ಶಿರಹಟ್ಟಿ: ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ ಜಾಗೃತಿಗೊಳಿಸಬೇಕು. ಕ್ಷಯ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಆತ್ಮೀಯ ಭಾವನೆಯಲ್ಲಿ ಸದಾ ಬೆರೆತು ಉತ್ತಮ ಜೀವನ ನಡೆಸಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಡಾ. ಚಂದ್ರು ಕೆ.ಲಮಾಣಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ ಶಿರಹಟ್ಟಿ, ತಾಪಂ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಆಶ್ರಯದಲ್ಲಿ ಜರುಗಿದ ಕ್ಷಯರೋಗಿ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕ್ಷಯರೋಗ ಸಾಂಕ್ರಾಮಿಕ ರೋಗವಾಗಿದ್ದು, ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ, ಸೂಕ್ತ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಚಾಚು ತಪ್ಪದೇ ಪಾಲಿಸಬೇಕು. ಬೇರೆಯರಿಗೆ ರೋಗ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ೨೦೨೫ರೊಳಗೆ ಕ್ಷಯಮುಕ್ತ ದೇಶ ನಿರ್ಮಾಣ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕು ಎಂದು ಹೇಳಿದರು.
ಕ್ಷಯರೋಗ ನಿರ್ಮೂಲನೆ ನಿಮಿತ್ತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ವಿಶ್ವಮಟ್ಟಕ್ಕೆ ಹೋಲಿಸಿದರೆ ಭಾರತವೊಂದರಲ್ಲಿಯೇ ಶೇ ೨೭ರಷ್ಟು ಕ್ಷಯರೋಗಿಗಳಿದ್ದು, ಮುಂದಿನ ದಿನಗಳಲ್ಲಿ ಯಾರೊಬ್ಬರೂ ಕ್ಷಯರೋಗದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ತಿಳಿಸಿದರು.ವೈದ್ಯಕೀಯ ಮೂಲಗಳ ಪ್ರಕಾರ ವಿಶ್ವದಲ್ಲಿ ನಾಲ್ಕು ಮಂದಿಗೆ ಕ್ಷಯರೋಗ ಕಾಣಿಸಿಕೊಂಡರೆ ಅದರಲ್ಲಿ ಒಬ್ಬ ಭಾರತೀಯನಿರುತ್ತಾನೆ. ಅಷ್ಟರಮಟ್ಟಿಗೆ ಭಾರತದಲ್ಲಿ ಕ್ಷಯರೋಗಿಗಳ ಪ್ರಮಾಣ ಹೆಚ್ಚಿದೆ.
ಈ ರೋಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಒಗ್ಗಟ್ಟಿನ ಶ್ರಮ ಅಗತ್ಯವಿದೆ. ಇದರ ಜತೆಗೆ ಸಾರ್ವಜನಿಕರು ಕೂಡ ಕ್ಷಯ ರೋಗದ ಲಕ್ಷಣ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದರು.ತಾಲೂಕು ಆರೋಗ್ಯಾಧಿಕಾರಿ ಸುಭಾಸ ಧೈಗೊಂಡ ಮಾತನಾಡಿ, ಕ್ಷಯರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೂ ಅಗತ್ಯ ಕ್ರಮ ಕೈಗೊಂಡಿದ್ದು, ೨೦೨೫ರ ವೇಳೆ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣ ಗುರಿ ಹೊಂದಲಾಗಿದೆ. ಇದಕ್ಕಾಗಿ ನಮ್ಮ ಕಾರ್ಯ ಚಟುವಟಿಕೆಯಲ್ಲಿ ಇನ್ನಷ್ಟು ಹೊಸ ಅಂಶ ಅಳವಡಿಸುತ್ತಿದ್ದೇವೆ ಎಂದರು.
ಕ್ಷಯರೋಗಕ್ಕೆ ಕಡ್ಡಾಯವಾಗಿ ೬ತಿಂಗಳ ಚಿಕಿತ್ಸೆ ಪಡೆಯಬೇಕು. ಆದರೆ, ರೋಗಿಗಳು ಒಂದೆರಡು ತಿಂಗಳು ಚಿಕಿತ್ಸೆ ಪಡೆದು ಲಕ್ಷಣಗಳು ಕಡಿಮೆಯಾದಂತೆ ಚೇತರಿಕೆಯಾಗಿದೆ ಎಂದು ಸ್ವಯಂ ಭಾವಿಸಿ ಪೂರ್ಣಪ್ರಮಾಣದ ಚಿಕಿತ್ಸೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ರೋಗ ಉಲ್ಬಣವಾಗುತ್ತಿದೆ. ಇನ್ನು ಬಹುತೇಕ ರೋಗಿಗಳು ಬಡತನ, ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದು, ಈ ಅಂಶಗಳು ಕೂಡ ಕ್ಷಯರೋಗ ಹೆಚ್ಚಳಕ್ಕೆ ಕಾರಣ ಎಂದು ಮಾಹಿತಿ ನೀಡಿದರು.ಪಪಂ ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ರವಿ ಕಡಾವಿ, ಬಿ.ಎಸ್. ಕರ್ಜಿಗಿ, ಡಾ.ಎಫ್.ಎಂ. ನಾರ್ಶಿ, ಬಿ.ಎಸ್. ಹಿರೇಮಠ, ಶ್ವೇತಾ ಶಿರೋಳ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಇದ್ದರು.