ಕಾಸರಗೋಡಿನ ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಘಟನೆ : ಅಡೂರ್‌ ಪೊಲೀಸ್‌ ಠಾಣೆಗೆ ದೂರು

KannadaprabhaNewsNetwork |  
Published : Nov 09, 2024, 01:22 AM ISTUpdated : Nov 09, 2024, 10:06 AM IST
ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ  | Kannada Prabha

ಸಾರಾಂಶ

ಘಟನೆ ಬಗ್ಗೆ ಹಿಂದೂ ಸಂಘಟನೆ ಸೇರಿ ಕೇರಳ ಹಾಗೂ ಕರ್ನಾಟಕ ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಬೋವಿಕ್ಕಾನ, ಬದಿಯಡ್ಕ ಮತ್ತಿತರ ಕಡೆಗಳಲ್ಲಿ ಹಿಂದು ಐಕ್ಯವೇದಿ ಸಂಘಟನೆ ಪ್ರತಿಭಟನೆ ನಡೆದಿತ್ತು.

 ಮಂಗಳೂರು : ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಕಾಸರಗೋಡಿನ ಬೋವಿಕ್ಕಾನದಲ್ಲಿ ಪ್ರಯಾಣಿಸುತ್ತಿದ್ದ ವಾಹನ ತಡೆದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಸ್ಥಳೀಯ ಹಿಂದು ಐಕ್ಯವೇದಿ ಸಂಘಟನೆ ಅಡೂರು ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ನೀಡಿದೆ.

ಎಡನೀರು ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಬೋವಿಕ್ಕಾನ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಹಿಂದು ಐಕ್ಯವೇದಿ ಪ್ರಧಾನ ಕಾರ್ಯದರ್ಶಿ ರಾಜನ್‌ ಮುಳಿಯಾರ್‌ ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದಾಳಿ ಘಟನೆ: ಸಂಸದರ ಪತ್ರಕ್ಕೆ ತುರ್ತು ಸ್ಪಂದಿಸಿದ ಕೇರಳ ಸಿಎಂ

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಪ್ರಯಾಣಿಸುತ್ತಿದ್ದ ವಾಹನ ತಡೆದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಸ್ಪಂದಿದ್ದಾರೆ. ಜೊತೆಗೆ ಈ ಘಟನೆ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ನ.3 ರಂದು ಎಡನೀರು ಶ್ರೀಗಳು ಕಾಸರಗೋಡಿನ ಬೊವಿಕ್ಕಾನದಲ್ಲಿ ಸಂಚರಿಸುತ್ತಿರುವಾಗ ಅವರ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡಗಟ್ಟಿ ಹಲ್ಲೆಗೆ ಯತ್ನಿಸಿದ್ದರು. ಈ ಘಟನೆ ಖಂಡಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೇರಳ ಸಿಎಂಗೆ ನ. 6 ರಂದು ಪತ್ರ ರವಾನಿಸಿದ್ದರು. ಸಂಸದರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಪಿಣರಾಯಿ ವಿಜಯನ್‌ ಅವರು ಘಟನೆಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಪೊಲೀಸ್ ಇಲಾಖೆ ಕಾರ್ಯೋನ್ಮುಖರಾಗುವಂತೆ ಡಿಜಿಪಿಯವರಿಗೆ ಸೂಚನೆ ನೀಡಿರುವುದಾಗಿ ತಮ್ಮ ಪ್ರತ್ಯುತ್ತರ ನೀಡಿದ್ದಾರೆ. ಕೇರಳ ಸಿಎಂ ನಡೆ ಸ್ವಾಗತಾರ್ಹ

ಈ ಘಟನೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ತುರ್ತು ಸ್ಪಂದಿಸಿರುವ ಸ್ವಾಗತಿಸಿರುವ ಕ್ಯಾ. ಚೌಟ ಅವರು ಈ ಘಟನೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬರೆದ ನಮ್ಮ ಪತ್ರಕ್ಕೆ ಕೇರಳ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇರಳ ಪೊಲೀಸ್ ಇಲಾಖೆಗೆ ನಿರ್ದೇಶಿಸಿದ್ದಾರೆ. ಈ ವಿಚಾರವಾಗಿ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಾಸರಗೋಡಿನಲ್ಲಿ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು, ಧಾರ್ಮಿಕ ಸಂಸ್ಥೆಗಳ ಸುರಕ್ಷತೆಗೆ ಕೇರಳ ಪೊಲೀಸರು ಆದ್ಯತೆ ನೀಡಬೇಕಾಗಿದೆ ಎಂದು ಸಂಸದರು ಮನವಿ ಮಾಡಿದ್ದಾರೆ.

ಈ ಘಟನೆ ಬಗ್ಗೆ ಹಿಂದೂ ಸಂಘಟನೆ ಸೇರಿ ಕೇರಳ ಹಾಗೂ ಕರ್ನಾಟಕ ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಬೋವಿಕ್ಕಾನ, ಬದಿಯಡ್ಕ ಮತ್ತಿತರ ಕಡೆಗಳಲ್ಲಿ ಹಿಂದು ಐಕ್ಯವೇದಿ ಸಂಘಟನೆ ಪ್ರತಿಭಟನೆ ನಡೆದಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ