ದಾವಣಗೆರೆ : ಆಟೋ ಚಾಲಕರಲ್ಲಿ ಶಿಸ್ತಿನ ಕೊರತೆ ಇದ್ದು, ಪೊಲೀಸರು ಏನು ಮಾಡುತ್ತಿಲ್ಲವೆಂಬ ಮಾತು ಕೇಳಿ ಬರುತ್ತಿವೆ. ನಿಮ್ಮೊಂದಿ ಹಲವಾರು ಸಭೆ ಮಾಡಿದ್ದೇವೆ, ಇನ್ನೂ ತಿದ್ದಿಕೊಂಡಿಲ್ಲವೆಂದರೆ ಸರಿ ಕಾಣದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರಿಗೆ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರ ಆಟೋ ರಿಕ್ಷಾ ಚಾಲಕರು, ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು,ನಿಮ್ಮೊಂದಿಗೆ ಇದು ಎಷ್ಟನೇ ಸಭೆ? ನಿಮಗೆ ಇನ್ನೂ ಎಷ್ಟು ದಿನಗಳ ಕಾಲಾವಕಾಶ ನೀಡಬೇಕು? ನೀವೇ ಕಾನೂನು ಪಾಲನೆ ಮಾಡಬೇಕಲ್ಲವೇ ಎಂದರು.
ಚಾಲಕರು ಸಂಚಾರ ನಿಯಮ ಉಲ್ಲಂಘಿವುದು ಹೆಚ್ಚುತ್ತಿದೆ. ಚಾಲಕರಲ್ಲಿ ಶಿಸ್ತಿನ ಕೊರತೆ ಇದ್ದು, ಸಾರ್ವಜನಿಕರಿಂದ ಹಲವು ದೂರು ಕೇಳಿ ಬರುತ್ತಿದೆ. ಡಿಎಲ್ ಇಲ್ಲದೇ ಆಟೋ ಚಾಲನೆ ಮಾಡುವುದು, ಎಫ್‌ಸಿ ಇಲ್ಲದಿರುವುದು, ಹೆಚ್ಚುವರಿ ಸೀಟು, ಹೆಚ್ಚು ಶಬ್ಧ ಮಾಡುವ ಹಾರ್ನ್ ಅಳವಡಿಸಿರುವುದು ಕಂಡು ಬರುತ್ತಿದೆ. ಹಾಗಾಗಿ ಇಂದು 24 ಆಟೋಗಳನ್ನು ಹಿಡಿದು ತಂದು ಹೆಚ್ಚುವರಿ ಫಿಟ್ಟಿಂಗ್‌ಗಳನ್ನು ತೆರವು ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ನಿಮ್ಮ ನಿಮ್ಮ ಆಟೋಗಳಲ್ಲಿ ಅಮಾಯಕ ಪ್ರಯಾಣಿಕರು, ಮಕ್ಕಳೂ ಇರುತ್ತಾರೆ. ಅಕ್ಕಪಕ್ಕದಲ್ಲಿ ಸಂಚರಿಸುವ ಇತರ ವಾಹನಗಳ ಚಾಲಕರು, ಪ್ರಯಾಣಿಕರೂ ಇರುತ್ತಾರೆ. ಎಲ್ಲರೂ ನಿಮ್ಮ ಬಗ್ಗೆ ದೂರು ನೀಡುತ್ತಿದ್ದರೆ ಆಟೋ ಚಾಲನಾ ವೃತ್ತಿಯವರ ಬಗ್ಗೆ ಸಮಾಜದಲ್ಲಿ ಯಾವ ರೀತಿಯ ಅಭಿಪ್ರಾಯ ಬರುತ್ತದೆಂಬ ಅರಿವಿಲ್ಲವೇ? ನೀವೇನೇ ಮಾಡಿದರೂ ಪೊಲೀಸರು ಏನು ಮಾಡುತ್ತಿಲ್ಲವೆಂಬ ಮಾತು ಬರುತ್ತಿದ್ದು, ಇನ್ನು ಅಂತಹದ್ದಕ್ಕೆಲ್ಲಾ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.
ಡಿಎಲ್ ಇಲ್ಲದವರಿಗೆ ಡಿಎಲ್ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ. ಆದರೆ, ನೀವೇ ಯಾರೂ ಬಂದಿಲ್ಲ ಏಕೆ? ಇನ್ನೂ ಎಷ್ಟು ದಿನಗಳ ಕಾಲಾವಕಾಶ ನಿಮಗೆ ಕೊಡಬೇಕು? ಈಗ ಹಿಡಿದ 24 ಆಟೋಗಳಿಗೆ ಎಫ್‌ಸಿ ಇಲ್ಲ, ಚಾಲಕರ ಬಳಿ ಡಿಎಲ್ ಇಲ್ಲ, ಸಿಗ್ನಲ್ ಉಲ್ಲಂಘಿಸಿದ ಹಲವು ಪ್ರಕರಣಗಳಿವವೆ ಎಂದು ತರಾಟೆ ತೆಗೆದುಕೊಂಡರು.
ಪ್ಯಾಸೆಂಜರ್ ಆಟೋದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಲು ಅವಕಾಶ ಇಲ್ಲ. ಹೆಚ್ಚುವರಿ ಸೀಟುಗಳನ್ನು ಆಟೋ ಹಿಂಭಾಗದಲ್ಲೂ ಹಾಕಿ ಬಾಡಿಗೆ ಮಾಡುತ್ತಿರುವುದರಿಂದ ತಮಗೆ ಬಾಡಿಗೆ ಸಿಗುತ್ತಿಲ್ಲವೆಂದು ಬೇರೆ ಆಟೋ ಚಾಲಕರು ದೂರುತ್ತಾರೆ. ನಿಮ್ಮಲ್ಲೇ ಸಮಸ್ಯೆ ಇವೆ. ನಿಮ್ಮಲ್ಲೇ ಗುಂಪುಗಳಿವೆ. ನಿಮ್ಮನ್ನು ನೋಡಿ ಇತರರು ಕಲಿಯುವಂತೆ ಆಟೋ ಚಾಲನಾ ವೃತ್ತಿಗೆ ಗೌರವ ತರುವಂತೆ ನಿಮ್ಮ ಚಾಲನೆ, ಶಿಸ್ತು, ನಡವಳಿಕೆ ಇರಲಿ ಎಂದು ಕಿವಿಮಾತು ಹೇಳಿದರು.
ದಾವಣಗೆರೆಯಲ್ಲಿ ಆಟೋ ಚಾಲಕರ ಯೂನಿಯನ್ ಅಧ್ಯಕ್ಷರನ್ನು ನೀವೆ ನೇಮಕ ಮಾಡಿಕೊಳ್ಳಬೇಕು ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದರು.
ಈ ವೇಳೆ ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಸೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.