ಅಥ್ಲೆಟಿಕ್ಸ್‌: ಸಮಗ್ರ ಪ್ರಶಸ್ತಿಗೆ ಮುತ್ತಿಟ್ಟ ಮಂಗಳೂರು

KannadaprabhaNewsNetwork |  
Published : Nov 09, 2024, 01:15 AM IST
ಸಮಗ್ರ ಪ್ರಶಸ್ತಿ ಪಡೆದ ಮಂಗಳೂರಿನ ಫಾದರ್‌ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ಮಂಡ್ಯ ವೈದ್ಯಕೀಯ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಆಯೋಜಕರು ಘೋಷಿಸಿದರು. ನಂತರ ಮಂಡ್ಯ ಕ್ರೀಡಾಪಟುಗಳಿಗೆ ಟ್ರೋಫಿ ಕೂಡ ವಿತರಿಸಲಾಯಿತು.

ಹುಬ್ಬಳ್ಳಿ:

ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಕೆಎಂಸಿಆರ್‌ಐ)ದ ಆಟದ ಮೈದಾನದಲ್ಲಿ ನ. 5ರಿಂದ 4 ದಿನ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) 22ನೇ ಅಂತರ್‌ ಕಾಲೇಜು ಅಥ್ಲೆಟಿಕ್ ಕೂಟದಲ್ಲಿ ಮಂಗಳೂರಿನ ಫಾದರ್‌ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಸಮಗ್ರ ಪ್ರಶಸ್ತಿಗೆ ಮುತ್ತಿಟ್ಟಿತು.

39 ಅಂಕಗಳೊಂದಿಗೆ ಮಂಗಳೂರಿನ ಫಾದರ್‌ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದರೆ, 35 ಅಂಕಗಳೊಂದಿಗೆ ಮಂಡ್ಯ ವೈದ್ಯಕೀಯ ಕಾಲೇಜು ದ್ವಿತೀಯ ಸ್ಥಾನ, 29 ಅಂಕ ಗಳಿಸಿ ಮೂಡುಬಿದಿರೆಯ ಆಳ್ವಾಸ್‌ನ ನ್ಯಾಚುರೋಪಥಿ ಮತ್ತು ಯೋಗವಿಜ್ಞಾನ ಕಾಲೇಜು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಪುರುಷರ ವಿಭಾಗದಲ್ಲಿ ಒಟ್ಟು 25 ಅಂಕಗಳೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ಒಟ್ಟು 31 ಅಂಕಗಳೊಂದಿಗೆ ಮಂಗಳೂರಿನ ಅಥೆನಾ ನರ್ಸಿಂಗ್ ಕಾಲೇಜು ಟೀಮ್ ಚಾಂಪಿಯನ್ ಟ್ರೋಫಿಗೆ ಭಾಜನರಾದವು.

ಸೂರ್ಯ, ಸಾಕ್ಷಿ ಬೆಸ್ಟ್‌ ಅಥ್ಲೆಟ್‌:

ಪುರುಷರ ವಿಭಾಗದಲ್ಲಿ ಉದ್ದಜಿಗಿತ, ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಪಡೆದ ಮೂಡುಬಿದಿರೆ ಆಳ್ವಾಸ್‌ನ ಆರೋಗ್ಯ ವಿಜ್ಞಾನ ಕಾಲೇಜಿನ ಸೂರ್ಯ ಪಿ. ಹಾಗೂ ಮಹಿಳೆಯರ ವಿಭಾಗದಲ್ಲಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಸಾಕ್ಷಿ ಎಸ್‌.ಡಿ 800 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ, ಲಾಂಗ್‌ಜಂಪ್ ಹಾಗೂ ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಬೆಸ್ಟ್‌ ಅಥ್ಲಿಟ್ ಆಗಿ ಹೊರಹೊಮ್ಮಿದರು. ಸಮಾರೋಪದಲ್ಲಿ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಪ್ರಶಸ್ತಿ ವಿತರಣೆಯಲ್ಲಿ ಗೊಂದಲ..

ಶುಕ್ರವಾರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ಮಂಡ್ಯ ವೈದ್ಯಕೀಯ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಆಯೋಜಕರು ಘೋಷಿಸಿದರು. ನಂತರ ಮಂಡ್ಯ ಕ್ರೀಡಾಪಟುಗಳಿಗೆ ಟ್ರೋಫಿ ಕೂಡ ವಿತರಿಸಲಾಯಿತು. ಇದಾದ ಕೆಲ ನಿಮಿಷಗಳ ನಂತರ ಆಗಿರುವ ರೆಫರಿ ಓರ್ವರು ಮಾಡಿದ ಯಡವಟ್ಟು ಅರಿವಾದ ಬಳಿಕ ಮಂಡ್ಯ ವೈದ್ಯಕೀಯ ಕಾಲೇಜಿಗೆ ನೀಡಲಾಗಿದ್ದ ಸಮಗ್ರ ಚಾಂಪಿಯನ್‌ ಟ್ರೋಫಿಯನ್ನು ಮರಳಿ ಪಡೆದು ಮಂಗಳೂರಿನ ಫಾದರ್‌ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿಗೆ ನೀಡಲಾಯಿತು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ