ನೀರಿನ ಸಮಸ್ಯೆ ಎದುರಾಗದಂತೆ ನಿಗಾ ವಹಿಸಿ

KannadaprabhaNewsNetwork | Published : Mar 16, 2024 1:48 AM

ಸಾರಾಂಶ

ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ದಿನ ಬಿಟ್ಟು ದಿನ ನೀರು ಪೂರೈಸಬೇಕು. ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಮೋಟರ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗದ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ದಿನ ಬಿಟ್ಟು ದಿನ ನೀರು ಪೂರೈಸಬೇಕು. ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಮೋಟರ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗದ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು.

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಬೇಸಿಗೆಯ ಬಿಸಿ ಇದೆ. ಮುಂದಿನ ತಿಂಗಳಲ್ಲಿಯೇ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಸಂಪೂರ್ಣ ಬತ್ತುವ ಸಾಧ್ಯತೆ ಹಿನ್ನೆಲೆ ರಬಕವಿ- ಬನಹಟ್ಟಿ ನಗರಸಭೆಯಲ್ಲಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕರು, ಕುಡಿಯುವ ನೀರಿಗಾಗಿ ಎಲ್ಲ 31 ವಾರ್ಡ್‌ಗಳ ಸದಸ್ಯರ ಸಹಮತದೊಂದಿಗೆ ಸಮಾನ ಮನಸ್ಕರಾಗಿ ಅಲ್ಲಲ್ಲಿ ನೀರು ಸದ್ಬಳಕೆ ಮಾಡಿಕೊಳ್ಳಬೇಕು. ನೀರಿಗಾಗಿ ವಾರ್ಡ್‌ಗಳ ಮಧ್ಯ ಅನಗತ್ಯ ವಾದ-ವಿವಾದ ಬೇಡ. ಶುದ್ಧ ನೀರಿನ ಘಟಕಗಳ ಮೇಲೆ ನಿಗಾವಹಿಸಿ. ಈಗಾಗಲೇ ನಿರ್ವಹಣೆಯಾಗದಿರುವ ಘಟಕಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಅಲ್ಪಾವಧಿ ಟೆಂಡರ್‌ನೊಂದಿಗೆ ಕನಿಷ್ಠ ₹೫೦ ಲಕ್ಷಗಳಷ್ಟಾದರೂ ನೀರಿನ ಸಮಸ್ಯೆಗೆ ಶೀಘ್ರ ಬಿಡುಗಡೆಗೊಳಿಸಬೇಕು. ಸರ್ಕಾರಿ ಹಾಗೂ ಖಾಸಗಿ ಬಾವಿ, ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ವಿಕೋಪ ಸ್ಥಿತಿಯಲ್ಲಿರುವ ಪ್ರದೇಶದಲ್ಲಿ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ, ನೀರಿನ ಅಭಾವ ತಪ್ಪಿಸಲು ನಗರಸಭೆ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿದೆ ಎಂದರು.

ಸದಸ್ಯರ ಗೈರು, ಶಾಸಕರು ಗರಂ: ಅತ್ಯಂತ ಮಹತ್ವದ ಹಾಗೂ ತುರ್ತು ಸಭೆಯಾಗಿರುವ ನೀರಿನ ಸಮಸ್ಯೆ ಕುರಿತಾದ ಸಭೆಗೆ ಕೇವಲ ೧೦-೧೨ ಸದಸ್ಯರು ಮಾತ್ರ ಹಾಜರಿದ್ದರು. ೩೧ ಸದಸ್ಯರನ್ನೊಳಗೊಂಡ ನಗರಸಭೆಯಲ್ಲಿ ಅರ್ಧದಷ್ಟೂ ಸದಸ್ಯರು ಹಾಜರಾಗದಿರುವುದು ಶಾಸಕ ಸವದಿ ಗರಂ ಆಗುವಂತೆ ಮಾಡಿತು. ಸದಸ್ಯರು ಜೀವಜಲ ಪೂರೈಕೆ ಕಾರ್ಯದಲ್ಲಿ ನಿರುತ್ಸಾಹಿಗಳಾದರೆ ಹೇಗೆ? ಎಲ್ಲ ಸದಸ್ಯರೂ ತಮ್ಮ ವಾರ್ಡ್‌ಗಳ ಜನತೆಗೆ ಸಮರ್ಪಕ ನೀರು ಒದಗಿಸಲು ಬದ್ಧರಾಗಬೇಕು. ನಗರಸಭೆ ಸಿಬ್ಬಂದಿ ಕೂಡ ಯಾವುದೇ ಕಾರಣಕ್ಕೂ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಪೌರಾಯುಕ್ತ ಜಗದೀಶ ಈಟಿ, ಅಭಿಯಂತರ ರಾಘವೇಂದ್ರ ಕುಲಕರ್ಣಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಅರುಣ ಬುದ್ನಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದೀಪಾ ಕೊಣ್ಣೂರ, ಬಸು ಗುಡ್ಡೋಡಗಿ, ಅಶೋಕ ಹಳ್ಳೂರ ಸೇರಿದಂತೆ ಅನೇಕರಿದ್ದರು.

ತೇರದಾಳ ಕ್ಷೇತ್ರದಲ್ಲಿನ ಕೃಷ್ಣೆ ಹಾಗು ಘಟಪ್ರಭಾ ನದಿ ನೀರು ಗಣನೀಯ ಮಟ್ಟದಲ್ಲಿ ಕಡಿಮೆಯಾಗುತ್ತಿದೆ. ಮುಂಬರುವ ಬಿರು ಬೇಸಿಗೆಯಲ್ಲಿ ನೀರು ಪೂರೈಸುವುದು ಸವಾಲಿನ ಕಾರ್ಯವಾಗಿದ್ದು, ಗ್ರಾಪಂ ವ್ಯಾಪ್ತಿ ಸೇರಿ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಕಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.’

-ಸಿದ್ದು ಸವದಿ, ಶಾಸಕರು.

Share this article