ಸುರಕ್ಷಿತ ಅಂತರ್ಜಾಲ ಬಳಕೆಗೆ ಜಾಗೃತಿ ಅಗತ್ಯ

KannadaprabhaNewsNetwork | Published : Feb 12, 2025 12:35 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ‌ ಸೈಬರ್‌ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿದೆ. ‌ಇವುಗಳನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಆರೋಗ್ಯಕರ ಮತ್ತು ಸುರಕ್ಷಿತ ಆನ್‌ಲೈನ್ ಸೇವೆಯನ್ನು ಹೊಂದುವ ದೃಷ್ಟಿಯಿಂದ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇತ್ತೀಚಿನ ದಿನಗಳಲ್ಲಿ‌ ಸೈಬರ್‌ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿದೆ. ‌ಇವುಗಳನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಆರೋಗ್ಯಕರ ಮತ್ತು ಸುರಕ್ಷಿತ ಆನ್‌ಲೈನ್ ಸೇವೆಯನ್ನು ಹೊಂದುವ ದೃಷ್ಟಿಯಿಂದ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸುರಕ್ಷಿತ ಅಂತರ್ಜಾಲ ದಿನಾಚರಣೆ ಕಾರ್ಯಕ್ರಮದ‌ ಪ್ರಯುಕ್ತ ಹಮ್ಮಿಕೊಳ್ಳಲಾದ‌ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷಿತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೆ ಒಳಪಡಿಸುತ್ತಿದ್ದಾರೆ. ಈ ವಂಚನೆಗಳ‌ನ್ನು ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು ಎಂದರು.ಅಂತರ್ಜಾಲದ ಮೂಲಕ ಇಡೀ ಜಗತ್ತಿನ ಮಾಹಿತಿಯನ್ನು ಅಂಗೈಯಲ್ಲಿ ಪಡೆಯಬಹುದು. ಅಂತರ್ಜಾಲದ ಮೂಲಕ‌ ನಾವು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಆದರೆ ಅಷ್ಟೇ ಅಪಾಯವೂ ಇದ್ದು ಬಳಕೆ ವೇಳೆ ಜಾಗರೂಕರಾಗಿರಬೇಕು. ಭವಿಷ್ಯದಲ್ಲಿ ಸುರಕ್ಷಿತ ಆನ್‌ಲೈನ್ ಸೇವೆ ಅತ್ಯಗತ್ಯವಾಗಿದ್ದು ಇದರ ಸಾಧಕ, ಬಾಧಕಗಳ ಕುರಿತು ಅರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿ, ಸಿಬ್ಬಂದಿ ಮುಂದಾಗುವಂತೆ ತಿಳಿಸಿದರು.ಸೈಬರ್ ಕ್ರೈಮ್ ಎಸಿಪಿ ಜೆ.ರಘು‌ ಮಾತನಾಡಿ, ಇಂದು ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಆರ್ಥಿಕ ಅಪರಾಧ, ಲೈಂಗಿಕ ಕಿರುಕುಳ‌ದಂತಹ ಅಪರಾಧಗಳು ಸೇರಿದಂತೆ ಅನೇಕ ಅಪರಾಧಗಳು ಅಂತರ್ಜಾಲದ ಮೂಲಕ ನಡೆಯುತ್ತಿವೆ. ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಥರ್ಡ್‌ ಪಾರ್ಟಿ ಆ್ಯಪ್‌ಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೂ‌ ಮುಂಚೆ ಯೋಚಿಸಬೇಕು ಎಂದು ಸಲಹೆ ನೀಡಿದರು.ಸೈಬರ್‌ ಕ್ರೈಂ ಅಪರಾಧಗಳ ಸಂದರ್ಭದಲ್ಲಿ ಆರೋಪಿತನು ತನ್ನ ಗುರುತನ್ನು‌ ಮರೆ ಮಾಚಿರುತ್ತಾನೆ. ಅಲ್ಲದೇ ವ್ಯಾಪ್ತಿ‌ ಮೀರಿದ‌ ಪ್ರದೇಶಗಳಿಂದ ವಂಚನೆ‌ ಮಾಡುತ್ತಿರುವುದರಿಂದ ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವುದು‌ ಸವಾಲಿನ ಹಾಗೂ ಅತ್ಯಂತ‌ ಕ್ಲಿಷ್ಟಕರವಾದ ಪ್ರಕರಣಗಳಾಗಿರುತ್ತವೆ ಎಂದ ಅವರು, ಎಂ.ಆಧಾರ, ಸೈಬರ್ ದೋಸ್ತ ಆ್ಯಪ್, ಮೋಬಿ ಆರ್ಮರ್‌ಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಬಳಸುವುದರ ಮೂಲಕ ಸೈಬರ್‌ ವಂಚನೆ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.ಸೈಬರ್‌ ವಂಚನೆ ಮಾಡುವವರು ಮೊಬೈಲ್‌ ಸಂಖ್ಯೆಯಿಂದ ಮಾತನಾಡದೆ ಅಂತರ್ಜಾಲ, ವಾಟ್ಸ ಆ್ಯಪ್ ಹಾಗೂ ಟೆಲಿಗ್ರಾಂ ಆ್ಯಪ್‌ ಮೂಲಕ ಸಂವಹನ ನಡೆಸುತ್ತಾರೆ. ಈ ಕುರಿತು ಜಾಗೃತರಾಗಿರಬೇಕು. ಯಾವುದೇ ಬ್ಯಾಂಕ್‌, ಕಂಪನಿ ಹೆಸರು ಹೇಳಿ ತಮ್ಮ ವೈಯಕ್ತಿಕ ಮಾಹಿತಿ ಪಡೆಯುವುದಿಲ್ಲ. ಇಂದು ಸೈಬರ್ ವಂಚಕರು ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದು ಈ‌ ಕುರಿತು ಪ್ರತಿಯೊಬ್ಬರು ಜಾಗೃತರಾಗಿರಬೇಕು. ಸೈಬರ್‌ ವಂಚನೆಗೆ ಒಳಗಾದಾಗ ಮೊದಲ ಒಂದು ಅಥವಾ ಎರಡು ಗಂಟೆಯೊಳಗಾಗಿ 1930 ಸಹಾಯವಾಣಿಗೆ ಕರೆ ಮಾಡಲು ಹೇಳಿದರು.ಎನ್.ಐ.ಸಿ ಜಿಲ್ಲಾ‌ ಸಂಯೋಜಕ ಶಿರೀಷ್ ಖಡಗದಕೈ ಹಾಗೂ ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜುನ ಯಾದವಾಡ, ಇಂಟರ್ನೆಟ್ ಅನ್ನು ಮಾಹಿತಿ‌ ಹಂಚಿಕೊಳ್ಳಲು ಪರಸ್ಪರ ಸಂವಹನಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇಂಟರ್ನೆಟ್ ಮೂಲಕ ವೈರಸ್ ಅಪಾಯ, ಹಣಕಾಸಿನ ವಂಚನೆಗಳು, ದಾರಿ ತಪ್ಪಿಸುವ ಮಾಹಿತಿ ಮುಂತಾದ ಅಪಾಯಗಳನ್ನು ನಾವು ನೋಡಬಹುದಾಗಿದೆ. ಅಂತರ್ಜಾಲ‌ ಬಳಕೆ ಸಂದರ್ಭದಲ್ಲಿ ಅತೀ ಜಾಗರೂಕರಾಗಿರಬೇಕು. ಯಾವುದೇ ಸಂದರ್ಭದಲ್ಲೂ ತಮ್ಮ‌ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಂತೆ ತಿಳಿಸಿದರು. ಫಿಶಿಂಗ್ ವೆಬ್‌ಸೈಟ್ ಅಧಿಕೃತ ಬ್ಯಾಂಕ್ ವೆಬ್ ಸೈಟ್ ಮಾದರಿಯಲ್ಲೇ ಇದ್ದು ಕೆಲವು ವ್ಯತ್ಯಾಸ ಇರುತ್ತದೆ. ಹಾಗಾಗಿ ವೆಬ್ ಸೈಟ್ ಬಗ್ಗೆ ಅಧಿಕೃತ ಮಾಹಿತಿ ಪಡೆದು ಖಚಿತಪಡಿಸಿಕೊಂಡ ಬಳಿಕ ಮಾತ್ರ ಪ್ರವೇಶಿಸಬೇಕು. ಡಿಜಿಟಲ್ ಅರೆಸ್ಟ್ ಎಂಬುದು ಇಂದು ಹೆಚ್ಚು ಕೇಳಿ ಬರುತ್ತಿದೆ. ಇದರಲ್ಲಿ ವಂಚಕರು ಕರೆ ಮಾಡಿ ಸಂವಹನ‌ ನಡೆಸುವ‌ ಮೂಲಕ ವಂಚಿಸಲು‌ ಪ್ರಯತ್ನಿಸುವರು. ಈ ವೇಳೆ ತಮ್ಮ‌ ಹತ್ತಿರದ‌ ಪೊಲೀಸ್ ಠಾಣೆಗೆ ತೆರಳಿ ಈ‌ ಕುರಿತು ದೂರು ದಾಖಲಿಸಬೇಕು. ಅಪರಿಚಿತ ಲಿಂಕ್, ನಕಲಿ ಪ್ರೊಫೈಲ್ ಬಗ್ಗೆ ಎಚ್ಚರವಿರಲಿ. ಅಸುರಕ್ಷಿತ ಲಿಂಕ್, ಮೇಲ್ ಸಂದೇಶಗಳಿಗೆ ಪ್ರತಿಕ್ರಿಯಿಸಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.ಡಿಜಿಟಲ್ ಬಂಧನ ಹಗರಣದಲ್ಲಿ, ವಂಚಕರು ತಮ್ಮ ಇಂಟರ್‌ನೆಟ್ ಬಳಕೆದಾರನು ವಂಚಿಸಲು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಅಂತಹ ಯಾವುದೇ ಮಾಹಿತಿ ಬಂದರೆ ಸೈಬರ್ ಸಹಾಯವಾಣಿಗೆ ವರದಿ ಮಾಡಬೇಕು. ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಎನ್ನುವುದು ಆನ್‌ಲೈನ್ ವಂಚನೆಯಾಗಿದೆ. ಇದರಲ್ಲಿ ಇಂಟರ್ನೆಟ್ ಬಳಕೆದಾರರ ಹಣವನ್ನು ವಂಚಿಸುತ್ತಾರೆ. ವಂಚನೆ ಸಂದರ್ಭದಲ್ಲಿ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ಸಹಾಯವಾಣಿಗೆ ದೂರು ದಾಖಲಿಸಿದ ನಂತರದ 24 ಗಂಟೆಯಲ್ಲಿ ಎಸ್.ಎಂ.ಎಸ್. ಮೂಲಕ ಸ್ವೀಕರಿಸಿದ ಸ್ವೀಕೃತ ಸಂಖ್ಯೆಯೊಂದಿಗೆ ಸೈಬರ್ ಸೆಲ್‌ನಲ್ಲಿ ಎಫ್ಐಆರ್‌ ದಾಖಲಿಸಬೇಕು ಎಂದರು.ಕಾರ್ಯಾಗಾರದಲ್ಲಿ ಪೊಲೀಸ್ ಅಧಿಕಾರಿ ಬಿ.ಆರ್.ಗಡ್ಡೇಕರ, ಲೀಡ್ ಬ್ಯಾಂಕ್ ಮ್ಯಾನೇಜರ್‌ ಪ್ರಕಾಶ‌‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

Share this article