ಯಲ್ಲಾಪುರ: ಮಳೆಗಾಲ ಪ್ರಾರಂಭಗೊಂಡಿದೆ. ಅತಿವೃಷ್ಟಿ ಯಾವತ್ತೂ ಆಗಬಹುದು. ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತರಾಗಿರಬೇಕಿದೆ. ಯಾವುದೇ ಬಾಕಿ ಕೆಲಸಗಳನ್ನು ಬಾಕಿ ಇಡಬೇಡಿ. ಎಲ್ಲ ಯೋಜನೆಗಳು ಶೇ. ೧೦೦ರಷ್ಟು ಅನುಷ್ಠಾನ ಆಗಬೇಕಿದೆ. ತುರ್ತು ಕಾರ್ಯಕ್ಕೆ ಆದ್ಯತೆ ನೀಡಿ, ಮುಂಗಾರನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ನಟರಾಜ ತಿಳಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಜೂ. ೨೭ರಂದು ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ತಾಲೂಕು ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಪಿಎಚ್‌ಸಿಗಳಲ್ಲಿ ಯಾರೂ ಚಿಕಿತ್ಸೆಗೆ ದೊರೆಯಲಿಲ್ಲ ಎಂದು ಹೇಳದಂತೆ ನಿಗಾ ವಹಿಸಿ, ಚಿಕಿತ್ಸೆ ನೀಡಬೇಕು. ಡೆಂಘೀ ಪ್ರಕರಣಗಳ ಬಗ್ಗೆ ಗಂಭೀರವಾಗಿ ಗಮನಹರಿಸಿ. ಜ್ವರ ಬಂದಾಗ ಸಾರ್ವಜನಿಕರು ಔಷಧಿ ಅಂಗಡಿಗೆ ಹೋಗಿ ಮಾತ್ರೆ ತಿನ್ನಬೇಡಿ, ಆಸ್ಪತ್ರೆಗೆ ಮೊದಲು ಹೋಗಿ, ನಂತರ ವೈದ್ಯರನ್ನು ದೂರುವುದು ಅಕ್ಷಮ್ಯವಾಗುತ್ತದೆ. ಇದನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿಯ ೨೦೨೪- ೨೫ನೇ ಸಾಲಿನ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮುಂಗಡ ಪತ್ರದ ಪ್ರಸ್ತಾವನೆಯನ್ನು ತಾಪಂ ಲೆಕ್ಕಾಧಿಕಾರಿ ಮೋಹನ ಮಂಡಿಸಿದರು.ಪ್ರಾಥಮಿಕ ಶಿಕ್ಷಣಕ್ಕೆ ₹೪೨೬೮.೫೬ ಲಕ್ಷ, ಪ್ರೌಢ ಶಿಕ್ಷಣಕ್ಕೆ ₹೯೧೦.೬೭ ಲಕ್ಷ, ಒಟ್ಟೂ ಶಿಕ್ಷಣ ಇಲಾಖೆಗೆ ₹೫೧೭೯.೨೩ ಲಕ್ಷ, ಆರೋಗ್ಯ ಇಲಾಖೆಗೆ ₹೧೮.೦೫ ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹೪೫೪.೬೦ ಲಕ್ಷ, ತಾಲೂಕು ಪಂಚಾಯಿತಿ ನೀರು ಸರಬರಾಜು ವಿಭಾಗಕ್ಕೆ ₹೨.೮೩ ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ ₹೭೯.೦೧ ಲಕ್ಷ, ಬಿಸಿಎಂಗೆ ₹೧೩.೩೮ ಲಕ್ಷ, ಸಿಡಿಪಿಒ ಆಹಾರ ವಿಭಾಗಕ್ಕೆ ₹೬೯ ಲಕ್ಷ, ಪಶು ವೈದ್ಯಕೀಯ ಇಲಾಖೆಗೆ ₹೭೬.೮೮ ಲಕ್ಷ, ಕೃಷಿ ಇಲಾಖೆಗೆ ₹೧೨.೪೯ ಲಕ್ಷ, ತಾಲೂಕು ಪಂಚಾಯಿತಿಗೆ ₹೩೨೧.೦೮ ಲಕ್ಷ, ಒಟ್ಟೂ ₹೬೨೨೬.೫೫ ಲಕ್ಷ, ಮುಂಗಡ ಪತ್ರದ ಪ್ರಸ್ತಾವನೆಗೆ ಸಭೆ ಒಪ್ಪಿಸಿ, ಅನುಮೋದನೆ ಪಡೆದರು.
ಆರೋಗ್ಯ ಇಲಾಖೆಯಿಂದ ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ವರದಿ ನೀಡಿ, ಐದು ಡೆಂಘೀ ಪ್ರಕರಣ ಪತ್ತೆಯಾಗಿದೆ. ಪಟ್ಟಣದಲ್ಲಿ ಫಾಗಿಂಗ್ ಮಾಡಲಾಗಿದೆ. ಯಾವುದೇ ಜ್ವರ ಬಂದರೂ ನಿರ್ಲಕ್ಷಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಸುಬ್ರಾಯ ಭಟ್ಟ ಮಾತನಾಡಿ, ಜಾನುವಾರುಗಳಿಗೆ ಯಾವುದೇ ರೋಗ ಉಲ್ಬಣಿಸುವ ಸಂದರ್ಭ ಇಲ್ಲ. ಐದನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಹಾಕಲಾಗುತ್ತದೆ. ಮೇವಿನ ಸಮಸ್ಯೆ ಆಗಿಲ್ಲ. ಸಬ್ಸಿಡಿ ಸ್ಕೀಂ ಇಲ್ಲಿಯವರೆಗೆ ಬಂದಿಲ್ಲ ಎಂದರು.
ತೋಟಗಾರಿಕೆ ಇಲಾಖೆಯ ಕೀರ್ತಿ ಮಲಮರ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿದರು. ಸಿಡಿಪಿಒ ಫಾತಿಮಾ ಝಳಕಿ, ಲೋಕೋಪಯೋಗಿ ಇಲಾಖೆ ವಿಶಾಲ ಕಟಾವ್ಕರ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ದಾಕ್ಷಾಯಣಿ ನಾಯ್ಕ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕಿ ವನಿತಾ ಪಾಟೀಲ, ಜಲಜೀವನ ಮಿಷನ್ ಅಧಿಕಾರಿ ರಾಜಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜ್ಯೋತಿ ನರೋಟಿ, ಜಿಪಂ ಸ.ಕಾ.ನಿ.ಅ. ಅಶೋಕ ಬಂಟ, ತಾಪಂ ವ್ಯವಸ್ಥಾಪಕ ರಾಮದಾಸ ನಾಯ್ಕ ತಮ್ಮ ತಮ್ಮ ಇಲಾಖೆಯ ವರದಿ ನೀಡಿದರು.ಪತ್ರಕರ್ತರೊಬ್ಬರ ಸಲಹೆಯಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಮಳೆನೀರಿನ ಕೊಯ್ಲಿನ ಜಾಗೃತಿ ಅನುಷ್ಠಾನಗೊಳಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.