ಶಿರಸಿ: ಶಿರಸಿ ಅಡಕೆಯಲ್ಲಿ ಕಲಬೆರಕೆಯಾಗಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಟನ್‌ಗಳಷ್ಟು ಅಡಕೆ ವಾಪಸ್ ಬಂದ ಪ್ರಕರಣದ ಬೆನ್ನಲ್ಲೆ ವ್ಯಾಪಾರಿಯೊಬ್ಬರು ಬರ್ಮಾ ದೇಶದ ಅಡಕೆಯನ್ನು ವ್ಯಾಪಾರಕ್ಕೆ ಹಾಕಿರುವ ಆಂತಕಕ್ಕಾರಿ ವಿಷಯ ಬೆಳಕಿಗೆ ಬಂದಿದೆ.ನಗರದ ಟಿಎಸ್‌ಎಸ್ ಅಡಕೆ ಪ್ರಾಂಗಣದಲ್ಲಿ ಕಸ್ತೂರ ಬಾ ನಗರದ ಅಬ್ದುಲ್ ರಹಿಂ ಅಬ್ದುಲ್ ಮಜೀದ್ ಎಂಬ ವ್ಯಾಪಾರಸ್ಥರು ರೈತರ ಹೆಸರಿನಲ್ಲಿ ೨ ಕ್ವಿಂಟಲ್ ಬರ್ಮಾ ದೇಶದ ಅಡಕೆಯನ್ನು ೧೨ ಚೀಲದಲ್ಲಿ ಬೆರಕೆ ಮಾಡಿ ವ್ಯಾಪಾರಕ್ಕೆ ಹಾಕಿರುವುದು ಕಂಡುಬಂದ ಹಿನ್ನೆಲೆ ಟಿಎಸ್‌ಎಸ್‌ನಿಂದ ತಪಾಸಣೆ ನಡೆಸಿ, ಅಡಕೆಯನ್ನು ಜಪ್ತಿ ಮಾಡಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಈ ಕುರಿತು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾಧ್ಯಮದವರಿಗೆ ಮಾಹಿತಿ ನೀಡಿ, ಅಬ್ದುಲ್ ಮಜೀದ್ ಎಂಬ ವ್ಯಾಪಾರಸ್ಥರು ೧ ಚೀಲ ಬರ್ಮಾ ಅಡಕೆಯನ್ನು ಇಲ್ಲಿನ ಅಡಕೆ ಜತೆ ಬೆರಕೆ ಮಾಡಿ ಮಾರಾಟಕ್ಕೆ ಹಾಕಿದ್ದಾರೆ. ವ್ಯಾಪಾರಸ್ಥರು ಟೆಂಡರ್ ಬರೆಯುವಾಗ ಅನುಮಾನದ ವ್ಯಕ್ತಪಡಿಸಿ, ನಮಗೆ ಮಾಹಿತಿ ನೀಡಿದ್ದಾರೆ.
೬ ಚೀಲದಲ್ಲಿ ಬರ್ಮಾ ದೇಶದ ಅಡಕೆ ಬೆರಕೆ ಮಾಡಿದ್ದು, ಇನ್ನೂ ೧೨ ಚೀಲದಲ್ಲಿ ಬೆರಕೆ ಇದೆ. ಟೆಂಡರ್ ರದ್ದುಗೊಳಿಸಿ, ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಅಧಿಕೃತ ದಾಖಲೆ ಒದಗಿಸಿ, ಎಂದು ಕೇಳಿದಾಗ ಮೊದಲು ಸಾಗರದಿಂದ ತಂದಿದ್ದೇನೆ ಎಂದು ಹೇಳಿದರು. ಆನಂತರ ಮಂಗಳೂರಿನಲ್ಲಿ ಖರೀದಿ ಮಾಡಿದ್ದೇನೆ ಎಂದರು. ಬಿಲ್‌ನಲ್ಲಿಯೂ ಸರಿಯಾದ ಮಾಹಿತಿ ಇಲ್ಲ. ಕೇವಲ ಅರೆಕಾನಟ್ ಎಂದು ಬರೆಯಲಾಗಿದೆ. ಸರಿಯಾದ ದಾಖಲೆಗಳನ್ನು ಒದಗಿಸಿದ ನಂತರವೇ ನಿಮ್ಮ ಅಡಕೆಯನ್ನು ಬಿಟ್ಟುಕೊಡುವುದಾಗಿ ಹೇಳಿದ್ದೇವೆ ಎಂದರು.ಇದೇ ವ್ಯಾಪಾರಸ್ಥರ ೩೯ ಚೀಲ ದಾಸ್ತಾನಿದೆ. ಅದನ್ನು ಟೆಂಡರ್ ಮಾಡಿಲ್ಲ, ಅದರಲ್ಲೂ ಬೆರಕೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಕಳ್ಳ ಮಾರ್ಗದಲ್ಲಿ ವಿದೇಶಿ ಅಡಕೆಯನ್ನು ತಂದು ಮಾರಾಟ ಮಾಡುವುದರಿಂದ ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಡಕೆ ಧಾರಣೆ ಇಳಿಮುಖವಾಗಲು ಇದೂ ಮುಖ್ಯ ಕಾರಣವಾಗಿದೆ. ಈ ರೀತಿ ಮಾಡಿದ ವ್ಯಾಪಾರಸ್ಥನನ್ನು ಕಪ್ಪುಪಟ್ಟಿಗೆ ಸೇರಿಸುವುದಲ್ಲದೇ, ರೈತ ಆದರೂ ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುತ್ತೇವೆ ಎಂದರು.ಅಕ್ರಮ ಅಡಕೆ ಪ್ರವೇಶದಿಂದ ದರ ಇಳಿಕೆ?: ಸುತ್ತಮುತ್ತಲಿನ ದೇಶಗಳಿಂದ ಅವ್ಯಾಹತವಾಗಿ ಅಕ್ರಮ ಅಡಕೆ ಭಾರತಕ್ಕೆ ಪ್ರವೇಶವಾಗಿದೆ ಎನ್ನಲಾಗುತ್ತಿದೆ. ಅಡಕೆಯ ಪ್ರಮುಖ ಮಾರುಕಟ್ಟೆಯಾದ ಉತ್ತರಪ್ರದೇಶ, ರಾಜಸ್ತಾನ, ಗುಜರಾತ, ಮಧ್ಯಪ್ರದೇಶದ ಪ್ರಮುಖ ವರ್ತಕರಲ್ಲಿ ವಿದೇಶಿ ಅಡಕೆ ಅಧಿಕ ಪ್ರಮಾಣದಲ್ಲಿ ದಾಸ್ತಾನಿದೆ.
ಹೀಗಾಗಿ ದೇಶೀಯ ಅಡಕೆಯೊಂದಿಗೆ ವಿದೇಶಿ ಅಡಕೆಯನ್ನು ಮಿಶ್ರಣ ಮಾಡಿ ಅದನ್ನು ಪಾನ್ ಮಸಾಲಾ ತಯಾರಕರಿಗೆ, ವರ್ತಕರಿಗೆ ಪೂರೈಸಲಾಗುತ್ತಿದೆ ಎನ್ನಲಾಗುತ್ತಿದೆ.ಜಿಲ್ಲೆಯ ಪ್ರಮುಖ ಅಡಕೆ ವಹಿವಾಟು ಕೇಂದ್ರವಾದ ಶಿರಸಿಗೆ ಪ್ರತಿದಿನ ಸುಮಾರು ೩ ಸಾವಿರ ಚೀಲಗಳಷ್ಟು ಅಡಕೆಯನ್ನು ರೈತರು ವ್ಯಾಪಾರಕ್ಕೆ ತರುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ದರ ಬರಬಹುದೆಂದು ಕಾದಿಟ್ಟಿದ್ದ ರೈತರು ಈಗ ದರ ಕುಸಿತ ಆಗುತ್ತಲೇ ಇರುವುದನ್ನು ನೋಡಿ, ಇನ್ನೂ ದರಕ್ಕೆ ಕಾಯುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದು ಮಾರುಕಟ್ಟೆಯೆಡೆ ಧಾವಿಸತೊಡಗಿದ್ದಾರೆ.
ಒಂದು ಅಂದಾಜಿನ ಪ್ರಕಾರ ಶಿರಸಿ ತಾಲೂಕೊಂದರಲ್ಲೇ ೩೦ ಸಾವಿರ ಕ್ವಿಂಟಲ್ ರಾಶಿ ಅಡಕೆ ರೈತರಲ್ಲಿ ದಾಸ್ತಾನು ಇದೆ. ರಾಶಿ ಅಡಕೆಗೆ ಇನ್ನೂ ಉತ್ತಮ ದರ ಲಭಿಸುವ ಸಾಧ್ಯತೆಯೂ ಕ್ಷೀಣಿಸುತ್ತಿದೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಇನ್ನು ಒಂದೆರಡು ತಿಂಗಳಿನಲ್ಲಿ ಬೆಳೆದ ಅಡಕೆ ಇಳಿಸಿ, ರಾಶಿ ಅಡಕೆ ಸಿದ್ಧಪಡಿಸುವ ಕಾರ್ಯವೂ ಶುರುವಾಗಲಿದೆ. ಈ ವರ್ಷದ ಹೊಸ ಅಡಕೆ ಮಾರುಕಟ್ಟೆಗೆ ಬಂದರೆ ಕಳೆದ ವರ್ಷದ ರಾಶಿ ಅಡಕೆಗೆ ಬೇಡಿಕೆ ಇನ್ನೂ ಕುಸಿತಗೊಳ್ಳುವ ಆತಂಕವಿದೆ.