ಕನ್ನಡಪ್ರಭ ವಾರ್ತೆ ದಾವಣಗೆರೆ
ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ತಲೆದೋರುತ್ತಿದ್ದು, ಟ್ಯಾಂಕರ್ ಮೂಲಕವಾಗಲೀ, ರೀ ಬೋರ್, ಹೊಸ ಕೊಳವೆ ಬಾವಿ ಕೊರೆಸಿಯಾದರೂ ನೀರು ಕೊಡಲು ಪಾಲಿಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಮೇಯರ್ ಹಾಗೂ ಆಯುಕ್ತರಿಗೆ ಒಕ್ಕೊರಲಿನಿಂದ ಒತ್ತಾಯಿಸಿದರು.ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ, ಮಾಜಿ ಮೇಯರ್ ಎಸ್.ಟಿ. ವೀರೇಶ ಜನ ಸಾಮಾನ್ಯರಲ್ಲ, ನಾವೇ ಪಾಲಿಕೆ ಸದಸ್ಯರು ನೀರು ಪೂರೈಕೆ ವಿಭಾಗ ಇಂಜಿನಿಯರ್‌ಗೆ ನೀರು ಕೇಳಿ, ಕೈ-ಕಾಲು ಹಿಡಿಯಬೇಕಾದ ಸ್ಥಿತಿ ಇದೆ. ಬೆಳಿಗ್ಗೆ 7.30ಕ್ಕೆ ಟ್ಯಾಂಕರ್ ಕೇಳಿದರೆ, ಸಂಜೆ 5.30ಕ್ಕೆ ಕೊಡಲೋ ಬೇಡವೋ ಎಂಬಂತೆ ನೀರು ನೀಡುತ್ತಾರೆ ಎಂದರು.ನೀರು ಪೂರೈಕೆ ಸಿಬ್ಬಂದಿಗೆ ಕೇಳಿದರೆ ಇಂಜಿನಿಯರ್ ಹೇಳಿದರಷ್ಟೇ ನೀರು ನೀಡುವುದಾಗಿ ಹೇಳುತ್ತಾರೆ. ಯಾರಾದರೂ ಒಬ್ಬರು ಅಧಿಕಾರಿಯನ್ನು ನೀರಿನ ಸಮಸ್ಯೆ ನೀಗುವವ ರೆಗೂ ನಿಯೋಜನೆ ಮಾಡಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ, ಜನರನ್ನು ಕರೆದುಕೊಂಡು ಬಂದು, ಪಾಲಿಕೆ ಕಚೇರಿಗೆ ಮುತ್ತಿಗೆ, ಮೇಯರ್-ಆಯುಕ್ತರ ಕೊಠಡಿಗೆ ಜನರನ್ನು ಕರೆ ತಂದು, ನಾನೇ ಬೀಗ ಹಾಕಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು. ಅದಕ್ಕೆ ಕಾಂಗ್ರೆಸ್ ಸದಸ್ಯ ಎ.ನಾಗರಾಜ ಧ್ವನಿಗೂಡಿಸಿದರು.
ಕಾಂಗ್ರೆಸ್ಸಿನ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ, ಇಂಜಿನಿಯರ್‌ವೊಬ್ಬರು ಪಾಲಿಕೆ ಸದಸ್ಯರನ್ನು ಏಕವಚನದಲ್ಲಿ ಬೈಯ್ಯುತ್ತಾರೆ. ಪಾಲಿಕೆ ಸದಸ್ಯರಿಗೆ ಕನಿಷ್ಟ ಗೌರವ ಕೊಡುವ ವ್ಯವದಾನ ಇಲ್ಲದ ಅಧಿಕಾರಿಗಳು, ಸಿಬ್ಬಂದಿ ಇಲ್ಲಿದ್ದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂದು ಕಿಡಿಕಾರಿದರು. ಅದಕ್ಕೆ ಕಾಂಗ್ರೆಸ್ಸಿನ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ, ಬಿಜೆಪಿಯ ಕೆ.ಎಂ.ವೀರೇಶ ದನಿಗೂಡಿಸಿದರು.ಬಿಜೆಪಿ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ ಮಾತನಾಡಿ, ನೀರು ಪೂರೈಸುವುದಷ್ಟೇ ಪಾಲಿಕೆ ಕೆಲಸವಲ್ಲ. ನೀರಿನ ಸಮಸ್ಯೆ ಎಲ್ಲಾ ಕಡೆ ಇದೆ. ಆದರೆ, ನಮ್ಮ ಊರಿನಲ್ಲಿ ನೀರು ಮಿತವಾಗಿ ಬಳಕೆ ಮಾಡಬೇಕಾದ ಜನರಿಗೆ ನೀರನ್ನು ಬೇಕಾಬಿಟ್ಟಿ ವ್ಯರ್ಥ ಮಾಡುತ್ತಿರುವುದನ್ನು ತಪ್ಪಿಸಿ, ಪೋಲಾಗುವ ನೀರನ್ನು ಉಳಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಆಯುಕ್ತೆ ಜಿ.ರೇಣುಕಾ ಮಾತನಾಡಿ, ದಾವಣಗೆರೆ ನಗರಕ್ಕೆ ನೀರು ಪೂರೈಸುವ ಕುಂದುವಾಡ ಕೆರೆಯಲ್ಲಿ 90 ದಿನಕ್ಕಾಗುವಷ್ಟು, ಟಿವಿ ಸ್ಟೇಷನ್ ಕೆರೆಯಲ್ಲಿ 60 ದಿನಕ್ಕೆ ಆಗುವಷ್ಟು ನೀರು ಸಂಗ್ರಹವಿದೆ. 1023 ಕೊಳವೆ ಬಾವಿಗಳ ಪೈಕಿ 11 ರಲ್ಲಿ ನೀರು ಪ್ರಮಾಣ ಕುಸಿದಿದೆ. 13 ಕೊಳವೆ ಬಾವಿ ದುರಸ್ಥಿ ಕೈಗೊಳ್ಳಲಾಗಿದೆ. ಮೂರೂ ವಲಯಗಳಲ್ಲಿ ತುರ್ತು ಕಾಮಗಾರಿಗೆ 95 ಲಕ್ಷರು. ಅನುದಾನ ಮೀಸಲಿಟ್ಟಿದ್ದೇವೆ. 2 ಟ್ಯಾಂಕರ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದೆ. ಏಪ್ರಿಲ್ ವರೆಗೆ ನೀರಿನ ಸಮಸ್ಯೆ ಇಲ್ಲ. ಮುಂದೆ ನಾಲೆಯಲ್ಲಿ ನೀರು ಹರಿಸುವುದರಿಂದ ನೀರಿನ ಸಮಸ್ಯೆಯಾಗದು. ಆದರೂ, ಸದಸ್ಯರ ಒತ್ತಾಯದಂತೆ ಮುಂಜಾಗ್ರತೆ ವಹಿಸುತ್ತೇವೆ. ಅಗತ್ಯ ಬಿದ್ದರೆ ನೀರಿನ ಸಮಸ್ಯೆಗಾಗಿಯೇ ಪ್ರತ್ಯೇಕ ವಿಶೇಷ ಸಭೆ ನಡೆಸುವುದಾಗಿ ಭರವಸೆ ನೀಡಿದರು.ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಸಾರ್ವಜನಿಕರಿಗೆ ತ್ವರಿತವಾಗಿ, ಯಾವುದೇ ರೀತಿ ಅವ್ಯವಹಾರಕ್ಕೆ ಆಸ್ಪದ ಆಗದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆ ಸಿಗಲೆಂದು ಇ-ಸ್ವತ್ತು ಆಂದೋಲನ ಆರಂಭಿಸಿದೆ. ಆದರೂ ಇ-ಸ್ವತ್ತನ್ನು ಸರಿಯಾಗಿ ನೀಡುತ್ತಿಲ್ಲ. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಲಾಗುತ್ತಿದೆ. ಹಣಕ್ಕೂ ಕೆಲವರು ಬೇಡಿಕೆ ಇಡುತ್ತಿದ್ದಾರೆಂಬ ಆರೋಪ, ದೂರು ಕೇಳಿ ಬರುತ್ತಿವೆ. ಇಂತಹದ್ದು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದಾಗ ಪಕ್ಷಾತೀತವಾಗಿ ಎ.ನಾಗರಾಜ, ಕೆ.ಚಮನ್ ಸಾಬ್, ಆರ್.ಶಿವಾನಂದ, ಎಸ್.ಟಿ.ವೀರೇಶ ಇತರರು ಧ್ವನಿಗೂಡಿಸಿದರು.
ಮಾಜಿ ಮೇಯರ್, ಬಿಜೆಪಿ ಸದಸ್ಯ ಬಿ.ಜಿ.ಅಜಯಕುಮಾರ ಮಾತನಾಡಿ, 17ನೇ ವಾರ್ಡ್‌ನಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದು ಸರಿಯಲ್ಲ. ಈಗಿರುವ ಮಟನ್ ಮಾರುಕಟ್ಟೆ ಮೇಲೆಯೇ ಮೀನು ಮಾರುಕಟ್ಟೆ ಕಟ್ಟುವುದರಿಂದ ಜನರಿಗೆ ಒಂದೇ ಕಡೆ ಮೀನು, ಮಾಂಸ ಸಿಗುವಂತಾಗುತ್ತದೆ. ಮೀನು ಮಾರುಕಟ್ಟೆ ಜಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಬೇಕು ಎಂಬುದಾಗಿ ಮೇಯರ್, ಆಯುಕ್ತರಿಗೆ ಒತ್ತಾಯಿಸಿದರು.ಉಪ ಮೇಯರ್ ಯಶೋಧ ಯೋಗೇಶ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಉದಯಕುಮಾರ, ಮೀನಾಕ್ಷಿ ಜಗದೀಶ, ಆಡಳಿತ-ವಿಪಕ್ಷ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು.ಜನವಸತಿ ಪ್ರದೇಶಕ್ಕೆ ಬಾರ್, ಹೊಟೆಲ್‌ಗಳ ಕಾಟ!ದಾವಣಗೆರೆ: ಜನದಟ್ಟಣೆ, ವಾಹನದಟ್ಟಣೆ, ಜನ ವಸತಿ ಪ್ರದೇಶವಾದ ವಿದ್ಯಾರ್ಥಿ ಭವನದಿಂದ ಹರ್ಷ ಬಾರ್ ವರೆಗೆ ಬಾರ್‌ಗಳು, ಮಾಂಸಹಾರಿ ಹೊಟೆಲ್‌ಗಳ ಹಾವಳಿಯಿಂದಾಗಿ ಕೆಟಿಜೆ ನಗರ ನಿವಾಸಿಗಳ ನೆಮ್ಮದಿಗೆ ಭಂಗವಾಗಿದ್ದು, ಪದೇಪದೇ ಒಳ ಚರಂಡಿ ತುಂಬಿಕೊಂಡು ಜನರಿಗಷ್ಟೇ ಅಲ್ಲ, ಪಾಲಿಕೆಗೂ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಆರೋಪಿಸಿದರು.ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಭವನದಿಂದ ಹರ್ಷ ಬಾರ್ ವರೆಗೆ ಎರಡೂ ಬದಿ ಮದ್ಯದಂಗಡಿ, ಮಾಂಸಾಹಾರಿ ಹೋಟೆಲ್‌ಗಳು ಇದ್ದು, ಮಧ್ಯಾಹ್ನ, ಸಂಜೆ, ರಾತ್ರಿ ವೇಳೆ ವಾಹನ ನಿಲುಗಡೆಯಿಂದಾಗಿ ಆ ಭಾಗದಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ ಎಂದರು.
ಹೊಟೆಲ್, ಬಾರ್ ಆರಂಭಿಸಲು ಸ್ಥಳೀಯ ನಿವಾಸಿಗಳ ಗಮನಕ್ಕೂ ತಾರದೇ ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ. ಇದರಿಂದ ಸಂಕಷ್ಟ ಅನುಭವಿಸಬೇಕಾದವರು ಅಲ್ಲಿನ ನಿವಾಸಿಗಳು. ವಾರದಲ್ಲಿ 2-3 ಸಲ ಒಳ ಚರಂಡಿಗಳು ಕಟ್ಟಿ, ತೀವ್ರ ತೊಂದರೆಯಾಗುತ್ತಿದೆ. ಹೋಟೆಲ್‌ಗಳಲ್ಲಿ ಅಳಿದುಳಿದ ಆಹಾರ, ಮಾಂಸ, ಮೂಳೆಗಳನ್ನು ಒಳ ಚರಂಡಿಗೆ ಸುರಿಯುತ್ತಿದ್ದು, ಪದೇಪದೇ ಸಮಸ್ಯೆಯಾಗುತ್ತಿದೆ ಎಂದು ದೂರಿದರು. ಅದಕ್ಕೆ ಉಪ ಮೇಯರ್ ಯಶೋಧ ಯೋಗೇಶ ಸಹ ತಾವು ಸಹ ನಾಲ್ಕೈದು ಸಲ ಈ ಬಗ್ಗೆ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.ಇನ್ನು, 12ನೇ ಕ್ರಾಸ್‌ನಲ್ಲಿ ಸರ್ಕಾರಿ ವಿದ್ಯಾರ್ಥಿನಿಯರ ನಿಲಯ ಇದೆ. ಪಕ್ಕದಲ್ಲೇ ನಾನ್ ವೆಜ್ ಹೋಟೆಲ್, ಬಾರ್ ಇದೆ. ಕುಡಿದು, ತಿಂದು ಬಂದವರು ಅಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುತ್ತಿದ್ದು, 12ನೇ ಕ್ರಾಸ್‌ನಿಂದ ಡಾಂಗೇ ಪಾರ್ಕ್‌ವರೆಗೂ ಸಾಗುವ ಮುಖ್ಯರಸ್ತೆಯ ಪ್ರವೇಶ ಸ್ಥಳ, ಎರಡೂ ಬದಿ ವಾಹನ ನಿಲ್ಲಿಸಿ, ಹೆಣ್ಣು ಮಕ್ಕಳು ಸಂಚರಿಸಲು ಮುಜುಗರ ಪಡುವಂತಿದೆ ಎಂದು ಅವರು ಆಯುಕ್ತರ ಗಮನಕ್ಕೆ ತಂದರು.ಕಾಂಗ್ರೆಸ್ಸಿನ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ, ಯಾವುದೇ ಹೊಟೆಲ್, ಬಾರ್ ಆಗಿದ್ದರೂ ತ್ಯಾಜ್ಯವನ್ನು ಸುರಿಯುವ ಮುನ್ನ ಅದೇ ಹೊಟೆಲ್, ಬಾರ್ ಗೆ ಚೇಂಬರ್ ಮಾಡಬೇಕು. ಅಲ್ಲಿ ಛೇಂಬರ್ ಕಟ್ಟಿಕೊಂಡರೆ ಅದನ್ನು ಅದರ ಮಾಲೀಕನೇ ಸರಿಪಡಿಸಿಕೊಳ್ಳಬೇಕು. ಇದು ಕೇವಲ ಕೆಟಿಜೆ ನಗರ ಸಮಸ್ಯೆ ಅಲ್ಲ. ಬಹುತೇಕ ಕಡೆ ಇದೆ. ಈ ಹಿನ್ನೆಲೆಯಲ್ಲಿ ಮೇಯರ್, ಆಯುಕ್ತರು, ಅಧಿಕಾರಿಗಳು ನಾವೆಲ್ಲಾ ಸ್ಥಳ ಪರಿಶೀಲಿಸೋಣ. ಸಮಸ್ಯೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದರು.ಆಯುಕ್ತರಾದ ರೇಣುಕಾ ಮಾತನಾಡಿ, ವಿದ್ಯಾರ್ಥಿ ಭವನದಿಂದ ಯಾವ್ಯಾವ ಬಾರ್ ಮತ್ತು ಮಾಂಸಹಾರಿ ಹೊಟೆಲ್‌ಗಳಿಂದ ಜನ ವಸತಿ ಪ್ರದೇಶದ ಜನರಿಗೆ ತೊಂದರೆ ಯಾಗುತ್ತಿದೆಯೋ, ಆ ಭಾಗದಲ್ಲಿ ಎಲ್ಲೆಲ್ಲಿ ಒಳ ಚರಂಡಿ ವ್ಯವಸ್ಥೆಗೆ ನಿರಂತರ ಸಮಸ್ಯೆ ಆಗುತ್ತಿದೆಯೋ ಅಂತಹ ಹೊಟೆಲ್, ಬಾರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಾರ್ಕಿಂಗ್ ಇಲ್ಲದೆ ಹೊಟೆಲ್‌ಗೆ ಅನುಮತಿ ನೀಡಿದ್ದರೆ ಪಾಲಿಕೆ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದಕ್ಕೆ ಕಾಂಗ್ರೆಸ್ಸಿನ ಅಬ್ದುಲ್ ಲತೀಫ್, ಕೆ.ಚಮನ್ ಸಾಬ್, ಬಿಜೆಪಿ ಉಪ ಮೇಯರ್ ಯಶೋಧ ಯೋಗೇಶ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯ ಎಸ್.ಟಿ.ವೀರೇಶ ಇತರರು ಸಮ್ಮತಿಸಿದರು.
ರಾಷ್ಟ್ರಗೀತೆ, ನಾಡಗೀತೆಗೆ ಬಿಜೆಪಿ ಅಪಮಾನ: ಕಾಂಗ್ರೆಸ್ದಾವಣಗೆರೆ: ರಾಷ್ಟ್ರಗೀತೆ, ನಾಡಗೀತೆ ಹಾಡುವ ವೇಳೆ ಕಪ್ಪು ಪಟ್ಟಿ ಧರಿಸಿದ್ದ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಸಭೆಯಿಂದ ಹೊರ ಹಾಕುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದರಿಂದ ಗದ್ದಲದ ವಾತಾವರಣ ಸೃಷ್ಟಿಯಾದ ಘಟನೆ ನಗರದ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.ನಗರ ಪಾಲಿಕೆಯಲ್ಲಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ರಾಷ್ಟ್ರಗೀತೆ, ನಾಡಗೀತೆ ಹಾಡುವ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸುವ ಮೂಲಕ ನಾಡಗೀತೆ, ರಾಷ್ಟ್ರಗೀತೆಗೆ ಅಮಾನವಿಸಿದ್ದು, ಈ ಎಲ್ಲರನ್ನೂ ಸಭೆಯಿಂದ ಹೊರ ಹಾಕಬೇಕು ಎಂಬುದಾಗಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು ತಾವು ರಾಷ್ಟ್ರಗೀತೆ, ನಾಡಗೀತೆ ಹಾಡುವಾಗ ಕಪ್ಪು ಪಟ್ಟಿ ಧರಿಸಿರಲಿಲ್ಲ ಎಂದು ಹೇಳಿದರು. ಆಗ ಕಪ್ಪು ಪಟ್ಟಿಯನ್ನು ನೀವು ಧರಿಸಿದ್ದಕ್ಕೆ ನಮ್ಮಲ್ಲಿ ವೀಡಿಯೋ ಸಾಕ್ಷಿ ಇದೆ ಎಂದು ಕಾಂಗ್ರೆಸ್ಸಿಗರು ಹೇಳಿದರು.ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾದ ನಾಸೀರ್ ಅಹಮ್ಮದ್ ಆಯ್ಕೆಯಾದ ನಂತರ ವಿಜಯೋತ್ಸವ ಆಚರಿಸುತ್ತಿದ್ದ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದ್ದು ಅಕ್ಷಮ್ಯ. ಅದರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕೆ ಹೊರತು, ರಾಷ್ಟ್ರಗೀತೆ, ನಾಡಗೀತೆ, ದೇಶ, ನಾಡಿನ ಬಗ್ಗೆ ಅಪಾರ ಅಭಿಮಾನವಿರುವ ನಮಗಲ್ಲ ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದರು.
ರಾಷ್ಟ್ರ ದ್ರೋಹದಹೇಳಿಕೆ ನೀಡಿದವರ ಪರ ಇರುವವರಿಗೆ ಧಿಕ್ಕಾರ ಎಂಬುದಾಗಿ ಬಿಜೆಪಿ ಸದಸ್ಯರು ಕೂಗಿದರು. ರಾಷ್ಟ್ರಗೀತೆಗೆ ಅವಮಾನಿಸಿದವರಿಗೆ ಧಿಕ್ಕಾರ ಎಂದು ಕಾಂಗ್ರೆಸ್ಸಿಗರು ಕೂಗಿದರು. ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಇದೇ ವಿಚಾರಕ್ಕೆ ಮಾತಿನ ಗದ್ದಲ ಏರ್ಪಟ್ಟಿದ್ದರಿಂದ ಐದು ನಿಮಿಷ ಕಾಲ ಸಭೆಯನ್ನು ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಮುಂದೂಡಬೇಕಾಯಿತು.