ಗ್ಯಾಂಗ್ ರೇಪ್ ಕೇಸ್ ಮುಚ್ಚಿಹಾಕಲು ಪ್ರಯತ್ನ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ

KannadaprabhaNewsNetwork |  
Published : Jan 21, 2024, 01:30 AM IST
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ಸ್ಥಳೀಯ ಪೊಲೀಸರಿಂದ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ. ಅದಕ್ಕಾಗಿ ಎಸ್‌ಐಟಿ ರಚಿಸಿ ತನಿಖೆ ನಡೆಸಿದರೆ ಎಲ್ಲ ಸತ್ಯಾಂಶ ಬೆಳಕಿಗೆ ಬರಲಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಹಾನಗಲ್ಲ ಪೊಲೀಸರು ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದರು. ದೂರು ನೀಡಿದಂತೆ ಸಂತ್ರಸ್ತೆಗೆ ಆಮಿಷವೊಡ್ಡಿದ್ದರು. ಸ್ಥಳೀಯ ಪೊಲೀಸರಿಂದ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ. ಅದಕ್ಕಾಗಿ ಎಸ್‌ಐಟಿ ರಚಿಸಿ ತನಿಖೆ ನಡೆಸಿದರೆ ಎಲ್ಲ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ಇಲ್ಲಿಯ ಎಸ್ಪಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ, ಚಿಕಿತ್ಸೆ ಕೊಡಿಸಲು ಶಾಸಕರಿಗೆ ಹೇಳುತ್ತೇನೆ ಎಂದಿರುವ ಸಿಎಂ ಹೇಳಿಕೆ ಆಶ್ಚರ್ಯವನ್ನುಂಟು ಮಾಡಿದೆ. ಗೂಂಡಾ ಶಕ್ತಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮರಿ ಗೂಂಡಾಗಳು ಮೆರೆಯುತ್ತಿದ್ದಾರೆ. ಅವರಿಗೆ ಪೊಲೀಸರು, ಕಾನೂನಿನ ಭಯವಿಲ್ಲವಾಗಿದೆ. ತಮ್ಮ ರಕ್ಷಣೆಗೆ ಸರ್ಕಾರ, ಪೊಲೀಸರು ಇದ್ದಾರೆ ಎಂಬ ಕಾರಣಕ್ಕೆ ದುಷ್ಟ ಶಕ್ತಿಗಳು ಮೆರೆಯುತ್ತಿವೆ. ಹಾನಗಲ್ಲ ಪಿಎಸ್‌ಐ ಎಲ್ಲಾ ವ್ಯವಹಾರ ಮಾಡಿದ್ದು. ಆದರೆ, ಅವರನ್ನು ಅಮಾನತು ಮಾಡಿಲ್ಲ, ಇಬ್ಬರು ಅಮಾಯಕರನ್ನು ಬಂಧಿಸಿದ್ದಾರೆ. ಹೀಗಾಗಿ ಎಸ್‌ಐಟಿ ರಚಿಸಿ ಹೊರಗಿನ ಹಿರಿಯ ಪೊಲೀಸರನ್ನು ಕಳುಹಿಸಿ ತನಿಖೆಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ಈ ಸರ್ಕಾರ ಎಲ್ಲವನ್ನೂ ಮುಚ್ಚಿಹಾಕಲು ಯತ್ನಿಸುತ್ತಿದೆ. ಸಂತ್ರಸ್ತೆಗೆ ₹೫೦ಲಕ್ಷ ಕೊಟ್ಟು ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರಗಳನ್ನೆಲ್ಲಾ ಮುಚ್ಚಿ ಬಿಟ್ಟು ಎಲ್ಲಾ ಅಧಿಕಾರವನ್ನೂ ನಿಮ್ಮ ಶಾಸಕರಿಗೆ ಕೊಟ್ಟು ಬಿಡಿ. ಗೃಹಸಚಿವರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಪೊಲೀಸರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲ್ಲಾ ಪೋಸ್ಟಿಂಗ್‌ಗಳಿಗೂ ರೇಟ್ ಫಿಕ್ಸ್ ಆಗಿದೆ. ನಿಷ್ಠಾವಂತ ಪೊಲೀಸರಿಗೆ ಕೆಲಸ ಮಾಡಲು ಆಗದ ಪರಿಸ್ಥಿತಿಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ರಾವಣರಿಗೆ ಅವಕಾಶ ಕೊಡಬೇಡಿ. ಈ ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪೊಲೀಸರು ಅಪರಾಧಿಗಳು, ಕಾಂಗ್ರೆಸ್ ಪುಡಾರಿಗಳ ಪರ ನಿಲ್ಲಬಾರದು. ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಬಾರದು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು. ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಟ್ಕಾ, ಓಸಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಶಶಿಧರ ಹೊಸಳ್ಳಿ, ರುದ್ರೇಶ ಚೆನ್ನಣ್ಣನವರ, ಜಗದೀಶ ಬಸೇಗಣ್ಣಿ, ಭೋಜರಾಜ ಕರೂದಿ, ಶೋಭಾ ನಿಸ್ಸೀಮಗೌಡ್ರ, ಮಂಜುನಾಥ ಮಡಿವಾಳರ, ಸುರೇಶ ಹೊಸಮನಿ, ಪವನಕುಮಾರ ಮಲ್ಲಾಡದ, ಸಂತೋಷ ಆಲದಕಟ್ಟಿ, ಕಿರಣ ಕೋಣನವರ ಇತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ