ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ: ಡಾ. ಪ್ರಸನ್ನ ಕಟ್ಟಿ

KannadaprabhaNewsNetwork |  
Published : Aug 07, 2024, 01:01 AM IST
ಅಫಜಲ್ಪುರ ತಾಲೂಕಿನ ರೇವೂರ(ಬಿ) ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಸನ್ನ ಕಟ್ಟಿ ಅವರಿಗೆ ಗ್ರಾಮಸ್ಥರು, ಸಿಬ್ಬಂದಿಗಳು ಸನ್ಮಾನಿಸಿದರು.  | Kannada Prabha

ಸಾರಾಂಶ

ಅಫಜಲ್ಪುರ ತಾಲೂಕಿನ ರೇವೂರ (ಬಿ) ಸರ್ಕಾರಿ ಆಸ್ಪತ್ರೆಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಬದುಕಿನಲ್ಲಿ ಬಹಳ ಶ್ರೇಷ್ಠ ಕ್ಷಣವಾಗಿದೆ. ಇಲ್ಲಿನ ಜನ ನನ್ನ ಕುಟುಂಬದವರೆಂದು ಭಾಸವಾಗುತ್ತದೆ. ಇದರ ನಡುವೆ ನನ್ನ ಸೇವೆ ಗುರುತಿಸಿ ರಾಜ್ಯ ಸರ್ಕಾರ ವೈದ್ಯಶ್ರೀ ಪ್ರಶಸ್ತಿ ನೀಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ರೇವೂರ (ಬಿ) ಸರ್ಕಾರಿ ಆಸ್ಪತ್ರೆಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಬದುಕಿನಲ್ಲಿ ಬಹಳ ಶ್ರೇಷ್ಠ ಕ್ಷಣವಾಗಿದೆ. ಇಲ್ಲಿನ ಜನ ನನ್ನ ಕುಟುಂಬದವರೆಂದು ಭಾಸವಾಗುತ್ತದೆ. ಇದರ ನಡುವೆ ನನ್ನ ಸೇವೆ ಗುರುತಿಸಿ ರಾಜ್ಯ ಸರ್ಕಾರ ವೈದ್ಯಶ್ರೀ ಪ್ರಶಸ್ತಿ ನೀಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದು ವೈದ್ಯಾಧಿಕಾರಿ ಡಾ. ಪ್ರಸನ್ನ ಕಟ್ಟಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದಿಂದ ವೈದ್ಯಶ್ರೀ ಪ್ರಶಸ್ತಿ ಪಡೆದ ನಿಮಿತ್ತ ರೇವೂರ(ಬಿ) ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ, ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಉತ್ತಮ ಚಿಕಿತ್ಸೆ ಸಿಗುತ್ತಿದೆ. ವೈದ್ಯರು, ಸಿಬ್ಬಂದಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ಸೇವೆ ಮತ್ತು ಅವರ ಪರಿಶ್ರಮದಿಂದ ನನಗಿಂದು ಸರ್ಕಾರದ ಪ್ರಶಸ್ತಿ ಲಭಿಸುವಂತಾಗಿದೆ. ಇದರ ಶ್ರೇಯ ಇಲ್ಲಿನ ಕೆಲಸ ಮಾಡುವ ವೈದ್ಯರು, ಸಿಬ್ಬಂದಿಗೆ ಸಲ್ಲುತ್ತದೆ ಎಂದ ಅವರು, ನನ್ನ ವೃತ್ತಿ ಜೀವನದ ಕೊನೆಯ ದಿನದವರೆಗೂ ನಾನು ರೇವೂರ(ಬಿ) ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಬಯಸುತ್ತೇನೆ. ಆರಂಭದಲ್ಲಿ ಇಲ್ಲಿಗೆ ಬಂದಾಗ ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ರಣ ಬಿಸಲಿನಲ್ಲಿ ಹೇಗಪ್ಪ ಕೆಲಸ ಮಾಡೋದು ಎಂದು ಆತಂಕಗೊಂಡಿದ್ದೆ, ಆದರೆ ಇಲ್ಲಿನ ಜನರ ಪ್ರೀತಿ ಬಿಸಿಲು, ಬರ ಎಲ್ಲವನ್ನು ಮರೆಸಿ ನನ್ನನ್ನು ಇಲ್ಲಿನ ಮನೆಯ ಮಗನಂತೆ ಮಾಡಿ ಬಿಟ್ಟಿದೆ. ಹೀಗಾಗಿ ಈ ಊರಿನ ಜನರ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಭಾವುಕರಾದರು.

ಪಿಎಸ್‌ಐ ವಾತ್ಸಲ್ಯ ಮಾತನಾಡಿ, ಸರ್ಕಾರಿ ಸೇವೆ ಮಾಡುವಾಗ ಬರುವ ಸವಾಲುಗಳು ಒಂದೆರಡಲ್ಲ. ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ನಾವು ಜನರಿಗೆ ಉತ್ತಮ ಸೇವೆ ಕೊಟ್ಟಾಗ ಸರ್ಕಾರದ ಇಂತಹ ಪ್ರಶಸ್ತಿಗಳು ಹುಡುಕಿ ಬರುತ್ತೆ. ವೈದ್ಯಶ್ರೀ ಪ್ರಶಸ್ತಿ ಪಡೆದ ಡಾ. ಪ್ರಸನ್ನ ಕಟ್ಟಿ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಡಾ. ಎಸ್.ಎಸ್. ರ್‍ಯಾಕಾ, ಶಿವಾನಂದ ಉಮ್ಮರಗಿ, ಪ್ರಕಾಶ ಪೂಜಾರಿ, ದತ್ತುಸಿಂಗ, ಶರಣಬಸಪ್ಪ, ಗೌಸಿಯಾ, ರಾಜಶ್ರೀ, ಚನ್ನಮ್ಮ, ಮಲ್ಲಿಕಾರ್ಜುನ ಬಗಲಿ, ಬಸವರಾಜ ಭೈರಾಮಡಗಿ, ಸಂತೋಷ ಮಹಾಜನಶೆಟ್ಟಿ ಸೇರಿದಂತೆ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಇದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ