- ಯುವ ಜನಾಂಗಕ್ಕೆ ನಿವೃತ್ತ ಎಸಿಪಿ ಜಿ.ಎನ್. ಮೋಹನ್ ಸಲಹೆ---
ಯುವ ಜನಾಂಗ ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿಹಿಡಿಯಬೇಕಾಗಿದೆ ಎಂದು ನಿವೃತ್ತ ಎಸಿಪಿ ಜಿ.ಎನ್. ಮೋಹನ್ ತಿಳಿಸಿದರು.
ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ಭಾರತ ದೇಶದ ಸುಭದ್ರತೆಗೆ ಸಂವಿಧಾನವೇ ಕಾರಣ. ನಮ್ಮ ಸಂವಿಧಾನ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಜೊತೆಗೆ ಅದರಂತೆ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಎಂದರು.ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಜನ ಹೋರಾಡಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ದೇಶ ಎಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದೆಯೋ ಅಷ್ಟೇ ಅನ್ಯಾಯದ, ಅಕ್ರಮಗಳೂ ನಡೆಯುತ್ತಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕಾದವರು ವಿದ್ಯಾರ್ಥಿಗಳೇ. ವಿದ್ಯಾರ್ಥಿಗಳೇ ದೇಶದ ಆಸ್ತಿ ಎಂದು ಅವರು ಹೇಳಿದರು.
ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಯಾವುದೇ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಾಗ್ವಾದ ನಡೆದಾಗ ಸಂಘರ್ಷ ತಡೆಯಲು ಮೌನವಾಗಿರುವುದು ಒಳಿತು. ಆದರೆ, ಕೆಲವು ಸಂದರ್ಭಗಳಲ್ಲಿ ಮೌನ ಸಹ ಅನ್ಯಾಯಕ್ಕೆ ಕಾರಣವಾಗುತ್ತದೆ. ಸಮಾಜಕ್ಕೆ ಅನ್ಯಾಯವಾಗುತ್ತಿದ್ದರೂ ಮೌನವಾಗಿರುವುದು ಸರಿಯಲ್ಲ ಎಂದರು.