ಬೇಗೂರಲ್ಲಿ ನಿಯಮ ಉಲ್ಲಂಘಿಸಿ ಆಟೋ ಸಂಚಾರ

KannadaprabhaNewsNetwork | Published : Mar 15, 2024 1:21 AM

ಸಾರಾಂಶ

ತಾಲೂಕಿನ ಬೇಗೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ಯಾಸೆಂಜರ್‌ ಆಟೋದಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಸಂಚರಿಸುತ್ತಿದ್ದರೂ ಪೊಲೀಸರು ಜಾಣ ಮೌನ ವಹಿಸಿದ್ದು, ಮತ್ತೊಂದು ಅಪಘಾತ ನಡೆದರು ಪೊಲೀಸರು ಕ್ರಮಕ್ಕೆ ಮುಂದಾಗುವುದು ಅನುಮಾನವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಬೇಗೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ಯಾಸೆಂಜರ್‌ ಆಟೋದಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಸಂಚರಿಸುತ್ತಿದ್ದರೂ ಪೊಲೀಸರು ಜಾಣ ಮೌನ ವಹಿಸಿದ್ದು, ಮತ್ತೊಂದು ಅಪಘಾತ ನಡೆದರು ಪೊಲೀಸರು ಕ್ರಮಕ್ಕೆ ಮುಂದಾಗುವುದು ಅನುಮಾನವಾಗಿದೆ. ಕಳೆದ ಫೆ.೨೦ ರಂದು ಮೈಸೂರು-ಊಟಿ ಹೆದ್ದಾರಿಯ ಚಿಕ್ಕಹುಂಡಿ-ಚಿಕ್ಕಾಟಿ ಗೇಟ್‌ ನಡುವೆ ಪ್ಯಾಸೆಂಜರ್‌ ಆಟೋಗೆ ಕಾರು ಡಿಕ್ಕಿ ಹೊಡೆದು 8ಮಂದಿ ಗಾಯಗೊಂಡಿದ್ದಾರೆ.

ಪ್ಯಾಸೆಂಜರ್‌ ಆಟೋದಲ್ಲಿ 8 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಯಮ ಬಾಹಿರವಾಗಿ ಪ್ಯಾಸೆಂಜರ್‌ ಆಟೋದಲ್ಲಿ 8ಮಂದಿಯ ಬದಲು 15 ರಿಂದ 20 ಜನ ಕೂರಿಸಿಕೊಂಡು ತೆರಳುತ್ತಿದ್ದು, ಆಯತಪ್ಪಿ ಆಟೋ ಉರುಳಿ ಬಿದ್ದು ಅನಾಹುತ ಸಂಭವಿಸಿದರೆ ಪೊಲೀಸರು ಹೊಣೆ ಹೊರುತ್ತಾರಾ? ಎಂಬ ಪ್ರಶ್ನೆ ಎದ್ದಿದೆ.

ಬೇಗೂರು ಠಾಣಾ ಸರಹದ್ದಿನಲ್ಲಿ ಸಂಚರಿಸುವ ಗೂಡ್ಸ್‌ ಆಟೋ ಹಾಗು ಪ್ಯಾಸೆಂಜರ್‌ ಆಟೋಗಳಲ್ಲಿ ಕುರಿಗಳಂತೆ ಪ್ರಯಾಣಿಕರನ್ನು ತುಂಬಿಕೊಂಡು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ನಿಯಮ ಮೀರಿ ಸಂಚರಿಸುವ ಆಟೋಗಳ ಮೇಲೇಕೆ ಪೊಲೀಸರು ಕ್ರಮ ತೆಗೆದುಕೊಳ್ಳಲು ಹಿಂದೇಟು ಇರುವ ಅಡ್ಡಿಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಚಾಲಕರ ಮೇಲೆ ಆರೋಪ:

ಬಹತೇಕ ಗೂಡ್ಸ್‌, ಪ್ಯಾಸೆಂಜರ್‌ ಆಟೋಗಳಲ್ಲಿ ಇನ್ಸೂರೆನ್ಸ್‌, ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ಎಫ್‌ಸಿ ಮುಗಿದಿರುತ್ತೇ?ಸಮವಸ್ತ್ರ ಧರಿಸೋಲ್ಲ, ಕೆಲ ಚಾಲಕರು ಕುಡಿದು ಚಾಲನೆ ಮಾಡುತ್ತಿದ್ದಾರೆಂಬ ಆರೋಪಗಳಿವೆ. ಆಟೋದಲ್ಲಿ ೧೫ ರಿಂದ ೨೦ ಜನ ತುಂಬಿಕೊಂಡು ತೆರಳುವ ಜೊತೆಗೆ ಆಟೋ ಹಿಂಬದಿ,ಡ್ರೈವರ್‌ ಸೀಟಿನ ಬಳಿಯ ಎಡ,ಬಲ ನಿಂತು ತೆರಳುತ್ತಿದ್ದಾರೆ ಇದು ಪೊಲೀಸರ ಕಣ್ಣಿಗೆ ಕಾಣುವುದಿಲ್ಲವೇ? ಕಳೆದ ಫೆ.೨೦ ರಂದು ಚಿಕ್ಕಹುಂಡಿ-ಚಿಕ್ಕಾಟಿ ಗೇಟ್‌ ಬಳಿ ಆಟೋ, ಕಾರು ಅಪಘಾತದ ಬಳಿಕ ಹಾಗು ಫೆ.೨೨ ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತ ಪೊಲೀಸರು ಆಟೋಗಳ ತಪಾಸಣೆ ನಡೆಸಿದರು ಅಲ್ಲದೆ ಚಾಲಕ, ಮಾಲೀಕರ ಸಭೆ ನಡೆಸಿ ಕೈ ತೊಳೆದುಕೊಂಡಿದ್ದಾರೆ.ಅಡ್ಡಾದಿಡ್ಡಿ ನಿಲುಗಡೆ:ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸುತ್ತ ಮುತ್ತ ಆಟೋ, ಟೆಂಪೊಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಪೊಲೀಸ್‌ ಠಾಣೆಯಾದರೂ ಬಸ್‌ ನಿಲ್ದಾಣದಲ್ಲಿ ಓರ್ವ ಪೊಲೀಸ್‌ ಪೇದೆ ನಿಲ್ಲಿಸಲು ಆಗದಷ್ಟು ಪೊಲೀಸ್‌ ಅಧಿಕಾರಿಗಳಿಗೆ ಆಗಿಲ್ಲ. ಹೋಂ ಗಾರ್ಡ್‌ ವಾರದಲ್ಲಿ ಒಂದೆರಡು ದಿನ ನಿಲ್ಲಿಸುವುದನ್ನು ಬಿಟ್ಟರೆ ಬಸ್‌ ನಿಲ್ದಾಣದ ಮುಂದೆ ಓರ್ವ ಪೊಲೀಸ್‌ ಪೇದೆ ಅಳವಡಿಸಿಲ್ಲ?

ʼಗೂಡ್ಸ್‌ ಹಾಗೂ ಪ್ಯಾಸೆಂಜರ್‌ ಆಟೋಗಳಲ್ಲಿ ಮಿತಿ ಮೀರಿದ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಆಟೋಗಳ ಮೇಲೆ ಕೇಸು ದಾಖಲಿಸುವಂತೆ ಬೇಗೂರು ಎಸ್‌ಐ ಗೆ ಸೂಚಿಸುತ್ತೇನೆ ಅಲ್ಲದೆ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಪೇದೆಯೊಬ್ಬರನ್ನು ನಿಯೋಜಿಸಲು ಹೇಳುವೆ.ಲಕ್ಷ್ಮಯ್ಯ, ಡಿಎಸ್‌ಪಿ ಚಾ.ನಗರ

Share this article