ಮಲೆನಾಡ ಹಲಸಿನ ತಳಿಗೆ ಪ್ರಾಧಿಕಾರದ ಮಾನ್ಯತೆ

KannadaprabhaNewsNetwork |  
Published : Jun 16, 2024, 01:50 AM IST
ಪೋಟೊ: 14ಎಸ್ಎಂಜಿಕೆಪಿ05ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲಸು ಬೆಳೆಗಾರರಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರವನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲಸು ಬೆಳೆಗಾರರಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಳಿವಿನಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಸಂರಕ್ಷಿಸಿ, ಬೆಳೆಸುವ ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಂ.ಬಿ.ದುಶ್ಯಂತಕುಮಾರ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ವಿಶಿಷ್ಟ ಹಲಸಿನ ತಳಿಗಳಾದ ಹಳದಿ ರುದ್ರಾಕ್ಷಿ-ಜೆ.ಎ.ಆರ್, ಆರೆಂಜ್-ಆರ್.ಪಿ.ಎನ್., ಕೆಂಪು ರುದ್ರಾಕ್ಷಿ-ಡಿಎಸ್‌ವಿ ಮತ್ತು ರೆಡ್-ಆರ್.ಟಿ.ಬಿ. ತಳಿಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಣಿಗೊಂಡು ಮಾನ್ಯತೆ ಪಡೆದಿವೆ ಎಂದು ಮಾಹಿತಿ ನೀಡಿದರು.

ಈ ನಾಲ್ಕು ತಳಿಗಳ ಕುರಿತು 4 ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಿ, ಸಂಪೂರ್ಣ ಮಾಹಿತಿಯನ್ನು ನವದೆಹಲಿಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಾಧಿಕಾರದಿಂದ ನೇಮಕಗೊಂಡ ತಜ್ಞ ವಿಜ್ಞಾನಿಗಳು 2 ಬಾರಿ ಸ್ಥಳ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ, ಅಂತಿಮವಾಗಿ ನೋಂದಣಿಗೆ ಅರ್ಹವೆಂದು ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡು ಪ್ರಮಾಣಪತ್ರ ದೊರಕಿರುವುದು ಹರ್ಷದ ಸಂಗತಿ ಎಂದರು.

ಈ ಅಪರೂಪದ ಸಸ್ಯ ತಳಿಗಳನ್ನು ಪ್ರಸಕ್ತ ಸಾಲಿನಿಂದಲೇ ಅಭಿವೃದ್ಧಿಪಡಿಸಿ, ಆಸಕ್ತ ಕೃಷಿಕರಿಗೆ ತಲುಪಿಸಲು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ ವಿಶೇಷ ಗಮನಹರಿಸಲಿದೆ. ಅಲ್ಲದೇ ಅಪ್ಪೇ ಮಿಡಿ ತರಹದ ಅತ್ಯಪರೂಪದ ಮಾವಿನ ವಿಶಿಷ್ಟ ತಳಿಗಳನ್ನೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಪ್ರಾಂತೀಯ ಕಚೇರಿಯ ಮುಖ್ಯಸ್ಥ ಡಾ.ಎಂ.ಕೆ.ಸಿಂಗ್ ಅವರು ಮಾತನಾಡಿ, ಪ್ರತಿ ತಳಿಯ ಹಲಸಿನ ಬಗ್ಗೆ ವೈಜ್ಞಾನಿಕವಾಗಿ ವಿಶೇಷ ಅಧ್ಯಯನ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ನೋಂದಣಿಯ ಸಂದರ್ಭದಲ್ಲಿ ಸಲ್ಲಿಸಲಾಗಿದೆ. ಈ ಅಪರೂಪದ ತಳಿ ಬೆಳೆಯುವುದರಿಂದ ನಶಿಸುತ್ತಿರುವ ತಳಿ ಸಂರಕ್ಷಿಸುವುದು ಮತ್ತು ಬೆಳೆಗಾರರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದರು.

ಅನಂತಮೂರ್ತಿ ಜವುಳಿ ಅವರು ಮಾತನಾಡಿ, ಈ ಹಣ್ಣುಗಳು ಇತರೆ ಜಾತಿಯ ಹಣ್ಣುಗಳಿಗಿಂತ ಹೆಚ್ಚಿನ ತಿರುಳನ್ನು ಹೊಂದಿವೆ,ಅತ್ಯಲ್ಪ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಇಳುವರಿಯೊಂದಿಗೆ ಕಟಾವಿಗೆ ಸಿದ್ಧವಾಗಿರಲಿವೆ ಎಂದರು.

ಈ ಸಂದರ್ಭದಲ್ಲಿ ಹಲಸು ಬೆಳೆಗಾರರಾದ ಅನಂತಮೂರ್ತಿ ಜವುಳಿ, ಪ್ರಕಾಶನಾಯಕ್, ಎಸ್.ದೇವರಾಜ, ಟಿ.ರಾಜೇಂದ್ರ ಇವರಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಅಡಿವೆಪ್ಪರ್, ಸಹ ಸಂಶೋಧನಾ ನಿರ್ದೇಶಕ ಡಾ.ಜಿ.ಎನ್.ತಿಪ್ಪೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ಆರ್. ಮಾರುತಿ, ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ