ಕನ್ನಡಪ್ರಭ ವಾರ್ತೆ ವಿಜಯಪುರ
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ವೇಳೆ ಕಾರಾಗೃಹದಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಮಾಡಿ, ಪ್ರಸಾದ ಹಂಚಿದ ಆರೋಪದ ಮೇಲೆ ಮಹಾರಾಷ್ಟ್ರ ಮೂಲದ ಮೂವರು ಕೈದಿಗಳ ಮೇಲೆ ಮುಸ್ಲಿಂ ರೌಡಿಶೀಟರ್ ಮತ್ತು ಅಧಿಕಾರಿಗಳು ಜ.23ರಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿ ಕೈದಿಯೊಬ್ಬ ಹರಿಬಿಟ್ಟಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಕಾರಾಗೃಹದ (ದರ್ಗಾ ಜೈಲು) ಅಧಿಕಾರಿಗಳು, ರಾಮನ ಫೋಟೊ ಪೂಜೆಯ ವಿಚಾರಕ್ಕೆ ಗಲಾಟೆ ನಡೆದಿಲ್ಲ. ಅವರವರ ವೈಯಕ್ತಿಕ ವಿಚಾರಕ್ಕಾಗಿ ಗಲಾಟೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದೆ ಈ ವಿಡಿಯೋ ವೈರಲ್‌ನಲ್ಲಿ?:ದರ್ಗಾ ಜೈಲ್ಲಿನಲ್ಲಿರುವ ಮಹಾರಾಷ್ಟ್ರ ಮೂಲದ ಕೈದಿ ಪರಮೇಶ್ವರ ಜಾಧವ ಎನ್ನುವ ಕೈದಿಯೊಬ್ಬ ಈ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಇದು ತೀವ್ರ ಸಂಚಲನ ಮೂಡಿಸಿದೆ. ಇದು ಮೂರು ನಿಮಿಷಗಳ ವಿಡಿಯೋ ತುಣುಕಾಗಿದ್ದು, ಪ್ರಸ್ತುತ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಜೈಲಿನಲ್ಲಿ ರಾಮನ ಪೂಜೆ ಮಾಡಿದ್ದಕ್ಕೆ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಲಾಗಿದೆ. ಇದರಲ್ಲಿ ಜೈಲಿನಲ್ಲಿರುವ ಇಬ್ಬರು ಮುಸ್ಲಿಂ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದ್ದಾನೆ.ಜೈಲಿನ ಕಂಬಿ ಹಿಂದೆ ಕುಳಿತು ವಿಡಿಯೋ ಮಾಡಿರುವ ಮಹಾರಾಷ್ಟ್ರ ಕೈದಿ ಪರಮೇಶ್ವರ ಜಾಧವ ಎಂಬಾತ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥಗೆ ಕ್ರಮಕ್ಕಾಗಿ ಮನವಿ ಮಾಡಿದ್ದಾನೆ. ನಾವು ರಾಮನ ಪೂಜೆ ಮಾಡಿದ್ದೇವೆ. ಇದೆ ಕಾರಣಕ್ಕೆ ಜೈಲಿನಲ್ಲಿ ನಮ್ಮ ಮೇಲೆ ಹಲ್ಲೆಯಾಗಿದೆ. ನಮಗೆ ಅನ್ಯಾಯವಾಗಿದ್ದು ಇದಕ್ಕೆ ಸ್ಪಂದಿಸುವಂತೆ ಕೈದಿ ಮನವಿ ಮಾಡಿದ್ದಾನೆ. ಇಡೀ ಘಟನಾವಳಿ ಕುರಿತಂತೆ ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೆ ಮೂರು ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಜೈಲಿನಲ್ಲಿ ಮೊಬೈಲ್ ಹೇಗೆ ಬಂತು?:ವಿಜಯಪುರ ದರ್ಗಾ ಜೈಲಿನಲ್ಲಿರುವ ಕೈದಿಗಳ ಕೈಗೆ ಮೊಬೈಲ್ ಹೇಗೆ ಬಂತು ಎಂಬ ಚರ್ಚೆ ಕೂಡ ಈಗ ಶುರುವಾಗಿದೆ. ಜೈಲುಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವುದು, ಇಟ್ಟುಕೊಳ್ಳುವುದನ್ನು ಸರ್ಕಾರ ನಿಷೇಧ ಮಾಡಿದೆ. ಸಿಬ್ಬಂದಿ ಸಹ ಜೈಲಿನ ಒಳಗೆ ಮೊಬೈಲ್ ಬ ಳಸುವಂತಿಲ್ಲ. ಹೀಗಾಗಿ ಈಗ ಕೈದಿ ಜಾಧವ ಬಳಿ ಮೊಬೈಲ್ ಹೇಗೆ ಬಂತು? ಯಾರ ಮೊಬೈಲ್‌ನಿಂದ ಆತ ವಿಡಿಯೋ ಮಾಡಿದ್ದಾನೆ ಎನ್ನುವ ಪ್ರಶ್ನೆ ಕೂಡ ಬಂದಿದೆ.
ಅಧಿಕಾರಿಗಳ ಸ್ಪಷ್ಟನೆ ಏನು?:ಶ್ರೀರಾಮನ ಫೋಟೋ ಪೂಜೆಯಿಂದಾಗಿ ಜೈಲಿನಲ್ಲಿ ಕೈದಿಗಳ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಸುಳ್ಳು. ಆ ರೀತಿ ಘಟನೆಯೇ ನಡೆದಿಲ್ಲ. ಬೇಕಂತಲೇ ರಾಮ ಮಂದಿರ ವಿಚಾರಕ್ಕೆ ಇದನ್ನು ತಳಕು ಹಾಕಲಾಗುತ್ತಿದೆ. ಜ.23 ರಂದು ಜೈಲಿನ ಒಳಗೆ ಕೈದಿ ಶೇಖ್ ಮೋದಿ ಗ್ಯಾಂಗ್ ಹಾಗೂ ಈ ಮೂವರು ಕೈದಿಗಳ ನಡುವೆ ಬೇರೆ ಯಾವುದೋ ವಿಚಾರಕ್ಕೆ ವಾಗ್ವಾದ ಆಗಿತ್ತು. ಅದರ ನಿಯಂತ್ರಣಕ್ಕೆ ಎರಡು ಗುಂಪುಗಳನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿತ್ತು. ಇದರ ರಿವೆಂಜ್‌ಗಾಗಿ ಈ ಕೈದಿಗಳು ವಿಡಿಯೋ ರೆಕಾರ್ಡ್ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಸದ್ಯ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕೈದಿ ಪರಮೇಶ್ವರ ಜಾಧವ ಸೇರಿ ಇನ್ನಿಬ್ಬರು ಮಹಾರಾಷ್ಟ್ರದ ಯರವಾಡ ಜೈಲಿನಲ್ಲೂ ಈ ಹಿಂದೆ ಇದೆ ರೀತಿ ಮಾಡಿದ್ದರು. ಯರವಾಡ ಜೈಲಿನಲ್ಲಿ ಗಲಾಟೆ ಮಾಡಿಕೊಂಡ ಬಳಿಕವೇ ಅವರನ್ನು ವಿಜಯಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದು ಜೈಲು ಅಧೀಕ್ಷಕ (ಸೂಪರಿಂಟೆಂಡೆಂಟ್) ಡಾ.ಐ.ಜಿ.ಮ್ಯಾಗೇರಿ ಸ್ಪಷ್ಟನೆ ನೀಡಿದ್ದಾರೆ.ಜೈಲಿನಲ್ಲಿ ಮೊಬೈಲ್ ಬಳಕೆಯಾದ ಬಗ್ಗೆ, ಕೈದಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಮೊಬೈಲ್ ಕಾರಾಗೃಹದ ಒಳಗೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಡಾ.ಐ.ಜಿ.ಮ್ಯಾಗೇರಿ, ಜೈಲು ಅಧೀಕ್ಷಕ (ಸೂಪರಿಂಟೆಂಡೆಂಟ್), ದರ್ಗಾ ಜೈಲು