ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ,ಇಂಡಿಗಡಿ ಭಾಗದ ಇಂಡಿ ತಾಲೂಕು ಮೊದಲೇ ಬರದ ನಾಡು, ಜಿಲ್ಲೆಯಲ್ಲಿಯೇ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶ. ಪ್ರಮುಖ ಬೆಳೆಯಾಗಿರುವ ಲಿಂಬೆಯನ್ನು ಉಳಿಸಿಕೊಳ್ಳಲು ತಾಲೂಕಿನ ಬೆಳೆಗಾರರು ನಿರಂತರವಾಗಿ ಪರದಾಟ ನಡೆಸಿದ್ದಾರೆ. ಪ್ರತಿ ವರ್ಷವೂ ಬಜೆಟ್‌ನಲ್ಲಿ ಯೋಜನೆಗಳು ಕಾರ್ಯಗತವಾಗಬಹುದು ಎಂದು ಕಾಯುವುದೇ ತಾಲ್ಲೂಕಿನ ಜನರ ಪರಿಪಾಠವಾದಂತಾಗಿದೆ. ಇಂಡಿ ತಾಲೂಕಿಗೆ ನಂಜುಂಡಪ್ಪ ವರದಿ ಪ್ರಕಾರ ಉನ್ನತ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆ ಸಿಗದಿರುವುದು ವಿಪರ್ಯಾಸ.
ನೀರಾವರಿ ಯೋಜನೆಗಳು:ವಿಸ್ತೀರ್ಣದಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅರಸಿ ಬೇರೆಬೇರೆ ಕಡೆ ವಲಸೆ ಹೋಗುವುದು ಇಂದಿಗೂ ತಪ್ಪಿಲ್ಲ. ತಾಲೂಕಿಗೆ ಬಂದಿರುವ ಗುತ್ತಿ ಬಸವಣ್ಣ, ಚಿಮ್ಮಲಗಿ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಇಂಡಿ ಶಾಖಾ ಕಾಲುವೆ ದುರಸ್ತಿಯಾಗಬೇಕಿದೆ. ವಾರಾಬಂದಿಯಾಗದೆ ಕಾಲುವೆಯ ಕೊನೆಯ ಹಂತಕ್ಕೆ ನೀರು ಹರಿಯಬೇಕಿದೆ. ಹಲವು ನೀರಾವರಿ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿವೆ. ನೀರಾವರಿ ಯೋಜನೆ ಫಲ ನೀಡದ ಹಿನ್ನೆಲೆಯಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ.ಇನ್ನು, ಶೈಕ್ಷಣಿಕವಾಗಿಯೂ ಇಂಡಿ ತಾಲೂಕು ಬಹಳಷ್ಟು ಹಿಂದುಳಿದಿದೆ. ಪದವಿ ಹೊರತುಪಡಿಸಿ ಸಣ್ಣ ಪುಟ್ಟ ತಾಂತ್ರಿಕ ಪದವಿ ಪಡೆಯಲು ಬೇರೆ ನಗರಗಳನ್ನು ಅವಲಂಬಿಸಬೇಕಾಗಿದೆ. ಝಳಕಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿದೆ. ತಾಲೂಕು ಕೇಂದ್ರ ಇಂಡಿಗೂ ಪಾಲಿಟೆಕ್ನಿಕ್ ಕಾಲೇಜಿನ ಅಗತ್ಯವಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪ್ರಯತ್ನದಿಂದ ತಾಲೂಕು ಕೇಂದ್ರಕ್ಕೆ ಸರ್ಕಾರಿ ಪಿಯು ಕಾಲೇಜು ಆರಂಭಗೊಂಡಿದೆ. ಬಿಎ, ಬಿಎಸ್ಸಿ ಪದವಿ ಮುಗಿದ ಮೇಲೆ ಉನ್ನತ ವ್ಯಾಸಂಗಕ್ಕೆ ಧಾರವಾಡ, ಕಲಬುರಗಿ, ಬಾಗಲಕೋಟ, ವಿಜಯಪುರಕ್ಕೆ ಹೋಗಬೇಕಾಗಿದೆ. ಹೀಗಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಕ್ಕಮಹಾದೇವಿ ವಿವಿಯಿಂದ ಮಹಿಳಾ ಎಂಎ ಕಾಲೇಜುಗಳು ಮಂಜೂರು ಆಗಬೇಕಿವೆ.
ಉದ್ಯೋಗ ಅರಸಿ ವಲಸೆ:ತಾಲೂಕಿನ ಬಹುತೇಕ ಜನತೆ ತಮ್ಮ ಮಕ್ಕಳ ಶಿಕ್ಷಣದ ನೆಪವೊಡ್ಡಿ ಉದ್ಯೋಗ ಹುಡುಕಿ ಬೇರೆ ಬೇರೆ ನಗರಗಳಿಗೆ ತೆರಳುತ್ತಾರೆ. ಅಲ್ಲದೇ, ತಾಲೂಕಿಗೆ ಒಂದು ಬಾರಿಯೂ ಸಚಿವ ಸ್ಥಾನ ಸಿಕ್ಕಿಲ್ಲ. ಸಕ್ಕರೆ ಕಾರ್ಖಾನೆಗಳನ್ನು ಬಿಟ್ಟರೆ, ಮತ್ಯಾವ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ, ಗಡಿ ಭಾಗದ ಮಹಿಳೆಯರು ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಪುಣೆ, ಮುಂಬೈ, ಸಾಂಗಲಿ, ಗೋವಾ ರಾಜ್ಯಗಳಿಗೆ ಹೋಗುತ್ತಿದ್ದಾರೆ. ತಾಲೂಕಿನ ಬುದಿಹಾಳ ಬಳಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಗಾಗಿ ಕೆಲಸ ನಡೆಯುತ್ತಿದ್ದು, ಮಂದಗತಿಯಿಂದ ಸಾಗಿದೆ. ಈ ಬಾರಿ ಬಜೆಟ್‌ನಲ್ಲಿ ಇಂಡಿ ತಾಲೂಕಿನ ಸಮಗ್ರ ನೀರಾವರಿಗೆ ಹಣ ಮೀಸಲಿಡಬೇಕು ಎಂಬ ಕೂಗು ತಾಲೂಕಿನ ರೈತರಿಂದ ಕೇಳಿ ಬರುತ್ತಿದೆ.
ಆರೋಗ್ಯ ಸೌಲಭ್ಯ:ತಾಲೂಕಿನ ಬಹುಭಾಗ ಅತ್ಯಂತ ಹಿಂದುಳಿದ ಪ್ರದೇಶ. ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಲಾಳಸಂಗಿ ಗ್ರಾಮದ ಜನರ ಬಹುದಿನದ ಬೇಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಆಗಬೇಕಾಗಿದೆ. ಈ ಭಾಗದ ಜನರು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪೂರ, ಮಿರಜ್, ಸಾಂಗಲಿ, ವಿಜಯಪುರಕ್ಕೆ ಹೋಗಬೇಕಾಗಿದೆ. ಹೀಗಾಗಿ ಜಿಲ್ಲಾ ಕೇಂದ್ರದಂತೆ ತಾಲೂಕಿಗೂ ಆರೋಗ್ಯ ಸೌಲಭ್ಯ ಸಿಗಬೇಕಾಗಿದೆ.
ಕನ್ನಡ ಶಾಲೆಗಳ ನಿರ್ಲಕ್ಷ್ಯ:ಗಡಿ ಭಾಗದ ಅದೆಷ್ಟೊ ಕನ್ನಡ ಶಾಲೆಗಳಿಗಳಿಗೆ ಸಮರ್ಪಕ ಮೂಲಸೌಕರ್ಯಗಳಿಲ್ಲ. ಕೋಣೆಗಳ ಕೊರತೆ ಇದೆ. ಕೆಲವೆಡೆ ಕೋಣೆಗಳು ಶಿಥಿಲಗೊಂಡಿವೆ. ಕನ್ನಡ ನಾಡು, ನುಡಿಯ ಸೇವೆ ಭಾಷಣದಲ್ಲಿಷ್ಟೆ ಆಗದೇ, ಕನ್ನಡ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಬಜೆಟ್ ಅನುದಾನ ನೀಡಬೇಕಿದೆ.
ಪ್ರಮುಖ ಬೇಡಿಕೆಗಳು1) ಲಿಂಬೆ ಪುನಶ್ಚೇತನಕ್ಕೆ ಕಾರ್ಯಕ್ರಮ
2) ಆರೋಗ್ಯ ಸೇವೆಗೆ ಹೈಟೆಕ್ ಆಸ್ಪತ್ರೆ ಸ್ಥಾಪನೆ3) ಮಹಿಳೆಯರ ಉದ್ಯೋಗಕ್ಕಾಗಿ ಗಾರ್ಮೆಂಟ್ಸ್ ಸೇರಿ ಕಾರ್ಖಾನೆ ಸ್ಥಾಪನೆ
4) ಇಂಡಿ ಜಿಲ್ಲೆಯಲ್ಲೇ ದೊಡ್ಡ ತಾಲೂಕು ಕೇಂದ್ರ. ಇನ್ನೊಂದು ಅಗ್ನಿಶಾಮಕ ಠಾಣೆ ಅಗತ್ಯ5) ಇಂಡಿ ತಾಲೂಕಿಗೆ ನಾದ, ಅಗರಖೇಡ, ತಾಂಬಾ ಹೋಬಳಿ ಕೇಂದ್ರಗಳನ್ನಾಗಿ ಘೋಷಿಸಬೇಕು.
ಹೀಗೇ, ಬಜೆಟ್ ಬಗ್ಗೆ ಹಲವಾರು ನಿರೀಕ್ಷೆಗಳಿದ್ದು, ಸರ್ಕಾರ ಎಷ್ಟು ಬೇಡಿಕೆಗಳ ಬಗ್ಗೆ ಗಮನಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.ಕೊಟ್ 1
ಸರ್ಕಾರಿ ಶಾಲೆಗಳು ಹೀನಾಯ ಸ್ಥಿತಿಯಲ್ಲಿರವುದರಿಂದ ಗಡಿ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ಮೀಸಲಿಡಬೇಕು. ಗಡಿ ಭಾಗದಲ್ಲಿ ಉನ್ನತ ಶಿಕ್ಷಣ ಕಾಲೇಜುಗಳು ಆರಂಭವಾಗಬೇಕು.ಬಾಳು ಮುಳಜಿ, ಕರವೇ, ತಾಲೂಕು ಅಧ್ಯಕ್ಷ
ಕೊಟ್ 2ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಗಡಿಭಾಗದ ದೊಡ್ಡ ತಾಲೂಕು ಕೇಂದ್ರ ಇಂಡಿ, ಜಿಲ್ಲಾ ಕೇಂದ್ರವಾಗಬೇಕು ಎಂಬ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಬಹು ವರ್ಷಗಳಿಂದ ಎಂಬ ಹೋರಾಟ ನಡೆಯುತ್ತಿದೆ. ಅದು ಬಜೇಟ್‌ನಲ್ಲಿ ಸಾಕಾರಗೊಳ್ಳಬೇಕಾಗಿದೆ. ಎಸ್.ಬಿ.ಕೆಂಬೋಗಿ, ರೈತ ಮುಖಂಡ.