ಬರವಣಿಗೆಗೆ ಪ್ರಶಸ್ತಿ, ಸನ್ಮಾನಗಳ ಉದ್ದೇಶ ಸಲ್ಲ: ಜಯಂತ್ ಕಾಯ್ಕಿಣಿ

KannadaprabhaNewsNetwork | Published : Jul 8, 2024 12:34 AM

ಸಾರಾಂಶ

ಕೊಪ್ಪ ಹೊರವಲಯದ ಬಾಳಗಡಿ ಕನ್ನಡ ಭವನದಲ್ಲಿ ನಡೆದ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ್‌ ಕಾಯ್ಕಿಣಿ ಮೊದಲಾದವರು ಪಾಲ್ಗೊಂಡಿದ್ದರು.

ಕನ್ನಡಪ್ರಭವಾರ್ತೆ ಕೊಪ್ಪ

ಬರವಣಿಗೆಯು ಪ್ರಶಸ್ತಿ, ಸನ್ಮಾನಗಳ ಉದ್ದೇಶ ಹೊಂದಿರಬಾರದು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.

ಪಟ್ಟಣದ ಹೊರವಲಯದ ಬಾಳಗಡಿಯ ಕನ್ನಡ ಭವನದಲ್ಲಿ ನಡೆದ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾಹಿತ್ಯವು ಸಾಮಾಜಿಕ ಕೌಟುಂಬಿಕತೆಯ ಆಚರಣೆಯಾಗಿದೆ. ಮನುಷ್ಯ ಮನುಷ್ಯರ ನಡುವೆ ಒಡನಾಟ ಹೆಚ್ಚಿಸಲು ಸಾಹಿತ್ಯ ಉತ್ತಮ ಸಾಧನವಾಗಿದೆ. ಸಾಹಿತ್ಯ ಜನಜೀವನದ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ. ಜಾತಿ ಅಸಮಾನತೆ ಮೂಢನಂಬಿಕೆಗಳನ್ನು ಮೀರಿ ನಡೆಯುವುದೇ ಸಾಹಿತ್ಯವಾಗಿದೆ. ಸಾಹಿತ್ಯ ಅನುಭವದ ಮಾರ್ಗವಾಗಿದೆ. ಪ್ರೀತಿ ಇದ್ದಾಗ ಎಲ್ಲವೂ ಚಂದ, ಪ್ರೀತಿ ಇಲ್ಲದೆ ಇದ್ದಲ್ಲಿ ಎಲ್ಲವೂ ಕುರೂಪಿ. ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು. ಓದಿನ ಹುಟ್ಟು ತರಬೇತಿಯಿಂದ ಸಾಧ್ಯವಿಲ್ಲ. ಅದನ್ನು ಪ್ರೀತಿಯಿಂದ ಸಾಹಿತ್ಯ ಪರಿಷತ್‌ನಂತಹ ಸಂಘಟನೆಗಳು ಅರಳಿಸಬೇಕು ಎಂದರು.

ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿಯವರು ಪ್ರಾಸ್ತಾವಿಕ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ತನ್ನು ಆರಂಭಿಸಿ ಕನ್ನಡ ನಾಡಿಗೆ ಗೌರವದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಎಲ್ಲರನ್ನೂ ಒಗ್ಗೂಡಿಸಲು ಇರುವ ಭಾಷೆಯಾಗಿದೆ. ಪರಿಷತ್‌ನಲ್ಲಿ ರಾಜಕೀಯ ರಹಿತ ಸೃಜನಶೀಲ ಚಟುವಟಿಕೆ ನಡೆಸಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಸಾಮಾಜಿಕ ಪರಿವರ್ತನೆ, ಸಾಂಸ್ಕೃತಿಕ ಅಭಿವೃದ್ಧಿ ಕ.ಸಾ.ಪ. ಕಾರ್ಯಕ್ರಮಗಳಿಂದ ನಡೆಯುತ್ತಿದೆ ಎಂದು ನೂತನ ಅಧ್ಯಕ್ಷ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಮಾತನಾಡಿ ಹಲವಾರು ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದು ಕ.ಸಾ.ಪ.ದ ಎಲ್ಲಾ ನಿಕಟಪೂರ್ವ ಅಧ್ಯಕ್ಷರು ನೂತನ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರ ಸಲಹೆ ಸಹಕಾರ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

೬ ಜನ ನಿಕಟಪೂರ್ವ ಅಧ್ಯಕ್ಷರಿಂದ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕ.ಸಾ.ಪ. ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೊಪ್ಪ ತಾಲೂಕು ಕ.ಸಾ.ಪ ನೂತನ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಸೇವಾದೀಕ್ಷೆ ನೀಡಿದರು. ನಿಕಟಪೂರ್ವ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ ನೂತನ ಅಧ್ಯಕ್ಷರಿಗೆ ಪರಿಷತ್ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎಂ.ಟಿ.ಶಂಕರಪ್ಪ, ನವೀನ್ ಕುಮಾರ್, ಜಿನೇಶ್ ಇರ್ವತ್ತೂರು, ಬಿ.ಆರ್. ಅಂಬರೀಶ, ಮಾಜಿ ಯೋಧ ಶುಕುರ್ ಅಹಮ್ಮದ್, ಸುಮಾರಂಗಪ್ಪ, ನವೀನ್ ಕರುವಾನೆ, ರವಿಕಾಂತ್ , ಸುಬ್ಬಣ್ಣ, ಗುಡ್ಡೆತೋಟ ನಟರಾಜ್, ಎಚ್.ಎಸ್. ಇನೇಶ್, ಬಾಳೆಮನೆ ನಟರಾಜ್ ಮುಂತಾದವರಿದ್ದರು.

Share this article