ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕನಾಗಿ ಸದಾ ಬದ್ಧ

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ಹೊಸನಗರ: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಶಾಸಕನಾಗಿ ನಾನು ಸದಾ ಬದ್ಧನಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಹೊಸನಗರ: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಶಾಸಕನಾಗಿ ನಾನು ಸದಾ ಬದ್ಧನಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯತಿ ಹಾಗೂ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಸಹಯೋಗದಲ್ಲಿ ಶಾಲೆಯ 114ನೇ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಚಿಣ್ಣರ‌ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ‌ಅವರು ಮಾತನಾಡಿದರು.

ಸಮಾಜದಲ್ಲಿ ಶೈಕ್ಷಣಿಕ ಪ್ರಗತಿಯಾದರೆ ಅದು ಸಾಮಾಜಿಕ ಪರಿವರ್ತನೆಯ ಹೊಸ ಹೊಳಹು ಮೂಡಿದಂತೆ. ಶೈಕ್ಷಣಿಕ ಪ್ರಗತಿಯ ಆಧಾರದ ಮೇಲೆ ಆ ಸಮಾಜ ಭವಿಷ್ಯ ನಿಂತಿದೆ. ಶಾಲೆ ಒಂದು ಸಾಮಾಜಿಕ ಪರಿವರ್ತನೆಯ ಕೇಂದ್ರ ಆಗಬೇಕು. ಸಮಾಜದಲ್ಲಿ ಏನೇನು ಕೊರತೆಗಳಿವೆಯೋ ಅವು ಶಾಲೆಯಿಂದ ನೀಗುವಹಾಗಾಗಬೇಕು. ಆದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದರು.

ಈ ಶಾಲೆಯು ಜಿಲ್ಲೆಯಲ್ಲೇ ಎರಡನೇ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ನಿರತ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನುರಿತ ಶಿಕ್ಷಕರ ಬೋಧನೆಯ ಸಹಕಾರದಿಂದ ಶಿಕ್ಷಣದ ಜೊತೆಯಲ್ಲಿ ಬೋಧಕೇತರ ಚಟುವಟಿಕೆಗಳಲ್ಲೂ ಪ್ರಗತಿ ಕಂಡಿದೆ ಎಂದರು.

ಶಾಸಕನಾಗಿ ಶಾಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ 24 ಲಕ್ಷ ರು. ಅನುದಾನ ಮಂಜೂರು ಮಾಡಿದ್ದೇನೆ. ಶೌಚಾಲಯ, ಸುಸಜ್ಜಿತ ವೇದಿಕೆ, ಶಾಲಾ ಕೊಠಡಿಗಳಿಗೆ ಸುಣ್ಣ-ಬಣ್ಣದ ಕಾರ್ಯ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಸುಸಜ್ಜಿತ ಕೆ.ಪಿ.ಎಸ್ ಶಾಲೆಯೊಂದನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ನೇರ್ಲೆ ರಮೇಶ್ ಮಾತನಾಡಿ, ಶಾಲಾ ಹಲವು ಚಟುವಟಿಕೆಗಳ ಅನುಷ್ಠಾನದಲ್ಲಿ ರಾಜಕೀಯ ಸಲ್ಲದು. ಶಾಲೆ ಯಾರೋಬ್ಬರ ಸೊತ್ತಲ್ಲ. ಶಾಲೆಗೆ ನೀಡಿದ ಸಹಕಾರದಿಂದ ವ್ಯಕ್ತಿಯನ್ನು ಗುರುತಿಸಬೇಕು ವಿನಃ ವ್ಯಕ್ತಿಯಿಂದ ಶಾಲೆಯನ್ನು ಸಮಾಜದಲ್ಲಿ ಗುರುತಿಸುವ ಪರಿಪಾಠಕ್ಕೆ ಇತಿಶ್ರೀ ಹಾಡಬೇಕಿದೆ ಎಂದರು.

ಪಟ್ಟಣ ಪಂಚಾಯತಿ ಸದಸ್ಯ ಕೆ.ಕೆ.ಅಶ್ವಿನಿ ಕುಮಾರ್ ಮಾತನಾಡಿದರು.

ಇದೇ ವೇಳೆ ಮಕ್ಕಳ ಹಸ್ತ ಪ್ರತಿ ಪುಸ್ತಕವನ್ನು ಶಾಸಕ ಗೋಪಾಲಕೃಷ್ಣ ಬಿಡುಗಡೆಗೊಳಿಸಿದರು. ಹಿರಿಯ ವೈದ್ಯ ಡಾ.ರಾಮಚಂದ್ರ, ಮಲೆನಾಡು ವಾಯ್ಸ್ ಪತ್ರಿಕೆಯ ಸಂಪಾದಕ ನಗರ ರಾಘವೇಂದ್ರ, ಅರ್ಚಕ ರಾಘವೇಂದ್ರ, ನಾಟಿ ವೈದ್ಯೆ ಮುಮ್ತಾಜ್, ಯೂತ್ ಫಾರ್ ಸೇವಾ ಆಶ್ರಿತ್, ಪ್ರತಿಭಾವಂತ ಹಳೇ ವಿದ್ಯಾರ್ಥಿ ಎಂ.ಆರ್.ಪ್ರಣತಾ ಸೇರಿದಂತೆ ಹಲವು ಸಾಧಕರನ್ನು ಆತ್ಮೀಯವಾಗಿ ಇದೇ ವೇಳೆ ಸಮಿತಿ ಸನ್ಮಾನಿಸಿತು.ವೇದಿಕೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಾಸಂತಿ ಕೊತ್ವಲ್, ವಿದ್ಯಾರ್ಥಿ ಪ್ರತಿನಿಧಿ ಚಿಂತನ್, ಬಿಇಒ ಕೃಷ್ಣಮೂರ್ತಿ, ಶಾಲಾಭಿವೃದ್ಧಿ ಸಮಿತಿಯ ರೋಹಿಣಿ ದೀಪಕ್, ಗೌತಮ್ ಆಚಾರ್ಯ, ಇತರೆ ಸದಸ್ಯರು ಉಪಸ್ಥಿತರಿದ್ದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ಶಿಕ್ಷಕಿ ಲತಾ ನಾಯಕ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಂ.ಎನ್.ಹರೀಶ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಗಾಯತ್ರಿ ಪಟಗಾರ್, ತಾರಾ ಪಟಗಾರ್ ನಿರೂಪಿಸಿದರು. ಶಿಕ್ಷಕ ರಾಮಾ ನಾಯಕ್ ವಂದಿಸಿದರು.

Share this article