ಧಾರವಾಡ: ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಒಕ್ಕೂಟದ ಕಲ್ಪನೆಯನ್ನು ನಾಶ ಮಾಡುವ ಪ್ರಯತ್ನಗಳು ರಾಜಕೀಯವಾಗಿ ನಡೆಯುತ್ತಿವೆ. ಸಂವಿಧಾನದ ಜೀವಾಳವಾಗಿರುವ ಒಕ್ಕೂಟ ಉಳಿಯಬಾರದು ಎನ್ನುವವರ ಮಧ್ಯೆ ನಿರ್ದಿಗಂತದಂತಹ ಉತ್ಸವಗಳು ಒಕ್ಕೂಟದ ಕಲ್ಪನ್ನೆಯನ್ನು ಎತ್ತಿ ಹಿಡಿಯಬೇಕು ಎಂದು ಹಿರಿಯ ಸಾಹಿತಿ, ಚಿಂತಕ ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.
ಒಕ್ಕೂಟದ ಕಲ್ಪನೆಯನ್ನು ಉತ್ತರ ಕರ್ನಾಟಕದ ಮೂಲಕ ಪ್ರತಿಪಾದಿಸಬೇಕಿದೆ. ಇದು ನಮ್ಮ ಚರಿತ್ರೆಯೂ ಹೌದು. ಇದು ವಾಸ್ತವ ಸಂಗತಿ ಎಂದೂ ಚೆನ್ನಿ ಹೇಳಿದರು.
ಒಂದೊಂದು ಸಂಸ್ಕೃತಿ ಎಲ್ಲ ಅನುಭವಗಳನ್ನು ಹಲವು ರೀತಿಯಲ್ಲಿ ಅಂದರೆ, ಬರಹ, ನಾಟಕ, ಪ್ರಯೋಗ, ಮಾತು, ಭಾಷೆ ಮೂಲಕ ಸಂಚಯ ಮಾಡಿ ಇಟ್ಟಿರುತ್ತದೆ. ಅದಕ್ಕೆ ಸಂಸ್ಕೃತಿ ಎನ್ನುತ್ತಿದ್ದು, ಅದು ನಿರಂತರವಾಗಿರುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ನಾವು ನಮ್ಮ ನೆನಪು ಹಾಗೂ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಬೇಸರ ಉಂಟಾಗುತ್ತಿದೆ. ದುರ್ದೈವದಿಂದ ನೆನಪುಗಳಿಂದ ದೂರ ಉಳಿಯುವಂತಾಗಿದೆ. ಸಾಂಸ್ಕೃತಿಕವಾಗಿ ಅನಾಥರಾಗುತ್ತಿದ್ದೇವೆ ಎಂಬ ಭಾವ ಉಂಟಾಗುತ್ತಿದೆ ಎಂದ ಚೆನ್ನಿ ಅವರು ಉತ್ತರ ಕರ್ನಾಟಕ ಭಾಗ ಅದರಲ್ಲೂ ಧಾರವಾಡದ ನೂರು ವರ್ಷಗಳ ಹಿಂದಿನ ಭಾಷೆ, ರಂಗಭೂಮಿ ಹಾಗೂ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿದರು.ಮತ್ತೆ ಮತ್ತೆ ಕಲೆ ಸ್ಮರಿಸಿ
ನಿರ್ದಿಗಂತ ಉತ್ಸವದ ಉದ್ಘಾಟನೆ ನಂತರ ಶಕೀಲ್ ಅಹಮ್ಮದ ನಿರ್ದೇಶನದ ಅನಾಮಿಕನ ಸಾವು, ದಾದನಟ್ಟಿಯ ಬಯಲಾಟ ಸಂಘದಿಂದ ಶ್ರೀಕೃಷ್ಣಪಾರಿಜಾತ, ಅಮಿತ ರೆಡ್ಡಿ ನಿರ್ದೇಶನದ ಮೈ ಮನಗಳ ಸುಳಿಯಲ್ಲಿ ನಾಟಕಗಳ ಪ್ರದರ್ಶನ ಹಾಗೂ ಕೃಪಾಕರ ಸೇನಾನಿ ಅವರಿಂದ ನೆಲ-ಜಲ-ಬದುಕು ಕುರಿತು ಉಪನ್ಯಾಸ ಹಾಗೂ ಧಾರವಾಡದ ರಾಘವ ಕಮ್ಮಾರ ಮತ್ತು ತಂಡದಿಂದ ರಂಗಸಂಗೀತ ಪ್ರಸ್ತುತಗೊಂಡಿತು.