ಹುದ್ದೆ?:
ಅರುಣ್ ಕುಮಾರ್ ಪುತ್ತಿಲಗೆ ಸದ್ಯಕ್ಕೆ ಲೋಕಸಭಾ ಚುನಾವಣೆಯ ಉಸ್ತುವಾರಿಯಂತಹ ಹುದ್ದೆ ನೀಡುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ಉಸ್ತುವಾರಿ ನೀಡಿ, ಅಲ್ಲಿ ಅವರ ಸಾಮರ್ಥ್ಯವನ್ನು ಅವಲಂಬಿಸಿ ಬಳಿಕ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷ ನಾಯಕರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.ಪುತ್ತೂರಲ್ಲಿ ಶೀಘ್ರ ಅದ್ದೂರಿ ಸಮಾವೇಶ:
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಕಳೆಕುಂದಿದ ಬಿಜೆಪಿಯನ್ನು ಪುಟಿದೆಬ್ಬಿಸಲು ಪುತ್ತೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಒಂದು ವಾರದಲ್ಲಿ ಪುತ್ತೂರಿನಲ್ಲಿ ಬಿಜೆಪಿಯ ದೊಡ್ಡ ಕಾರ್ಯಕ್ರಮ ನಡೆಯಲಿದ್ದು, ಅರುಣ್ ಕುಮಾರ್ ಪುತ್ತಿಲ ಅವರ ಬಲ ಪ್ರದರ್ಶನಕ್ಕೆ ಅದು ವೇದಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ. ಅರುಣ್ ಕುಮಾರ್ ಪುತ್ತಿಲ ಪುತ್ತೂರು ಪ್ರತಿಕ್ರಿಯಿಸಿ, ಇನ್ನು ಮುಂದೆ ಪುತ್ತಿಲ ಮತ್ತು ಮೋದಿ ಪರಿವಾರ ಜತೆಯಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡ ಅಂತರದಿಂದ ಗೆಲವಿಗೆ ಕೆಲಸ ಮಾಡಲಿದೆ. ಪಕ್ಷದ ಗೌರವ ಎತ್ತಿ ಹಿಡಿಯಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.