ಸೂರ್ಯ-ಚಂದ್ರ ಇರುವವರೆಗೂ ಶಿವಾಜಿ ಸಾಧನೆ ಶಾಶ್ವತ- ತಹಸೀಲ್ದಾರ್ ಬಡಿಗೇರ

KannadaprabhaNewsNetwork | Published : Feb 20, 2024 1:47 AM

ಸಾರಾಂಶ

ಭಾರತದಲ್ಲಿ ಅನೇಕ ರಾಜ- ಮಹಾರಾಜರು ಬಂದು ಹೋಗಿದ್ದಾರೆ. ಆದರೆ ಹಿಂದೂ ಸಮಾಜವನ್ನು ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಮರೆಯಬಾರದು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ಶಿರಹಟ್ಟಿ: ಭಾರತದಲ್ಲಿ ಅನೇಕ ರಾಜ- ಮಹಾರಾಜರು ಬಂದು ಹೋಗಿದ್ದಾರೆ. ಆದರೆ ಹಿಂದೂ ಸಮಾಜವನ್ನು ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಮರೆಯಬಾರದು. ಸೂರ್ಯಚಂದ್ರ ಇರುವವರೆಗೂ ಅವರ ಸಾಧನೆ ಶಾಶ್ವತ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ಸೋಮವಾರ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ೩೯೭ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶಿವಾಜಿ ಮರಾಠಾ ಸಾಮ್ರಾಜ್ಯಕ್ಕಿಂತ ಹಿಂದೂಗಳ ಸಾಮ್ರಾಜ್ಯ ಕಟ್ಟಿದ ಇತಿಹಾಸಕಾರ. ಅವರ ಸಾಹಸಗಾಥೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ಧೈರ್ಯ, ಶೌರ್ಯ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.

ತಾಲೂಕು ಮರಾಠಾ ಸಮಾಜದ ಅಧ್ಯಕ್ಷ ಪರಮೇಶ ಪರಬ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಶಿವಾಜಿಯದು ಅತ್ಯಂತ ಶಿಸ್ತುಬದ್ಧ ವ್ಯಕ್ತಿತ್ವ. ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಇತಿಹಾಸದ ಪುಟದಲ್ಲಿ ಅಜರಾಮರವಾಗಿದೆ. ಶಿವಾಜಿಯ ಇತಿಹಾಸ ಅರಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಮೊಘಲರು, ಸುಲ್ತಾನರು ಹಾಗೂ ಬ್ರಿಟಿಷರು ದೇಶ ಕೊಳ್ಳೆ ಹೊಡೆಯುವ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿವಾಜಿ ಸಾಮ್ರಾಜ್ಯವನ್ನು ಸ್ಥಾಪಿಸಿ ಉತ್ತಮ ಆಡಳಿತಗಾರನಾಗಿದ್ದನು ಎಂದರು. ೧೭ನೇ ಶತಮಾನದಲ್ಲಿ ಭಾರತದಲ್ಲಿ ಅಶಾಂತಿ, ಅರಾಜಕತೆ ತಾಂಡವಾಡುತ್ತಿತ್ತು. ಬ್ರಿಟಿಷರು, ದೆಹಲಿ ಸುಲ್ತಾನರು, ಮೊಘಲರು ಭಾರತದಲ್ಲಿ ನೆಲೆಸಿ ಹಿಂದೂ ಧರ್ಮದ ವಿನಾಶವನ್ನು ಬಯಸುತ್ತಿದ್ದರು. ಈ ಸಂದರ್ಭದಲ್ಲಿ ಶಿವಾಜಿ ಮಾಡಿದ ಧರ್ಮ ರಕ್ಷಣೆ ಅಮೋಘ ಎಂದು ಸ್ಮರಿಸಿದರು.

ಶಿವಾಜಿ ಮಹಾರಾಜರು ಯಾವುದೇ ಜಾತಿ-ಧರ್ಮದ ವಿರೋಧಿಯಾಗಿರಲಿಲ್ಲ. ದೇಶದಲ್ಲಿ ನಡೆಯುವ ಅನ್ಯಾಯ ಮತ್ತು ಅತ್ಯಾಚಾರದ ವಿರುದ್ಧ ಸಮರ ಸಾರಿ ಸಮಾನತೆ ಮತ್ತು ರಾಷ್ಟ್ರ ನಿರ್ಮಾಣ ನಿರ್ಮಾಪಕರಾಗಿದ್ದರು. ಇವರ ವಿಚಾರಗಳು ಬಲಿಷ್ಠ ಭಾರತಕ್ಕೆ ಉತ್ತಮ ಮಾರ್ಗದರ್ಶನವಾಗಿವೆ ಎಂದರು.

ಅನಿಲ ಮಾನೆ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಎನ್.ಆರ್. ಕುಲಕರ್ಣಿ, ಚಂದ್ರಕಾಂತ ನೂರಶೆಟ್ಟರ, ಅಜ್ಜು ಪಾಟೀಲ, ಪುಲಕೇಶ ಸ್ವಾಮಿ, ವಿಠಲ ಬಿಢವೆ, ಮಹೇಶ ಪರಬತ, ಶ್ರೀಕಾಂತ ಹಾದಿಮನಿ, ದೇವೇಂದ್ರ ಪವಾರ, ಮಹಾಂತೇಶ ದಶಮನಿ, ಅಶೋಕ ವರವಿ, ಪರಸು ಡೊಂಕಬಳ್ಳಿ, ಅಕ್ಬರ ಯಾದಗೀರಿ, ಬಸಣ್ಣ ನಾಯ್ಕರ್ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

Share this article