ವಿಧಾನಸಭೆ ಚುನಾವಣೆಯಲ್ಲಿ ನಂಬಿದವರಿಂದಲೇ ಮೋಸ: ಗೋವಿಂದ ಕಾರಜೋಳ

KannadaprabhaNewsNetwork |  
Published : Jul 09, 2024, 12:49 AM IST
ಮುಧೋಳ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಳದಿಂದ ನೂತನ ಸಂಸದರಾದ ಗೋವಿಂದ ಕಾರಜೋಳ, ಗದ್ದಿಗೌಡರ ಹಾಗೂ ವಿಪ ಸದಸ್ಯ ನಾರಾಯಣಸಾ ಬಾಂಡಗೆ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು | Kannada Prabha

ಸಾರಾಂಶ

ನಮ್ಮ ವೈರಿಗಳಿಂದ ನಮಗೆಂದಿಗೂ ಮೋಸವಾಗಲ್ಲ. ನಾವು ನಂಬಿದವರಿಂದಲೇ ಮೋಸ ಆಗುತ್ತದೆ ಎಂದು ಹಿರಿಯರು ಹೇಳಿದ ಮಾತು ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ನನ್ನ ಅರಿವಿಗೆ ಬಂತು ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಕನ್ನಡ ಪ್ರಭ ವಾರ್ತ ಮುಧೋಳ

ನಮ್ಮ ವೈರಿಗಳಿಂದ ನಮಗೆಂದಿಗೂ ಮೋಸವಾಗಲ್ಲ. ನಾವು ನಂಬಿದವರಿಂದಲೇ ಮೋಸ ಆಗುತ್ತದೆ ಎಂದು ಹಿರಿಯರು ಹೇಳಿದ ಮಾತು ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ನನ್ನ ಅರಿವಿಗೆ ಬಂತು ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಸೋಮವಾರ ಸ್ಥಳೀಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮುಧೋಳ ಗ್ರಾಮೀಣ ಹಾಗೂ ನಗರ ಮಂಡಲ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ನಾನೇ ಹೊಣೆ ಹೊರುತ್ತೇನೆ ಎಂದು ಹೇಳಿದ ಅವರು, ಹಲವು ಕಾರಣಗಳಿಂದ ನಾನು ಸೋಲಬೇಕಾಯಿತು. ಪಕ್ಷದ ಹೈಕಮಾಂಡ್ ಸೂಚನೆಯಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದೆ. ಕ್ಷೇತ್ರದ ಮತದಾರರು ನಾನು ಹೊರಗಿನವ ಎಂದು ನೋಡದೆ ಸಚಿವನಾಗಿದ್ದಾಗ ಮಾಡಿರುವ ಕೆಲಸ ಕಾರ್ಯ ಮೆಚ್ಚಿ ಆಶೀರ್ವಾದ ಮಾಡಿ ಗೆಲ್ಲಿಸಿದರು. ಹೀಗಾಗಿ ಆ ಕ್ಷೇತ್ರದ ಮತದಾರರಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಚಿತ್ರದುರ್ಗದ ಸಂಸದನಾದರೂ ಮುಧೋಳ ವಿಧಾನಸಭೆ ಮತಕ್ಷೇತ್ರದ ಮತದಾರರು ಆಶೀರ್ವಾದದಿಂದ ಶಾಸಕ, ಸಚಿವ, ಉಪಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿದೆ. ಹೀಗಾಗಿ ನನ್ನ ಕೊನೆಯ ಉಸಿರು ಇರೋವರೆಗೂ ಕ್ಷೇತ್ರದ ಜನತೆಯ ಋುಣ ಮರೆಯಲ್ಲ ಎಂದು ಹೇಳಿದ ಅವರು, ನನ್ನ ಅಧಿಕಾರ ಅವಧಿಯಲ್ಲಿ ರಸ್ತೆ, ನೀರಾವರಿ, ಶಿಕ್ಷಣ, ಆರೋಗ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ಇನ್ನೊಂದು ಅವಧಿಗೆ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶ ಹೊಂದಿದ್ದೆ. ಆದರೆ, ಮತದಾರರು ಆಶೀರ್ವದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಂಸದರು, ಆದಾಗ್ಯೂ ನಾನು ಮತ್ತು ಪಿ.ಸಿ.ಗದ್ದಿಗೌಡರ ಅವರು ಸೇರಿಕೊಂಡು ಈ ಭಾಗದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್‌ ಸದಸ್ಯ ಮಾರುತಿರಾವ ಮೂಳೆ ಮಾತನಾಡಿದರು. ಬಿಜೆಪಿ ಮುಖಂಡ ಹನುಮಂತ ಕೊಟಬಾಗಿ, ಬಾಗಲಕೋಟೆ-ವಿಜಯಪುರ ಜಿಲ್ಲಾ ಕೆಎಂಎಫ್‌ ನಿರ್ದೇಶಕ ವಿವೇಕಾನಂದ ಪಾಟೀಲ, ಬಿಜೆಪಿ ಮುಧೋಳ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಣ್ಣ ಕಾತರಕಿ, ನಗರ ಮಂಡಲ ಅಧ್ಯಕ್ಷ ಕರಬಸಯ್ಯ ಹಿರೇಮಠ, ಅರುಣ ಕಾರಜೋಳ ಸೇರಿದಂತೆ ಪಕ್ಷದ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮುಧೋಳ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲ ವತಿಯಿಂದ ನೂತನ ಸಂಸದರನ್ನು ಸನ್ಮಾನಿಸಿ, ಗೌರವಿಸಲಾಯಿತು, ತಾಲೂಕಿನ ಸಹಸ್ರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ನೂತನ ಸಂಸದರನ್ನು ಸನ್ಮಾನಿಸಿ, ಅಭಿನಂದಿಸಿದರು. ಪಿ.ಡಿ.ಕುಂಬಾರ ನಿರೂಪಿಸಿದರು, ನಾಗಪ್ಪ ಅಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಾರಂಭಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಬೈಕ್ ರ್‍ಯಾಲಿ ಮೂಲಕ ನೂತನ ಸಂಸದರನ್ನು ತೆರೆದ ವಾಹನದಲ್ಲಿ ವೇದಿಕೆಗೆ ಕರೆ ತರಲಾಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ